Advertisement

ಸ್ವಿಚ್‌ ಒತ್ತಿದ್ದೇ ತಡ ಕಣ್ಮುಂದೆ ದೀಪಾವಳಿ!

09:07 AM May 22, 2019 | Sriram |

ಬಸವರಾಜ ಗುಂಡಿ ಒತ್ತುವ ಮೊದಲು ಒಂದು ಕ್ಷಣ ನನ್ನ ಕಡೆ ನೋಡಿದ. ನಾನು ತುಂಬು ಆತ್ಮವಿಶ್ವಾಸದಿಂದ ದೂರನಿಂತು ಆತನಿಗೆ-“ಓಕೆ ಮುಂದುವರಿಸು’ ಅನ್ನುತ್ತಾ ಹೆಬ್ಬೆರಳು ತೋರಿಸಿದೆ. ಆತ ಕಣ್ಣುಮುಚ್ಚಿ ಉಸಿರು ಬಿಗಿ ಹಿಡಿದು, ಬಲಗೈ ತೋರು ಬೆರಳಿಂದ ಗುಂಡಿ ಒತ್ತಿದ್ದಷ್ಟೇ ಗೊತ್ತು.

Advertisement

ಹೈಸ್ಕೂಲಿನಲ್ಲಿದ್ದಾಗ ನನಗೆ ವಿಜ್ಞಾನ ವಿಷಯದಲ್ಲಿ ಎಲ್ಲಿಲ್ಲದ ಆಸಕ್ತಿ ಇತ್ತು. ಅದಕ್ಕೆ ಕಾರಣ, ನಮ್ಮ ವಿಜ್ಞಾನ ಶಿಕ್ಷಕರಾದ ನಾರಾಯಣ ನಾವಡ ಸರ್‌. ಅವರು ತರಗತಿಯಲ್ಲಿ ಭಿನ್ನ ವಿಭಿನ್ನ ಪ್ರಯೋಗಗಳ ಮೂಲಕ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತಿದ್ದರು. ವಿಜ್ಞಾನ ವಿಷಯದಲ್ಲಿ ನನಗೆ ಯಾವ ಮಟ್ಟದಲ್ಲಿ ಅಭಿರುಚಿ ಮೂಡಿತ್ತೆಂದರೆ, ಮುಂದೆ ನಾನೂ ವಿಜ್ಞಾನಿಯಾಗಬೇಕು ಅಂತ ಪಣ ತೊಟ್ಟಿದ್ದೆ.

ನಾನಷ್ಟೇ ಅಲ್ಲ, ನಮ್ಮ ತರಗತಿಯಲ್ಲಿ ಅನೇಕರು ವಿಜ್ಞಾನಿಯಾಗುವ ಕನಸು ಕಂಡಿದ್ದರು. ಅದರಂತೆ ವಿಜ್ಞಾನದ ಕೆಲವು ಪ್ರಯೋಗಗಳನ್ನು ಮನೆಯಲ್ಲಿ ಮಾಡಿ ನೋಡಿ, ವಿಜ್ಞಾನದ ಕೌತುಕವನ್ನು ತಿಳಿದು ಪುಳಕಿತರಾಗುತ್ತಿದ್ದೆವು. ನಾವು 9ನೇ ತರಗತಿಯಲ್ಲಿದ್ದಾಗ ನಮಗೊಂದು ಪಾಠವಿತ್ತು. ಅದರಲ್ಲಿ, ವಿದ್ಯುತ್‌ ಆಯಸ್ಕಾಂತ ಒಂದು ಅವಾಹಕ ವಸ್ತುವಿನಿಂದ ಆವೃತ್ತವಾದ ವಾಹಕ ತಂತಿಯನ್ನು ಒಂದು ಕಬ್ಬಿಣದ ಮೊಳೆಗೆ ಸುತ್ತಿ, ಅದರ ಉಳಿದ ಎರಡು ತುದಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದರೆ ಆ ಕಬ್ಬಿನದ ತುಂಡು ಆಯಸ್ಕಾಂತದಂತೆ ವರ್ತಿಸಲಾರಂಭಿಸುತ್ತದೆ ಎಂಬ ವಿವರಣೆ ಇತ್ತು. ಈ ತಂತ್ರವನ್ನು ಗಣಿಗಾರಿಕೆಗಳಲ್ಲಿ, ಆಳವಾದ ಪ್ರದೇಶಗಳಲ್ಲಿ ಉಪಯೋಗಿಸಿ ಅದಿರುಗಳನ್ನು ಸೆಳೆಯುತ್ತಾರೆ ಎಂದು ನಾವಡ ಸರ್‌ ತಿಳಿಸಿದ್ದರು. ಅಷ್ಟೇ ಅಲ್ಲದೆ, ಬ್ಯಾಟರಿ ಸೆಲ… ಮುಖಾಂತರ ಕಬ್ಬಿಣದ ಚೂರುಗಳು ವಿದ್ಯುತ್‌ ಅಯಸ್ಕಾಂತಕ್ಕೆ ಆಕರ್ಷಣೆಗೊಳ್ಳುವುದನ್ನೂ ನಮಗೆ ತೋರಿಸಿಕೊಟ್ಟಿದ್ದರು.

