Advertisement
ಹೀಗೆ ಈ ದೀಪಾವಳಿಯು ಕೃಷ್ಣಾಷ್ಣಮಿ, ನವರಾತ್ರಿಗಳಂತೆ ಯಾವುದೋ ಒಂದು ದೇವತೆಯನ್ನು ಪೂಜಿಸುವ ಹಬ್ಬವಲ್ಲ. ಅನೇಕ ಪೂಜೆಗಳನ್ನೊಳಗೊಂಡ ಹಬ್ಬ.
ಊಜ್ವಾಡಾ ಸ್ವಾತಿ ಸಂಯುಕ್ತೆ ತದಾ ದೀಪಾವಲೀ ಭವೇತ್|
ಕುರ್ಯಾತ್ ಸಂಲಗ್ನ ಮೇತಚ್ಚ ದೀಪೋತ್ಸವ ದಿನತ್ರಯಂ||
ಎಂಬಂತೆ ದೀಪಾವಳಿಯು ಶಾಸ್ತ್ರೋಕ್ತವಾಗಿ ಮೂರೇ ದಿನಗಳ ಹಬ್ಬವಾದರೂ ಸಮಗ್ರವಾಗಿ ಗಮನಿಸಿದಾಗ ಐದು ದಿನಗಳಲ್ಲಿ ಆಚರಣೆಗೊಳ್ಳುವ ಹಬ್ಬವೆಂದು ಸ್ಪಷ್ಟವಾಗುತ್ತದೆ. ಆ 5 ಪ್ರಧಾನ ಅಂಗಗಳೇ ಧನ ಪೂಜೆ, ನರಕಚತುರ್ದಶಿ, ಲಕ್ಷ್ಮೀ ಪೂಜೆ. ಗೋಪೂಜೆ , ಬಲೀಂದ್ರ ಪೂಜೆ. ಹೀಗೆ ದೀಪೋತ್ಸವಗಳು, ಪಟಾಕಿ ಹಾರಿಸುವುದು ಆಶ್ವಿನ ಕೃಷ್ಣ ತ್ರಯೋದಶಿಯಿಂದಾರಂಭಿಸಿ ಐದು ದಿನಗಳೂ ನಡೆಯುತ್ತವೆ. ಈ ತ್ರಯೋದಶಿಯನ್ನು ಗುಜರಾತ್ ಮತ್ತು ಸೌರಾಷ್ಟ್ರಗಳಲ್ಲಿ ಧನ್‌ತೇರಾಸ್ ಎಂದು ಕರೆಯುತ್ತಾರೆ. ಹಿಂದಿನ ದಿನ ಅಥವಾ ಈ ದಿನ ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ ಮನೆಯಂಗಳವನ್ನು ಶುಚಿಗೊಳಿಸಿ ರಂಗೋಲಿಯಿಂದ ಚಿತ್ತಾರ ಬಿಡಿಸಿ ಲೋಹದ ಪಾತ್ರೆ ದೀಪಗಳನ್ನು ಶುಚಿಗೊಳಿಸಿ ಧನ ಪೂಜೆಯನ್ನು ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮೂರುಗಳಲ್ಲಿಯೂ ಧನತ್ರಯೋದಶಿಯಂದು ಈ ದಿನವನ್ನು ಕರೆದು ಈ ದಿನದಲ್ಲಿ ಧನಪೂಜೆ ಮಾಡುತ್ತಾರೆ. ಶಾಸ್ತ್ರಕಾರರು ತಿಳಿಸಿಕೊಡುವಂತೆ, ಅನುಭವದಲ್ಲಿಯೂ ಧನವು ತುಂಬಾ ಪ್ರಾಧಾನ್ಯವನ್ನು ಗಳಿಸಿಕೊಂಡಿದೆ. ಹಿರಿಯರು ತಿಳಿಸಿಕೊಟ್ಟಂತೆ,
Related Articles
ನ ತಸ್ಯಹರತೇ ಪ್ರಾಣಾನ್ ಯೋಯಸ್ಯ ಹರತೇ ಧನಂ||
