ಕಾಪು : ತುಳುವರ ಕೃಷಿ ಪ್ರಧಾನವಾದ ಜೀವನ ಪದ್ಧತಿಯಲ್ಲಿ ದೀಪಾವಳಿ ನಿಜ ಅರ್ಥದ ಹಬ್ಬ ಅಥವಾ ಪರ್ಬ. ಕೃಷಿ – ಪಶು – ಧಾನ್ಯ ಅತಿಶಯ ಆಶಯದ ಸೊಡರ ಹಬ್ಬ. ದೀಪಾವಳಿ ಹಬ್ಬಕ್ಕೂ ಪ್ರಕೃತಿಗೂ ಅವಿನಾಭಾವವಾದ ಸಂಬಂಧವಿದೆ. ಪ್ರಕೃತಿಗೂ ಗೋವಿಗೂ ನಿಕಟ ಸಮಪರ್ಕವಿದೆ. ಈ ಕಾರಣದಿಂದಾಗಿ ದೀಪಾವಳಿಯ ಪಾಡ್ಯದಂದು ನಡೆಸುವ ಗೋಪೂಜೆ ಅತ್ಯಂತ ವಿಶೇಷ ಮಹತ್ವವನ್ನು ಪಡೆಯುತ್ತದೆ.
“ಸರ್ವೆà ದೇವಾಃ ಸ್ಥಿತಾ ದೇಹೇ’ ಎಂಬಂತೆ ಗೋವಿನ ದೇಹದಲ್ಲಿ ಸರ್ವ ದೇವಾನು ದೇವತೆಗಳು ಸನ್ನಿಹಿತರಾಗಿದ್ದಾರೆ ಎಂದು ಭಾವಿಸುತ್ತದೆ ನಮ್ಮ ದೇಶದ ಸಂಸ್ಕೃತಿ. ದೀಪಾವಳಿಯ ಪಾಡ್ಯದಂದು ಬೆಳಗ್ಗೆ ಗೋಪೂಜೆ ಎಂದೇ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. ಮನೆ ದೇವರ ಪೂಜೆ ಮುಗಿಸಿದ ಬಳಿಕ ಸ್ನಾನ ಮಾಡಿಸಿ ಹೂಮಾಲೆ ಹಾಕಿ, ಮೈಮೇಲೆ ಜೇಡಿಮಣ್ಣಿನ ಮುದ್ರೆಗಳನ್ನು ಇರಿಸಿ ಶೃಂಗರಿಸಿ ತಿನ್ನಲು ಗೋಗ್ರಾಸವಿಟ್ಟು ಪೂಜೆ ಮಾಡುವುದು ರೂಢಿಯಲ್ಲಿದೆ. ಇದು ಒಂದು ವಿಧಾನದ ಗೋಪೂಜೆ. ಈಗ ಇದೇ ಕ್ರಮದ ಪೂಜೆಯನ್ನು ನಾವು ಸರ್ವತ್ರ ಕಾಣುತ್ತಿದ್ದೇವೆ.
ಕೃಷಿ ಸಹಾಯಿ ಪ್ರಾಣಿಗಳಲ್ಲಿ ದನವೂ ಬರುತ್ತದೆ, ಅದೂ ಹಟ್ಟಿಯಲ್ಲೇ ಇರುತ್ತದೆ. ದೀಪಾವಳಿಗೆ ಮಾಡಿದ ವಿಶೇಷ ಗಟ್ಟಿ ಮುಂತಾದ ತಿಂಡಿಗಳನ್ನು ಇರಿಸಿ ಅವುಗಳು ತಿನ್ನುತ್ತಿರುವಾಗದ ಸಂತೃಪ್ತ ಭಾವದ ವೇಳೆ ಹಟ್ಟಿ ತುಂಬ ಸೊಡರ ತೋರಿಸಿ ಬಲೀಂದ್ರನ ಕರೆದು ಪೊಲಿ ಯಾಚಿಸುವುದೇ ನಮ್ಮ ತುಳುನಾಡಿನ ಪೂರ್ವ ಪರಂಪರೆಯ ಗೋಪೂಜೆ. ಹಟ್ಟಿಯಲ್ಲಿ ದನ, ಕರು, ಎತ್ತು, ಕೋಣ , ಎಮ್ಮೆ ಎಲ್ಲವೂ ಇರುತ್ತವೆ. ಅವುಗಳೆಲ್ಲವೂ ನಮಗೆ ಜೀವಾನಾಧಾರ, ಕೃಷಿ ಸಹಾಯಿ. ತುಳುವರ ಗೋಪೂಜೆ ಹೀಗೆ ವೈಚಾರಿಕ ವೈಶಾಲ್ಯತೆಯನ್ನು ಪಡೆದಿದೆ. ಧಾನ್ಯವೇ ನಮಗೆ ‘ಧನ ಸಂಪತ್ತು’ ಆದುದರಿಂದ ಪ್ರತ್ಯೇಕ ‘ಧನಲಕ್ಷ್ಮೀ ಪೂಜೆ’ ಎಂದಿಲ್ಲ . ಗೋಪೂಜೆಯೊಂದಿಗೆ ಇದು ಕೂಡಾ ನಡೆಯುತ್ತದೆ.
ನಿರೂಪಣೆ : ರಾಕೇಶ್ ಕುಂಜೂರು
ಲೇಖನ : ಕೆ.ಎಲ್. ಕುಂಡಂತಾಯ, ಜಾನಪದ ವಿದ್ವಾಂಸರು