Advertisement

ದ.ಕ. ಜಿಲ್ಲೆ: ಹೆಚ್ಚಿನ ಮಳೆಹಾನಿ ಪರಿಹಾರಕ್ಕೆ ಕ್ರಮ 

12:23 PM Aug 20, 2018 | Team Udayavani |

ಬೆಳ್ತಂಗಡಿ/ ಸುಬ್ರಹ್ಮಣ್ಯ: ಮಳೆಯಿಂದ ಮನೆ, ರಸ್ತೆ ಹಾನಿ ಕುರಿತು ಶಾಸಕರು ವರದಿ ಸಿದ್ಧ ಮಾಡಿ ಸರಕಾರಕ್ಕೆ ಸಲ್ಲಿಸಬೇಕು. ಕೊಡಗಿನ ಮಳೆಹಾನಿ ಪರಿಹಾರಕ್ಕೆ ಸಿಎಂ ಸಮ್ಮತಿಸಿದ್ದು, ದ.ಕ. ಜಿಲ್ಲೆಗೂ ವಿಸ್ತರಿಸುವ ಕುರಿತು ತಿಳಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

Advertisement

ರವಿವಾರ ಬೆಳ್ತಂಗಡಿ ತಾಲೂಕಿನ ಮಳೆಹಾನಿ ವೀಕ್ಷಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸಾಕಷ್ಟು ಜೀವಹಾನಿ ಜತೆಗೆ ನಷ್ಟವೂ ಸಂಭವಿಸಿದೆ. ಇದು ಸುಳ್ಯ ತಾಲೂಕಿಗೂ ವಿಸ್ತರಿಸಿದ್ದು, ಈ ಭಾಗದಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಹಾನಿ ಆಗಿದ್ದರೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಿಂದ ಮನೆ ಕೊಡಿಸಲಾಗುವುದು. ಗ್ರಾಮೀಣಾಭಿವೃದ್ಧಿ, ಸಾರಿಗೆ ಸಚಿವರ ಜತೆಗೆ ಚರ್ಚಿಸಿ ರಸ್ತೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿರಾಡಿ, ಸಂಪಾಜೆ ಘಾಟಿಗಳಲ್ಲಿ ಸಂಚಾರ ಸ್ಥಗಿತವಾಗಿದ್ದು, ಚಾರ್ಮಾಡಿ ಮೇಲೆ ಒತ್ತಡ ಬೀಳುತ್ತಿದೆ. ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿ, ಭೈರಾಪುರ-ಶಿಶಿಲ, ಸಂಸೆ-ದಿಡುಪೆ ರಸ್ತೆಯ ಕುರಿತು ಕ್ರಮ, ಕಸ್ತೂರಿ ರಂಗನ್‌ ವರದಿ ಜಾರಿಯಿಂದ ಆಗುವ ತೊಂದರೆ ಕುರಿತು ಶಾಸಕ ಹರೀಶ್‌ ಪೂಂಜಾ ಸಚಿವರ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಘಾಟಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಚಿಂತನೆ ಕೇಂದ್ರದ ಮುಂದಿದೆ. ಈ ಕುರಿತು ಸಚಿವ ನಿತಿನ್‌ ಗಡ್ಕರಿ ಗಮನ ಹರಿಸಿದ್ದಾರೆ. ಶಿರಾಡಿ ಘಾಟಿ ಸುರಂಗ ಮಾರ್ಗದ ಪ್ರಸ್ತಾವ ಇದೆ. ಮಂಗಳೂರು ಸಂಪರ್ಕ ರಸ್ತೆಗಳ ಕುರಿತು ವಿಶೇಷ ಗಮನ ವಹಿಸಲಾಗುತ್ತಿದೆ. ಭೈರಾಪುರ ರಸ್ತೆಯ ಕುರಿತು ನಾನು ಮುಖ್ಯಮಂತ್ರಿ ಆಗಿರುವಾಗ ಪ್ರಸ್ತಾವನೆ ಕಳುಹಿಸಿದ್ದೆ ಎಂದರು.

ಕಸ್ತೂರಿರಂಗನ್‌ ವರದಿ ಕುರಿತಂತೆ ರಾಜ್ಯದಿಂದ ಅಭಿಪ್ರಾಯ ಬಂದಿಲ್ಲ ಎಂಬ ಕಾರಣಕ್ಕೆ ಅದರ ದಿನಾಂಕ ವಿಸ್ತರಿಸಲಾಗಿದೆ. ಅದನ್ನು ಪ್ರಧಾನಿಗೂ ತಿಳಿಸ ಲಾಗಿದ್ದು, ಜನರಿಗೆ ತೊಂದರೆಯಾಗದಂತೆ  ಅನುಷ್ಠಾನಗೊಳಿಸುವ ಚಿಂತನೆ ಇದೆ. ಪರಿಸರ ಹಾಗೂ ಅರಣ್ಯ ಕಾನೂನು ತೊಡಕು ನಿವಾರಣೆ ಕಷ್ಟ. ಅದನ್ನು ಎನ್‌ಜಿಟಿಯೂ ಎಚ್ಚರಿಕೆಯಿಂದ ಗಮನಿಸುತ್ತದೆ ಎಂದರು. ತಾಲೂಕಿನ ಒಟ್ಟು ನಷ್ಟದ ಕುರಿತು ವರದಿ ನೀಡುವಂತೆ ತಹಶೀಲ್ದಾರ್‌ ಮದನ್‌ ಮೋಹನ್‌ ಅವರಿಗೆ ಸಚಿವರು ಸೂಚನೆ ನೀಡಿದರು.