ಧನವೆಂದರೆ ದೇಹದ ಹೊರಗಿರುವ ಪ್ರಾಣವೇ. ಯಾರಾದರೂ ಯಾರದ್ದಾದರೂ ಧನ ವನ್ನು ಹರಣ ಮಾಡಿದರೆ ಅವನ ಪ್ರಾಣವನ್ನೇ ಹರಣ ಮಾಡಿದಂತೆ ಎಂದಿದ್ದಾರೆ. ಧನ ನಷ್ಟಗಳು ಬಂದಾಗ ಪ್ರಾಣ ನಷ್ಟವೇ ಆದಂತೆ ಭಾಸವಾಗುತ್ತದೆ. ಆದ್ದರಿಂದ ನಮ್ಮ ಪ್ರಾಣ ಸಮಾನವಾದ ಧನದ ಪೂಜೆ ಈ ದಿನ ಅತ್ಯಂತ ಶ್ರೇಷ್ಠವೆಂದು ಹಿರಿಯರು ಉಪದೇಶಿಸಿದ್ದಾರೆ. ಹಾಗೆ,
ಆಶ್ವಿನ ಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ|
ಯಮದೀಪಂ ಬಹಿರ್ದದ್ಯಾದಪ ಮೃತುವಿನ ಶ್ಯತಿ||
ಎಂಬ ಸ್ಕಂದಪುರಾಣದ ಮಾತಿನಂತೆ ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿಯ ಪ್ರದೋಷವಾದ ಪರ್ವಕಾಲದಲ್ಲಿ ಅಂದರೆ ನವೆಂಬರ್ ಎರಡನೇ ದಿನಾಂಕದಂದು ಸಂಜೆ ಕೈಕಾಲು ಮುಖ ತೊಳೆದು ಅಂಗಳದ ತುಳಸಿಕಟ್ಟೆಯ ಬಳಿ ದಕ್ಷಿಣಕ್ಕೆ ಮುಖಮಾಡಿ ಎಳ್ಳೆಣ್ಣೆಯ ಯಮದೀಪವನ್ನು ಅಪಮೃತ್ಯು ಪರಿಹಾರಕ್ಕಾಗಿ,ಮೃತ್ಯು ನಾ ಪಾಶ ದಂಢಾಭ್ಯಾಂ ಕಾಲೇ ಶ್ಯಾಮಯಾ ಸಹ|
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜ ಪ್ರಿಯತಾಂ ಮಮ||
ಕಾಲ ಮತ್ತು ಮೃತ್ಯು ದೇವತೆಗಳೊಡನಿರುವ ಪಾಶ, ದಂಡಧಾರಿಯಾಗಿ ಶ್ಯಾಮಲಾ ಪತಿಯೂ ಆದ ಸೂರ್ಯಪುತ್ರನಾದ ಯಮನು ಹಾಗೇ ಯಮಾಂತರ್ಗದ ಸೂರ್ಯ ವಂಶಜನಾದ ರಾಮನು ಪ್ರೀತನಾಗಲಿ ಎಂಬರ್ಥವಿರುವ ಈ ಮಂತ್ರವನ್ನು ಮನೆಯವರೆಲ್ಲರೂ ಹೇಳಿ ಪ್ರತ್ಯೇಕ ದೀಪ ಹಚ್ಚಿಟ್ಟು ನಮಸ್ಕರಿಸಬೇಕು. ಒಂದೇ ದೀಪವಾದರೆ ಒಬ್ಬರ ಅನಂತರ ಒಬ್ಬರಂತೆ ದೀಪ ಎತ್ತಿಟ್ಟರಾಯಿತು.
Advertisement
– ವಿಶ್ವಮೂರ್ತಿ ಬಡಕಿಲ್ಲಾಯ, ಸವಣೂರು