Advertisement

ವೆಸ್ಟರ್ನ್-ಸದರ್ನ್ ಓಪನ್‌ ಟೆನಿಸ್‌; ಆತಂಕದಿಂದ ಪಾರಾದ ಜೊಕೋವಿಕ್‌

07:49 PM Aug 25, 2020 | mahesh |

ನ್ಯೂಯಾರ್ಕ್‌: ವೆಸ್ಟರ್ನ್-ಸದರ್ನ್ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅಗ್ರ ಆಟಗಾರರಾದ ನೊವಾಕ್‌ ಜೊಕೋವಿಕ್‌, ಆ್ಯಂಡಿ ಮರ್ರೆ, ಸೆರೆನಾ ವಿಲಿಯಮ್ಸ್‌, ನವೋಮಿ ಒಸಾಕಾ ಆತಂಕದಿಂದ ಪಾರಾಗಿ 16ರ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹಾಲಿ ವನಿತಾ ಚಾಂಪಿಯನ್‌ ಮ್ಯಾಡಿಸನ್‌ ಕೀಸ್‌, ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಆಘಾತಕಾರಿ ಸೋಲನುಭವಿಸಿದ್ದಾರೆ.

Advertisement

ಸೋಮವಾರ ರಾತ್ರಿ ನಡೆದ ಮುಖಾಮುಖಿಯಲ್ಲಿ ವಿಶ್ವದ ನಂ.1 ಖ್ಯಾತಿಯ ಜೊಕೋವಿಕ್‌ ಲಿಥುವೇನಿಯಾದ ರಿಕಾರ್ಡಾಸ್‌ ಬೆರಂಕಿಸ್‌ ವಿರುದ್ಧ 7-6 (7-2), 6-4 ಅಂತರದ ಜಯ ಸಾಧಿಸಿದರು. ಮೊದಲ ಸುತ್ತಿನ ಬೈ ಪಡೆದಿದ್ದ ಸರ್ಬಿಯನ್‌ ಆಟಗಾರ ಇನ್ನು ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ಸವಾಲನ್ನು ಎದುರಿಸಲಿದ್ದಾರೆ.

ದ್ವಿತೀಯ ಶ್ರೇಯಾಂಕದ ಡೊಮಿನಿಕ್‌ ಥೀಮ್‌ ಮತ್ತು 5ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೇವ್‌ ಕೂಟದಿಂದ ಹೊರಬಿದ್ದಿದ್ದಾರೆ. ಥೀಮ್‌ ಅವರನ್ನು ಸರ್ಬಿಯಾದ ಫಿಲಿಪ್‌ ಕ್ರಾಜಿನೋವಿಕ್‌ 6-2, 6-1ರಿಂದ ಮಣಿಸಿದರೆ, ಜ್ವೆರೇವ್‌ ಅವರನ್ನು ಬ್ರಿಟನ್ನಿನ ಆ್ಯಂಡಿ ಮರ್ರೆ 3 ಸೆಟ್‌ಗಳ ಹೋರಾಟದ ಬಳಿಕ 6-3, 3-6, 7-5ರಿಂದ ಹಿಮ್ಮೆಟ್ಟಿಸಿದರು.

ಹಾಲಿ ಚಾಂಪಿಯನ್‌ ಔಟ್‌
ಕಳೆದ ಬಾರಿಯ ವನಿತಾ ಚಾಂಪಿಯನ್‌ ಮ್ಯಾಡಿಸನ್‌ ಕೀಸ್‌ ಸೋತು ಹೊರಬಿದ್ದದ್ದು ಸೋಮವಾರ ರಾತ್ರಿಯ ಅಚ್ಚರಿಯ ಫ‌ಲಿತಾಂಶವೆನಿಸಿದೆ. ಅವರನ್ನು ಟ್ಯುನೀಶಿಯಾದ ಓನ್ಸ್‌ ಜಾಬರ್‌ 6-4, 6-1ರಿಂದ ಪರಾಭವಗೊಳಿಸಿದರು. ಸೆರೆನಾ ವಿಲಿಯಮ್ಸ್‌ಗೆ ನೆದರ್ಲೆಂಡ್ಸ್‌ನ ಎಡಗೈ ಆಟಗಾರ್ತಿ ಅರಾಂತ್ಸಾ ರುಸ್‌ ಭಾರೀ ಬೆವರಿಳಿಸಿದರು. ಅಂತಿಮವಾಗಿ ಸೆರೆನಾ ಕೈ ಮೇಲಾಯಿತು. ಅವರು 7-6 (8-6), 3-6, 7-6 (7-0) ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. 2012ರ ಬಳಿಕ ಸೆರೆನಾ ಆಡಿದ ಸುದೀರ್ಘ‌ ಪಂದ್ಯ ಇದಾಗಿದೆ. ಇದು 2 ಗಂಟೆ, 48 ನಿಮಿಷಗಳ ತನಕ ಸಾಗಿತು. ಸೆರೆನಾ ಅವರ ಮುಂದಿನ ಎದುರಾಳಿ ಗ್ರೀಸ್‌ನ ಮರಿಯಾ ಸಕ್ಕರಿ.

ನವೋಮಿ ಒಸಾಕಾ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಮುಕೋವಾ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-7 (5-7), 6-4, 6-2 ಅಂತರದಿಂದ ಗೆದ್ದು ಬಂದರು. “ಆಲ್‌ ಜೆಕ್‌’ ಹಣಾಹಣಿಯೊಂದರಲ್ಲಿ ಪೆಟ್ರಾ ಕ್ವಿಟೋವಾ ಅವರನ್ನು ಮಾರೀ ಬೌಜ್ಕೋವಾ 2-6, 7-5, 6-2ರಿಂದ ಹಿಮ್ಮೆಟ್ಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next