Advertisement

ನೊವಾಕ್‌ ಜೊಕೋವಿಕ್‌ ವಿಂಬಲ್ಡನ್‌ ವೀರ: ಸತತ 4ನೇ ಪ್ರಶಸ್ತಿ

11:45 PM Jul 10, 2022 | Team Udayavani |

ಲಂಡನ್‌: ಸರ್ಬಿಯನ್‌ ಟೆನಿಸಿಗ ನೊವಾಕ್‌ ಜೊಕೋವಿಕ್‌ ಸತತ 4ನೇ ಸಲ ವಿಂಬಲ್ಡನ್‌ ಪ್ರಶಸ್ತಿಯನ್ನೆತ್ತಿ ತನಗಿಲ್ಲಿ ಯಾರೂ ಸಾಟಿ ಇಲ್ಲ ಎಂದು ಸಾರಿದ್ದಾರೆ.

Advertisement

ರವಿವಾರದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡು, 4ನೇ ಸೆಟ್‌ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದು ಪರಾಕ್ರಮ ಮೆರೆದರು. ಅಂತರ 4-6, 6-3, 6-4, 7-6 (7-3). ಇದು ಜೊಕೋ ಗೆದ್ದ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ.

ಸೆಮಿಫೈನಲ್‌ನಲ್ಲಿ ವಾಕ್‌ ಓವರ್‌ ಪಡೆದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಕಂಡ ನಿಕ್‌ ಕಿರ್ಗಿಯೋಸ್‌ಗೆ ಇಲ್ಲಿ ಯಾವುದೇ ಮ್ಯಾಜಿಕ್‌ ಸಾಧ್ಯವಾಗಲಿಲ್ಲ.

7ನೇ ವಿಂಬಲ್ಡನ್‌ ಪ್ರಶಸ್ತಿ
ಇದು 8ನೇ ವಿಂಬಲ್ಡನ್‌ ಫೈನಲ್‌ನಲ್ಲಿ ಜೊಕೋವಿಕ್‌ ಜಯಿಸಿದ 7ನೇ ಪ್ರಶಸ್ತಿ. ಅವರು ಸೋತದ್ದು ಒಂದು ಫೈನಲ್‌ನಲ್ಲಿ ಮಾತ್ರ. ಅದು 2013ರಷ್ಟು ಹಿಂದೆ. ಅಂದು ಜೊಕೋಗೆ ಆಘಾತವಿಕ್ಕಿದವರು ಬ್ರಿಟನ್‌ನವರೇ ಆದ ಆ್ಯಂಡಿ ಮರ್ರೆ.

ಜೊಕೋವಿಕ್‌ 2018, 2019 ಮತ್ತು 2021ರಲ್ಲಿ ಕಿರೀಟ ಏರಿಸಿಕೊಂಡು ಹ್ಯಾಟ್ರಿಕ್‌ ಸಾಧಿಸಿದ ಹೆಗ್ಗಳಿಕೆ ಯೊಂದಿಗೆ ಫೈನಲ್‌ ಆಡಲಿಳಿದಿದ್ದರು. ಕೋವಿಡ್‌ ಕಾರಣದಿಂದ 2020ರಲ್ಲಿ ವಿಂಬಲ್ಡನ್‌ ನಡೆದಿರಲಿಲ್ಲ.

Advertisement

ರವಿವಾರದ ಪರಾಕ್ರಮದೊಂದಿಗೆ 7 ಸಲ ವಿಂಬಲ್ಡನ್‌ ಟ್ರೋಫಿಯನ್ನೆತ್ತಿ ಪೀಟ್‌ ಸಾಂಪ್ರಸ್‌ ಅವರೊಂದಿಗೆ ಜೊಕೋ ಜಂಟಿ 2ನೇ ಸ್ಥಾನ ಅಲಂಕರಿಸಿದರು. ರೋಜರ್‌ ಫೆಡರರ್‌ 8 ಸಲ ಚಾಂಪಿಯನ್‌ ಆದದ್ದು ವಿಂಬಲ್ಡನ್‌ ದಾಖಲೆ.
ಇದು ಜೊಕೋವಿಕ್‌ ಆಡಿದ 32ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಇದೊಂದು ದಾಖಲೆ. 31 ಫೈನಲ್‌ಗ‌ಳಲ್ಲಿ ಆಡಿದ ರೋಜರ್‌ ಫೆಡರರ್‌ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next