ನವದೆಹಲಿ: ಸಾರ್ವಜನಿಕ ವಲಯದ ಜನರಲ್ ಇನ್ಶೂರೆನ್ಸ್ ಕಂಪನಿಗಳ ಉದ್ಯೋಗಿಗಳಿಗೆ 2017ರ ಆಗಸ್ಟ್‌ನಿಂದ ಅನ್ವಯವಾಗುವಂತೆ ವೇತನವನ್ನು ಕೇಂದ್ರ ಸರ್ಕಾರ ಶೇ.12ರಷ್ಟು ಏರಿಕೆ ಮಾಡಿದೆ. ಈ ಮೂಲಕ ಒಂದು ವಾರ ಮೊದಲೇ ಅವರಿಗೆ ದೀಪಾವಳಿ ಸಿಹಿ ವಿತರಿಸಿದೆ.
ಅ.14ರಂದು ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಈ ಯೋಜನೆಯನ್ನು “ಜನರಲ್ ಇನ್ಶೂರೆನ್ಸ್ ತಿದ್ದುಪಡಿ ಯೋಜನೆ-2022′ ಎಂದು ಕರೆದಿದೆ.
ನ್ಯೂ ಇಂಡಿಯಾ ಅಶ್ಯೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್ , ಓರಿಯಂಟಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇನ್ಶೂರೆನ್ಸ್ ಉದ್ಯೋಗಿಗಳಿಗೆ 2017ರ ಆಗಸ್ಟ್ 1ರಿಂದ ಈ ವೇತನ ಪರಿಷ್ಕರಣೆ ಅನ್ವಯವಾಗಲಿದೆ. ಜತೆಗೆ ಅವರಿಗೆ ಐದು ವರ್ಷಗಳ ಅರಿಯರ್ (ಬಾಕಿ) ಕೂಡ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೇ 2022ರ ಆಗಸ್ಟ್‌ನಿಂದ ಮುಂದಿನ ವೇತನ ಪರಿಷ್ಕರಣೆಯು ಇನ್ಶೂರೆನ್ಸ್ ಕಂಪನಿ ಮತ್ತು ಉದ್ಯೋಗಿಯ ಕಾರ್ಯಕ್ಷಮತೆಯ ಮೇಲೆ ಆಧಾರವಾಗಿರುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ವೇತನ ಪರಿಷ್ಕರಿಸುವಂತೆ ಅನೇಕ ವರ್ಷಗಳಿಂದ ಜನರಲ್ ಇನ್ಶೂರೆನ್ಸ್ ಕಂಪನಿಗಳ ಉದ್ಯೋಗಿಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿದ್ದರು.
ಇದೀಗ 64 ತಿಂಗಳ ಕಾಯುವಿಕೆ ನಂತರ ಅದು ಈಡೇರಿದೆ. ಆದರೆ ಮುಂದಿನ ದಿನಗಳಲ್ಲಿ ಕಂಪನಿ ಮತ್ತು ಉದ್ಯೋಗಿಯ ಕಾರ್ಯಕ್ಷಮತೆ ಅನುಸರಿಸಿ ವೇತನ ಪರಿಷ್ಕರಣೆ ಜಾರಿಗೊಳಿಸಿರುವ ಕೇಂದ್ರದ ತೀರ್ಮಾನಕ್ಕೆ ಇನ್ಶೂರೆನ್ಸ್ ಕಂಪನಿಗಳ ಉದ್ಯೋಗಿಗಳ ಒಕ್ಕೂಟಗಳು ಅಸಮಾಧಾನ ವ್ಯಕ್ತಪಡಿಸಿವೆ.