ವಿಜ್ಞಾನಿಯಾಗಬೇಕೆಂದು ಹಪಹಪಿಸುತ್ತಿದ್ದ ನನಗೆ, ಇದೇ ಪ್ರಯೋಗವನ್ನು ನಾವು ಬೃಹತ್‌ ಪ್ರಮಾಣದಲ್ಲಿ ಮಾಡಿದರೆ ಹೇಗೆ? ಎನ್ನುವ ಆಲೋಚನೆ ಬಂತು. ಆ ಕ್ಷಣ ನೆನಪಾಗಿದ್ದು ಗೆಳೆಯ ಬಸವರಾಜ. ಆತ ಕೂಡ ನನ್ನಂತೆಯೇ ಏನನ್ನಾದರೂ ಸಾಧಿಸಬೇಕು ಅನ್ನುತ್ತಿದ್ದ ಸಾಹಸಿ. ಸರಿ, ಈ ಬೃಹತ್‌ ಕಾರ್ಯಾಚರಣೆಗೆ ಅವನ ಮನೆಯೇ ಸೂಕ್ತ ಪ್ರಯೋಗಾಲಯ ಅಂತ ನಿರ್ಧರಿಸಿದೆವು. ಆದರೆ, ನಮ್ಮ ಸಾಹಸವನ್ನು ನಾವಷ್ಟೇ ನೋಡಿದರೆ ಏನು ಬಂತು ಭಾಗ್ಯ? ಬೇರೆಯವರೂ ಅದನ್ನು ನೋಡಿ ನಮ್ಮ ಬೆನ್ನು ತಟ್ಟಬೇಡವೇ? ಅದಕ್ಕೆ ಅಕ್ಕಪಕ್ಕದ ಮನೆಗಳ ಹಿರಿ ಕಿರಿಯರನ್ನು ಒಟ್ಟುಗೂಡಿಸಿದೆವು. ನಮ್ಮ ಪ್ರಯೋಗ ಯಶಸ್ವಿಯಾದಾಗ ನಮ್ಮ ಬುದ್ಧಿವಂತಿಕೆಯನ್ನು ಪ್ರಶಂಸಿಸಿ ಚಪ್ಪಾಳೆ ತಟ್ಟಲಿ ಎಂದು ಅವರನ್ನೆಲ್ಲ ಕರೆದಿದ್ದೆವು.

ಮೊದಲು ಒಂದು ದಪ್ಪ ಕಬ್ಬಿಣದ ಮೊಳೆಗೆ ಇನ್ಸುಲೇಟರ್‌ ವೈರ್‌ ಅನ್ನು ಸುತ್ತಿದೆವು. ಉಳಿದ ಎರಡು ತುದಿಗಳನ್ನು ಇಸಿŒಪೆಟ್ಟಿಗೆಯ ಸ್ವಿಚ್‌ನ ರಂಧ್ರಗಳಿಗೆ ಸೇರಿಸಿದೆವು. ಅಲ್ಲಿ ನೆರೆದಿದ್ದ ಜನರೆಲ್ಲ ಓಹ್‌, ಇವರೇನು ಸಾಮಾನ್ಯರಲ್ಲ. ಭವಿಷ್ಯದಲ್ಲಿ ವಿಜ್ಞಾನಿಗಳಾಗುತ್ತಾರೆ. ಅಂತ ಹೊಗಳುತ್ತಾ ಇದ್ದರು. ಇನ್ನೇನು ಬಟನ್‌ ಒತ್ತಿದರೆ ಸಾಕು; ನಮ್ಮ ಈ ಅಯಸ್ಕಾಂತದ ಕಾರ್ಯಾರಂಭವಾಗಬೇಕು. ಎಲ್ಲರಿಂದ ಮೆಚ್ಚುಗೆಯ ಕರತಾಡನವಾಗಬೇಕು…