Advertisement

ಕಲ್ಮಕಾರಿಗೂ ಭೇಟಿ
ಸಚಿವ ಡಿ.ವಿ.ಎಸ್‌. ರವಿವಾರ ಕೊಡಗು-ದ.ಕ. ಗಡಿಯ ಕಲ್ಮಕಾರು ಭಾಗದಲ್ಲಿ ಭೂಕುಸಿತ ಸಂಭವಿಸಿದ ಸ್ಥಳ ಹಾಗೂ ಸುಬ್ರಹ್ಮಣ್ಯ ನೆರೆ ಸಂತ್ರಸ್ತ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. 

ಸಂಸದ ನಳಿನ್‌, ಶಾಸಕ ಅಂಗಾರ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್‌ ವಳಲಂಬೆ, ಪ್ರಧಾನ ಕಾರ್ಯದರ್ಶಿ ಕಿಶೋರ್‌ ಶಿರಾಡಿ, ಮಾಜಿ ಜಿ.ಪಂ. ಸದಸ್ಯ ವೆಂಕಟ್‌ ವಳಲಂಬೆ, ತಾ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಸುಬ್ರಹ್ಮಣ್ಯ ಬಿಜೆಪಿ ಅಧ್ಯಕ್ಷ ದಿನೇಶ್‌ ಸಂಪ್ಯಾಡಿ, ದಿನೇಶ್‌ ಬಿ.ಎನ್‌., ಸುಬ್ರಹ್ಮಣ್ಯ ಭಟ್‌ ಮಾನಾಡು ಉಪಸ್ಥಿತರಿದ್ದರು.

ಉಪ್ಪಿನಂಗಡಿಗೂ ಭೇಟಿ 
ಸಚಿವ ಡಿವಿಎಸ್‌ ಅವರು ಉಪ್ಪಿನಂಗಡಿಗೂ ಭೇಟಿ ನೀಡಿ ನೆರೆಹಾನಿ ಪರಿಶೀಲಿಸಿದರು. ಮಳೆಹಾನಿಯ ಬಗ್ಗೆ ಅಧ್ಯಯನ ನಡೆಸಿ ಕೇರಳ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ನೀಡುವ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಲಿದೆ ಎಂದರು. 

ಸಂಸದ ನಳಿನ್‌ , ಶಾಸಕ ಸಂಜೀವ ಮಠಂದೂರು, ಜಿ.ಪಂ. ಸದಸ್ಯೆ ಶಯನಾ ಜಯಾನಂದ್‌, ತಾ.ಪಂ. ಸದಸ್ಯರಾದ ಮುಕುಂದ ಗೌಡ, ಸುಜಾತಾ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. 

ಸಚಿವರು ಉಪ್ಪಿನಂಗಡಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ದೇಗುಲ ವ್ಯವಸ್ಥಾಪನ ಸಮಿತಿಯ ಸದಸ್ಯ ಡಾ| ರಾಜಾರಾಮ ಕೆ.ಬಿ. ವ್ಯವಸ್ಥಾಪಕ ವೆಂಕಟೇಶ್‌ ರಾವ್‌ ಸಚಿವರನ್ನು ಸ್ವಾಗತಿಸಿದರು.

ಜೋಡುಪಾಲಕ್ಕೆ ಭೇಟಿ
ಗುಡ್ಡ ಕುಸಿದು ಹಾನಿಗೀಡಾದ ಜೋಡುಪಾಲಕ್ಕೆ ಮತ್ತು ಪರಿಹಾರ ಕೇಂದ್ರಗಳಿಗೆ ಕೇಂದ್ರ ಸಚಿವ ಡಿವಿಎಸ್‌ ರವಿವಾರ ಭೇಟಿ ನೀಡಿದರು. ಕೊಡಗಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸರಕಾರವು ಮುಂದಿನ ದಿನಗಳಲ್ಲಿ ಪುನರ್‌ ವಸತಿಗೆ ಸಹಕಾರ ನೀಡಲಿದೆ ಎಂದರು.

ರೇಷನ್‌ ಅಕ್ಕಿ ಬಳಸಲು ಸೂಚನೆ
ಅರಂತೋಡು, ಕಲ್ಲುಗುಂಡಿ ಪರಿಸರದ ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿ, ಸಹಾಯವಾಗಿ ಬೇರೆ ಬೇರೆ ಬ್ರ್ಯಾಂಡ್‌ಗಳ ಅಕ್ಕಿ ಬಂದಿರಬಹುದು. ಅದನ್ನು ಮಿಶ್ರ ಮಾಡಿ ಅನ್ನ ತಯಾರಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೊಡಗಿನಲ್ಲಿ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಇಲ್ಲಿನ ಸಂತ್ರಸ್ತ ಶಿಬಿರಗಳಿಗೆ ಸರಕಾರದ ರೇಷನ್‌ ಅಕ್ಕಿ ತರಿಸಿ ನೀಡುವಂತೆ ಸೂಚಿಸಿದರು.

ಪ್ರತಿ ದಿನ ಬೆಳಗ್ಗೆ, ಸಂಜೆ ಆರೋಗ್ಯ ತಪಾಸಣೆ ನಡೆಸಬೇಕು. ಅಗತ್ಯ ಬಿದ್ದರೆ ಸುಳ್ಯ ಆಸ್ಪತ್ರೆಗೆ ದಾಖಲಿಸಬೇಕು. ಯಾವುದೇ ಕಾರಣಕ್ಕೆ ಹಳೆ ಉಡುಪುಗಳನ್ನು ಬಳಸಬೇಡಿ, ಹೊಸತು ತರಿಸಿ. ಅಗತ್ಯ ಬಿದ್ದರೆ ಅದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಎಸ್‌. ಅಂಗಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.