ಬೆಂಗಳೂರು: ಸ್ಪಾ ಮಾಲೀಕನೊಬ್ಬನಿಗೆ ಬೆದರಿಕೆ ಹಾಕಿ ಸುಲಿಗೆ (Extortion) ಮಾಡಿದ ಪ್ರಕರಣದಲ್ಲಿ ನಿರೂಪಕಿ ದಿವ್ಯಾ (Divya Vasanth) ವಸಂತರನ್ನು ಇತ್ತೀಚೆಗೆ ಕೇರಳದಲ್ಲಿ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ದಿವ್ಯಾ ಸೇರಿದಂತೆ ಖಾಸಗಿ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕರಾಗಿದ್ದ ರಾಜಾನುಕುಂಟೆ ವೆಂಕಟೇಶ್, ದಿವ್ಯ ತಮ್ಮ ಸಂದೇಶ್ ರನ್ನು ಕೂಡ ಬಂಧಿಸಲಾಗಿದೆ.
ಈ ಬಗ್ಗೆ ಪೊಲೀಸರು ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇದಾದ ಬಳಿಕ ದಿವ್ಯಾರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಮಗಳ ಬಂಧನದಿಂದ ಆಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿರುವ ರೀತಿಯ ಬಗ್ಗೆ ಅವರ ತಾಯಿ ವಸಂತ ಬೇಸರಗೊಂಡಿದ್ದು, ವಿಡಿಯೋ ಮಾಡಿ ಭಾವುಕರಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?:
“ನಾನು ದಿವ್ಯಾನ ಅಮ್ಮ ವಸಂತ. ನನಗೆ ಅಳು ಬರುತ್ತಿದೆ. ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ. ಮಾತನಾಡಿರುವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ನನಗೆ ಚೆನ್ನಾಗಿ ಗೊತ್ತು. ಅವಳು ತಪ್ಪು ಮಾಡಿದ್ದಾಳೋ ಇಲ್ಲವೋ ಎನ್ನುವುದು ದಿವ್ಯಾ ಬಂದ್ಮೇಲೆ ಗೊತ್ತಾಗುತ್ತದೆ. ಅವಳ ಕೆಲಸ ಅವಳು ಮಾಡಿದ್ದಾಳೆ. ನಿಮ್ಮ ದರ್ಶನ್ ಅವರು ಎಲ್ಲರಿಗೂ ಬೇಕಾದವರೇ, ನಮ್ಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಕ್ಕಳಿಗೂ ಇಷ್ಟ. ಅವಳಿಗೆ ಏನು ಕೆಲಸ ಕೊಟ್ಟಿದ್ದಾರೆ ಅದನ್ನವಳು ಮಾಡಿದ್ದಾಳೆ. ಅದರ ಬಗ್ಗೆ ಮಾತನಾಡಬೇಕದ್ರೆ ಅವಳು ಬಂದೇ ಉತ್ತರ ಕೊಡ್ಬೇಕು. ಅದುವರೆಗೂ ನೀವು ಕೆಟ್ಟದಾಗಿ ಎಲ್ಲಾ ವೈರಲ್ ಮಾಡ್ಬೇಡಿ. ನನ್ನ ಮಗಳು ಬರಬೇಕು. ಅವಳು ತಪ್ಪು ಮಾಡಿದ್ದಾಳೋ ಇಲ್ವೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ನಿಮ್ಮ ಮನೆ ಹೆಣ್ಣುಮಗಳೆಂದು ತಿಳ್ಕೊಳಿ. ನೀವು ಅನ್ಕೊಂಡಿರುವಾಗೆ ನನ್ನ ಮಗಳು ಕೆಟ್ಟವಳಲ್ಲ” ಎಂದು ಭಾವುಕರಾಗಿ ನುಡಿದಿದ್ದಾರೆ.
ಏನಿದು ಪ್ರಕರಣ?:
ದಿವ್ಯಾ ವಸಂತ್ ಹಾಗೂ ತಂಡ ಸೇರಿಕೊಂಡು ವ್ಯಾಟ್ಸಾಪ್ ನಲ್ಲಿ ʼಸ್ಪೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ನ್ನು ಮಾಡಿಕೊಂಡಿದ್ದರು. ಇದರಲ್ಲಿ ಹಣವುಳ್ಳ ಸಿರಿವಂತರನ್ನು ಗುರಿಯಾಗಿಸಿಕೊಂಡು ಅವರನ್ನು ಬ್ಲ್ಯಾಕ್ ಮೇಲ್(Black mail) ಮಾಡಿ ಅವರಿಂದ ಸುಲಿಗೆ ಮಾಡುವುದು ಹೇಗೆನ್ನುವ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಇಂದಿರಾನಗರದ ‘ಸ್ಪಾ’ ವೊಂದಕ್ಕೆ ವೆಂಕಟೇಶ್ ಹಾಗೂ ದಿವ್ಯಾ ತಂಡ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಈ ಸ್ಪಾಗೆ ಗ್ರಾಹಕನಂತೆ ದಿವ್ಯಾ ಸಹೋದರ ಸಂದೇಶ ರಹಸ್ಯ ಕ್ಯಾಮೆರಾವೊಂದನ್ನು ಹಿಡಿದುಕೊಂಡು ಮಸಾಜ್ ಗೆಂದು ಹೋಗಿದ್ದ. ಆ ಬಳಿಕ ಅದೇ ಯುವತಿಯೊಂದಿಗೆ ಸಲುಗೆಯಿಂದ ಇರುವ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದ. ಇದನ್ನು ಸ್ಪಾ ಮಾಲೀಕನಿಗೆ ಕಳುಹಿಸಿ ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಇದನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದರು. 15 ಲಕ್ಷ ರೂ. ಕೊಡಿ ಇಲ್ಲದಿದ್ರೆ ನೇರ ಟಿವಿಯಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದರು.
ಇವರ ಸುಲಿಗೆಯ ಬಲೆಗೆ ಬಿದ್ದ ʼಸ್ಪಾʼ ಮಾಲೀಕನಿಂದ ಗ್ಯಾಂಗ್ 1 ಲಕ್ಷ ರೂ. ಸುಲಿಗೆ ಮಾಡಿದ್ದು, ಈ ಸಂಬಂಧ ಸ್ಪಾ ಮಾಲೀಕ ದೂರಿನ ಮೇರೆಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವೆಂಕಟೇಶ್ ಹಾಗೂ ಸಂದೇಶ್ ಅವರನ್ನು ಬಂಧಿಸಿದ್ದರು.
ಇದಾದ ಬಳಿಕ ಪ್ರಕರಣದ ಮತ್ತೊಂದು ಆರೋಪಿ ದಿವ್ಯಾ ವಸಂತ್ ಅವರನ್ನು ಪೊಲೀಸರು ಹುಡುಕಲು ಶುರು ಮಾಡಿದ್ದರು. ಆದರೆ ದಿವ್ಯಾ ಪರಾರಿ ಆಗಿದ್ದರು. ತಮಿಳುನಾಡಿನಿಂದ, ಕೇರಳಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ಕೇರಳದಲ್ಲಿ ದಿವ್ಯಾರನ್ನು ಬಂಧಿಸಲಾಗಿತ್ತು.