Advertisement

ಇಂಥ ಸಂದರ್ಭದಲ್ಲಿ, ಬಸವರಾಜ ಗುಂಡಿ ಒತ್ತುವ ಮೊದಲು ಒಂದು ಕ್ಷಣ ನನ್ನ ಕಡೆ ನೋಡಿದ. ನಾನು ತುಂಬು ಆತ್ಮವಿಶ್ವಾಸದಿಂದ ದೂರನಿಂತು ಆತನಿಗೆ- ಓಕೆ ಮುಂದುವರೆಸು ಅನ್ನುತ್ತಾ ಹೆಬ್ಬೆರಳು ತೋರಿಸಿದೆ. ಆತ ಕಣ್ಣುಮುಚ್ಚಿ ಉಸಿರು ಬಿಗಿ ಹಿಡಿದು, ಬಲಗೈ ತೋರು ಬೆರಳಿಂದ ಗುಂಡಿ ಒತ್ತಿದ್ದಷ್ಟೇ ಗೊತ್ತು. ಮುಂದಿನ ಸುಮಾರು 20 ನಿಮಿಷಗಳ ಕಾಲ ವಿದ್ಯುತ್‌ನದ್ದೇ ಅಬ್ಬರ. ಮನೆಯ ವಿದ್ಯುತ್‌ ವೈರುಗಳೆಲ್ಲ ದೀಪಾವಳಿಯ ಚಿಮಣಿಯಂತೆ ಬೆಳಗುತ್ತಿವೆ. ನಾವೆಲ್ಲ ಎಲ್ಲಿದ್ದೇವೆ, ಮುಂದೇನು ಮಾಡಬೇಕು ಅಂತನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಮನೆಯ ತುಂಬೆಲ್ಲ ವೈರು ಸುಟ್ಟು ಕರಕಲಾದ ವಾಸನೆ ತುಂಬಿ ಹೋಗಿತ್ತು.

ನಾವೆಲ್ಲ ಒಂದು ಸುರಕ್ಷಿತ ಮೂಲೆ ಸೇರಿ ಕತ್ತಲಲ್ಲೇ ಪರಸ್ಪರರನ್ನು ನೋಡುತ್ತಾ, ನಾನ್ಯಾರು, ನೀನ್ಯಾರು ಅಂತ ಖಚಿತಪಡಿಸಿಕೊಳ್ಳುತ್ತಿದ್ದೆವು. ಆದರೆ, ಬಸವರಾಜನ ಪತ್ತೆಯಿಲ್ಲ. ಅರ್ಧಗಂಟೆಯ ನಂತರ ನಾವೆಲ್ಲಾ ಹೊರ ಬಂದು, ಹುಡುಕಿದಾಗಲೇ ಗೊತ್ತಾಗಿದ್ದು, ಅವನು ಮನೆಯವರಿಂದ ಒದೆ ಬೀಳ್ಳೋದು ಗ್ಯಾರಂಟಿ ಅಂತ ಹೆದರಿ ಹೊರಗಡೆ ಓಡಿ ಹೋಗಿದ್ದ ವಿಷಯ. ಓಡಿ ಹೋದರೂ, ಹಿರಿಯರಿಂದ ಬೈಗುಳ ತಪ್ಪಲಿಲ್ಲ ಎಂಬುದು ಬೇರೆ ವಿಷಯ ಬಿಡಿ.

ಮಾರನೆಯ ದಿನ ನಮ್ಮ ಈ ಪ್ರಯೋಗ ವಿಫ‌ಲವಾಗಿದ್ದರ ಬಗ್ಗೆ ನಾವಡ ಸರ್‌ ಬಳಿ ಹೇಳಿದೆವು. ಅವರು ನಮ್ಮಿಬ್ಬರನ್ನೂ ತರಾಟೆಗೆ ತೆಗೆದುಕೊಂಡು ಸಿಕ್ಕಾಪಟ್ಟೆ ಬೈದರು. ಪುಣ್ಯಕ್ಕೆ ಯಾರಿಗೂ ಪ್ರಾಣ ಹಾನಿ ಆಗಿಲ್ಲ. ನೇರವಾಗಿ ವಿದ್ಯುತ್‌ ಸಂಪರ್ಕ ಕೊಟ್ಟಿದ್ದು ದೊಡ್ಡ ತಪ್ಪು.ಇನ್ಮುಂದೆ ಈ ಥರದ ಪ್ರಯೋಗಗಳನ್ನು ಮನೆಯಲ್ಲಿ ಮಾಡಲು ಹೋಗಬೇಡಿ. ಮಾಡುವುದಾದರೂ ಬಲ್ಲವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಿ ಎಂದು ನಮ್ಮ ತಪ್ಪಿನ ಅರಿವು ಮೂಡಿಸಿದರು.

-ಗುರುಶಾಂತಗೌಡ ಬಿ.

Advertisement

Udayavani is now on Telegram. Click here to join our channel and stay updated with the latest news.

Next