Advertisement
ಹೌದು, ಉತ್ತರ ಕರ್ನಾಟಕ ಅದರಲ್ಲೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಈ ಹಬ್ಬವನ್ನು ಹಟ್ಟಿ ಹಬ್ಬ ಎಂದೇ ಕರೆಯುವುದುಂಟು. ಈ ಹಟ್ಟಿ ಹಬ್ಬದಂದು ರೈತನಿಗೆ ಕೃಷಿಯಲ್ಲಿ ಸಹಾಯಕ್ಕೆ ನಿಲ್ಲುವ ಜಾನುವಾರುಗಳಿಗೂ ಇಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ತಮಿಳುನಾಡಿನ ಜಲ್ಲಿಕಟ್ಟು, ಕರಾವಳಿಯ ಕಂಬಳ, ಮಧ್ಯ ಕರ್ನಾಟಕದ ಹೋರಿ ಬೆದರಿಸುವ ಸ್ಪರ್ಧೆ ಸೇರಿ ಅನೇಕ ಕಾರಣಗಳಿಗಾಗಿ ರಾಜ್ಯಾದ್ಯಂತ ಸುದ್ದಿಯಾಗಿರಬಹುದು. ಇಂತಹದೇ ಮಾದರಿಯ ಗೂಳಿಗಳ ಕಾಳಗ (ಹೋರಿ ಕಾದಾಟ) ಧಾರವಾಡ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಹಳ್ಳಿಗರು ಈ ವರ್ಷವೂ ಸಂಭ್ರಮದಿಂದ ಹೋರಿಗಳ ಕಾದಾಟಕ್ಕೆ ಸಜ್ಜಾಗಿದ್ದಾರೆ.
ಹೂವು, ಹಣ್ಣು, ಬಣ್ಣ, ಬಲೂನುಗಳಿಂದ ಎತ್ತುಗಳನ್ನು ಶೃಂಗರಿಸಿ ಅವುಗಳನ್ನು ಮೆರವಣಿಗೆ ಮಾಡುವುದು ಈ ಹಳ್ಳಿಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಉತ್ತರ ಕರ್ನಾಟಕದಲ್ಲಿ ಕಾರು ಹುಣ್ಣಿಮೆಯಲ್ಲಿ ಹೆಚ್ಚಾಗಿ ಜಾನುವಾರುಗಳ ಮೆರವಣಿಗೆ ಮಾಡುವ ಸಂಪ್ರದಾಯವಿದೆ. ಆದರೆ ಈ ಗ್ರಾಮಗಳಲ್ಲಿ ದೀಪಾವಳಿ (ಹಟ್ಟಿ ಹಬ್ಬ)ಗೆ ರೈತರ ಮಿತ್ರರಾಗಿ ಕೆಲಸ ನಿರ್ವಹಿಸುವ ಜಾನುವಾರುಗಳಿಗೂ ಪೂಜೆ ಸಲ್ಲುತ್ತದೆ. ಏನಿದು ಗೂಳಿ ಕಾದಾಟ?: ಈ ಗ್ರಾಮಗಳಲ್ಲಿ 10-15 ವರ್ಷಗಳ ವಯಸ್ಸಿನ ಹರೆಯದ ಗೂಳಿಗಳನ್ನ ಚೆನ್ನಾಗಿ ಮೇಯಿಸಿ ಕಾದಾಟಕ್ಕೆ ಇಳಿಸುವ ಸಂಪ್ರದಾಯವಿದೆ. ಗ್ರಾಮಗಳಲ್ಲಿನ ರೈತ ಯುವಕರು ಈ ಕಾದಾಟಕ್ಕಾಗಿ ವರ್ಷಪೂರ್ತಿಯಾಗಿ ತಮ್ಮ ಗೂಳಿ ಹೋರಿಗಳನ್ನ ಪೌಷ್ಟಿಕ ಆಹಾರ ತಿನ್ನಿಸಿ ಮೇಯಿಸಿ ಕಾದಾಟಕ್ಕೆ ಸಜ್ಜುಗೊಳಿಸುತ್ತಾರೆ. ಹಟ್ಟಿ ಹಬ್ಬದಂದು ಊರಿನಲ್ಲಿ ಎತ್ತುಗಳ ಮೆರವಣಿಗೆ ಮುಗಿಯುತ್ತಿದ್ದಂತೆ ಹೋರಿಗಳ ಕಾದಾಟಕ್ಕೆ ಅಖಾಡ ಸಜ್ಜಾಗುತ್ತದೆ. ನೂರಾರು ಯುವಕರು ತಾವು ಮೇಯಿಸಿದ ಹೋರಿಗಳನ್ನು ಶಕ್ತಿ ಪ್ರದರ್ಶನಕ್ಕೆ ಬಿಟ್ಟು ತಮ್ಮ ಮೀಸೆ ಮೇಲೆ ಕೈ ಹಾಕಿ ನಿಲ್ಲುವ ಸಂಪ್ರದಾಯ ಈ ಹಳ್ಳಿಗಳಲ್ಲಿದೆ. ಗೂಳಿ ಕಾದಾಟಕ್ಕೆ ಮೊದಲು ಸಣ್ಣ ಸಣ್ಣ ವಯಸ್ಸಿನ ಹೋರಿಗಳ ಕಾದಾಟ. ನಂತರ ಬಲಿಷ್ಠ ಗೂಳಿಗಳ ಕಾದಾಟ. ಈ ಕಾದಾಟದಲ್ಲಿ ಗೆದ್ದ ಹೋರಿಗೆ ಬಹದ್ದೂರ್ ಗಂಡು ಎನ್ನುವ ಬಿರುದಿನೊಂದಿಗೆ ಊರಿನಲ್ಲಿ ಮೆರವಣಿಗೆ ಗೌರವ ಸಲ್ಲುತ್ತದೆ.
Related Articles
Advertisement
ಹೆಚ್ಚುತ್ತಿದೆ ಕುತೂಹಲಅನ್ನದಾತರಿಗೆ ಹಟ್ಟಿ ಹಬ್ಬ ದೊಡ್ಡ ಹಬ್ಬ. ಅಂದು ತಮ್ಮೆಲ್ಲ ಪೂಜೆ ಪುನಸ್ಕಾರಗಳ ಮಧ್ಯೆಯೂ ಹೋರಿ ಕಾದಾಟದ ಮೋಜು, ಮಸ್ತಿಗೆ ಸಮಯ ಮೀಸಲಿಡುತ್ತಾರೆ. ಹಳ್ಳಿಗರಿಗೂ ಹೋರಿ ಕಾದಾಟ ನೋಡುವ ಕುತೂಹಲ ಪ್ರತಿವರ್ಷವೂ ಇದ್ದೇ ಇರುತ್ತದೆ. ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಈ ಹೋರಿ ಕಾಳಗ ಮಾತ್ರ ಯಾವುದೇ ದುರಂತ, ಆತಂಕ ಸೃಷ್ಟಿಸಿಲ್ಲ. ಇದು ಹಳ್ಳಿಗರ ಸಂಭ್ರಮಕ್ಕೆ ಮಾತ್ರ ಸಾಕ್ಷಿಯಾಗಿ ನಿಂತಿದೆ. ನಮ್ಮ ಎತ್ತು ನಮ್ಮ ಹೆಮ್ಮೆಯ ಪ್ರತೀಕ. ನಾವು ಸಣ್ಣವರಿದ್ದಾಗಿಂದಲೂ ಈ ಹೋರಿ ಕಾಳಗ ನಡೆದುಕೊಂಡು ಬಂದಿದೆ. ಎತ್ತುಗಳಿಗೂ ಬಲಿಷ್ಠ ಕಾದಾಟದ ವೇದಿಕೆ ಇದು. ಇದನ್ನು ಬಹಳ ಅಚ್ಚುಕಟ್ಟಿನಿಂದ ನಡೆಸಿಕೊಂಡು ಬರುತ್ತಿದ್ದೇವೆ.
– ಕಲ್ಲನಗೌಡ ಪಾಟೀಲ, ಬಾಡ ಗ್ರಾಮಸ್ಥ – ಬಸವರಾಜ ಹೊಂಗಲ್