Advertisement

ದ.ಕ.; 1,073 ವಕ್ಫ್ ಆಸ್ತಿಗಳ ಇಂದೀಕರಣ ಪೂರ್ಣ: ಶಾಫಿ

01:22 AM Feb 20, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,782 ವಕ್ಫ್ ಆಸ್ತಿಗಳಿದ್ದು, ಈ ಪೈಕಿ 1,073 ಆಸ್ತಿಗಳನ್ನು ಇಂದೀಕರಣ (ಪಹಣಿ/ ಆರ್‌ಟಿಸಿ) ಮಾಡಲಾಗಿದ್ದು, ಈ ಮೂಲಕ ಈ ಆಸ್ತಿಗಳು ಪರಭಾರೆ ತಡೆಯಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್‌.ಕೆ. ಮುಹಮ್ಮದ್‌ ಶಾಫಿ ಸಅದಿ ತಿಳಿಸಿದ್ದಾರೆ.

Advertisement

ಅವರು ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನ್ನೂ 700 ಆಸ್ತಿಗಳು ಬಾಕಿ ಇದ್ದು, ಅವುಗಳ ಇಂಧೀಕರಣ ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯ ಲಾಗಿದೆ ಎಂದರು.

ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಿ, 21 ಸಂಸ್ಥೆಗಳಿಗೆ 2.68 ಕೋಟಿ ರೂ. ಧನ ಸಹಾಯ ಮಂಜೂರು ಮಾಡಿ ಆವರಣ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮದ್ರಸಾ ಆಧುನೀಕರಣಕ್ಕಾಗಿ 3 ವಕ್ಫ್ ಸಂಸ್ಥೆಗಳಿಗೆ 30 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿಗಳ ಜನ್‌ವಿಕಾಸ್‌ ಯೋಜನೆಯಡಿ ಕರ್ನಾಟಕಕ್ಕೆ 75 ಕೋಟಿ ರೂ. ಅನುದಾನ ಮಂಜೂರಾಗಿದೆ. ದ.ಕ. ಜಿಲ್ಲೆಯಲ್ಲಿ ಮಂಗಳೂರಿನ 2, ಬಂಟ್ವಾಳ ತಾಲೂಕಿನ ಮಿತ್ತೂರು ಮಸೀದಿಗೆ 25.33 ಕೋ.ರೂ. ಮಂಜೂರಾಗಿದೆ ಎಂದರು.

ಹಿಜಾಬ್‌: ಸೌಹಾರ್ದ ಪರಿಹಾರಕ್ಕೆ ಯತ್ನ
ಹಿಜಾಬ್‌ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸುವ ಬಗ್ಗೆ ಈಗಾಗಲೇ ವಿವಿಧ ಧಾರ್ಮಿಕ ಮುಖಂಡರ ಜತೆ ಚರ್ಚೆ ನಡೆಸಿದ್ದು, ಈ ಮಾತುಕತೆ ಮುಂದುವರಿ ಸಲಾಗುವುದು ಎಂದು ಶಾಫಿ ತಿಳಿಸಿದ್ದಾರೆ.

Advertisement

ಹಿಜಾಬ್‌ ವಿವಾದ ಕುರಿತಂತೆ ಸಿದ್ಧಗಂಗಾ ಮಠದ ಸ್ವಾಮೀಜಿ ಸಹಿತ ಹಲವು ಧಾರ್ಮಿಕ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ಪೇಜಾವರ ಮಠದ ಸ್ವಾಮೀಜಿ ಜತೆ ಮಾತುಕತೆ ನಡೆಸಬೇಕೆಂದು ಮಂಗಳೂರಿಗೆ ಬಂದಿದ್ದೆ. ಆದರೆ ಸ್ವಾಮೀಜಿ ಬೆಂಗಳೂರಿಗೆ ಹೋಗಿರುವ ವಿಚಾರ ತಿಳಿಯಿತು. ಬೆಂಗಳೂರಿಗೆ ತೆರಳಿ ಅವರ ಜತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಉಡುಪಿಯಲ್ಲಿ ಹಿಜಾಬ್‌ ವಿವಾದದ ಪ್ರಾರಂಭಿಕ ಹಂತದಲ್ಲಿಯೇ ಸಂಬಂಧ ಪಟ್ಟವರ ಜತೆ ಮಾತನಾಡಿ ಸಮಸ್ಯೆಗೆ ಸೌಹಾರ್ದಯುತವಾಗಿ ಬಗೆಹರಿಸುವಂತೆ ಸಲಹೆ ಮಾಡಿದ್ದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next