Advertisement

ದ.ಕ. ಜಿಲ್ಲೆಯಲ್ಲಿ  10 ಇಂದಿರಾ ಕ್ಯಾಂಟೀನ್‌: ರೈ

10:24 AM Jan 27, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ 10 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದ್ದು ಶೀಘ್ರ ಕಾರ್ಯಾರಂಭಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ನೆಹರೂ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣಗೈದು ಅವರು ಗಣ ರಾಜ್ಯೋತ್ಸವ ಸಂದೇಶ ನೀಡಿದರು. ಜಿಲ್ಲೆಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ ಹಾಗೂ ವಿದ್ಯಾಸಿರಿ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದರು.

ದ.ಕ. ಜಿಲ್ಲೆಯ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು 7 ಯೋಜನೆ ಗಳನ್ನು ಅನುಷ್ಠಾನ ಮಾಡಲಾಗಿದೆ. 368 ಕೊಳವೆ ಬಾವಿಗಳ ರಚನೆ, 61 ಕಿರು ನೀರು ಯೋಜನೆಗಳ ಮೂಲಕ ನೀರಿನ ಬವಣೆಗೆ ಮುಕ್ತಿ ನೀಡಲಾಗಿದೆ. 70 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ 195.14 ಕೋ.ರೂ. ವೆಚ್ಚ ಮಾಡಲಾಗಿದೆ ಎಂದರು.

408 ಹೊಸ ಬಸ್‌
ಕೆಎಸ್‌ಆರ್‌ಟಿಸಿ ಮೂಲಕ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 408 ಬಸ್‌ಗಳನ್ನು ಹೊಸದಾಗಿ ಸೇರ್ಪಡೆ ಗೊಳಿಸಲಾಗಿದೆ. 17.89 ಕೋ.ರೂ. ವೆಚ್ಚದಲ್ಲಿ 5 ಬಸ್‌ ನಿಲ್ದಾಣಗಳ ಅಭಿವೃದ್ಧಿಯಾಗಿದೆ. ಜಿಲ್ಲೆಯಲ್ಲಿ ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ 2 ಲಕ್ಷ ಬಸ್‌ ಪಾಸ್‌ಗಳನ್ನು ವಿತರಿಸಿದೆ ಎಂದರು.

ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿ ರುವ ಕೃಷಿ ಭಾಗ್ಯ ಯೋಜನೆಯಿಂದ ಜಿಲ್ಲೆಯ ರೈತರಿಗೆ ಅದರಲ್ಲೂ ಭತ್ತ¤ದ ಕೃಷಿಗೆ ಅನುಕೂಲವಾಗಿದೆ. ಸಾಲ ಮನ್ನಾ ಯೋಜನೆಯಲ್ಲಿ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಬೆಳೆಸಾಲಗಳನ್ನು ಮನ್ನಾ ಮಾಡ ಲಾಗಿದ್ದು ಜಿಲ್ಲೆಯಲ್ಲಿ 65,518 ರೈತರ 296.65 ಕೋ.ರೂ. ಸಾಲ ಮನ್ನಾ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ವರೆಗಿನ ಅಲ್ಪಾವಧಿ ಸಾಲ ಹಾಗೂ 10 ಲಕ್ಷ ರೂ. ವರೆಗಿನ ದೀರ್ಘಾವಧಿ ಸಾಲ ವಿತರಣೆ ಮಾಡಲಾಗುತ್ತಿದ್ದು ದ.ಕ. ಜಿಲ್ಲೆಯಲ್ಲಿ ಒಟ್ಟು 3,23,127 ರೈತರು ಈ ಸಾಲ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಟ್ಟು 3153 ಕೋ.ರೂ. ಸಾಲ ವಿತರಿಸಲಾಗಿದೆ ಎಂದವರು ಹೇಳಿದರು.

Advertisement

ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಜೆ.ಆರ್‌. ಲೋಬೋ, ಬಿ.ಎ. ಮೊದಿನ್‌ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಕವಿತಾ ಸನಿಲ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. 

ಪ್ರಮುಖ ಅಂಶಗಳು
33 ಸರಕಾರಿ ಆಸ್ಪತ್ರೆಗಳಿಗೆ 33 ಹೊಸ ಕಟ್ಟಡಗಳ ನಿರ್ಮಾಣ
ರಸ್ತೆಗಳ ನಿರ್ಮಾಣ, ನಿರ್ವಹಣೆಗೆ 442.97 ಕೋ.ರೂ. ವಿನಿಯೋಗ
ಹಾಲು ಪ್ರೋತ್ಸಾಹಧನ ಯೋಜನೆಯಲ್ಲಿ 1,52,334 ಹೈನುಗಾರರಿಗೆ 126.42 ಕೋ.ರೂ. ಪ್ರೋತ್ಸಾಹಧನ
ಪಶುಭಾಗ್ಯ ಯೋಜನೆಯಲ್ಲಿ 1,523 ರೈತರಿಗೆ ಸಹಾಯಧನ; 2.80 ಕೋ.ರೂ. 
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ 376.76 ಕೋ.ರೂ. ವೆಚ್ಚ 
94ಸಿಯಲ್ಲಿ  37,883 ಅರ್ಜಿಗಳನ್ನು ಹಾಗೂ 94ಸಿಸಿಯಲ್ಲಿ 10,309 ಅರ್ಜಿಗಳನ್ನು ಪರಿಶೀಲಿಸಿ ಹಕ್ಕುಪತ್ರ ನೀಡಿಕೆ

Advertisement

Udayavani is now on Telegram. Click here to join our channel and stay updated with the latest news.

Next