Advertisement

ಸಾಕ್ಷಿ ನಾಶಕ್ಕೆ ಮೊಬೈಲ್‌ ಒಡೆದು ಹಾಕಿದ ದಿವ್ಯಾ ಹಾಗರಗಿ

10:58 PM Apr 30, 2022 | Team Udayavani |

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಆರೋಪದಡಿ ಬಂಧಿತ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸಾಕ್ಷಿ ನಾಶಪಡಿಸಲು ತನ್ನ ಬಳಿಯಿದ್ದ ಮೊಬೈಲ್‌ ಅನ್ನು ಒಡೆದು ಹಾಕಿದ್ದಾರಂತೆ.

Advertisement

ಹನ್ನೊಂದು ದಿನಗಳ ಕಾಲ ಸಿಐಡಿ ವಶದಲ್ಲಿರುವ ಆಕೆ, ಶನಿವಾರ ವಿಚಾರಣೆ ವೇಳೆ ಮೊಬೈಲ್‌ ಎಸೆದಿರುವುದು, ಅಕ್ರಮದಲ್ಲಿ ತಮ್ಮ ಪಾತ್ರ ಸೇರಿದಂತೆ ಇತರ ಪ್ರಮುಖ ಅದರಲ್ಲೂ ಅಚ್ಚರಿ ಅಂಶಗಳನ್ನು ಬಾಯಿಬಿಟ್ಟಿದ್ದು ಅಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಿದ್ದಾರೆ.

ಆಳವಾಗಿ ತನಿಖೆ
ಮೊಬೈಲ್‌ ಎಸೆದು ಒಡೆದು ಹಾಕಿರುವುದನ್ನು ಗಮನಿಸಿದರೆ ತನಿಖೆ ನಡೆಸುವವರಿಗೆ ಸಾಕ್ಷé ಸಿಗದಂತೆ ಮಾಡುವ ಶಂಕೆ ವ್ಯಕ್ತವಾಗಿದೆ. ಮೊಬೈಲ್‌ ಒಡೆದು ಹಾಕಿರುವ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ ಜತೆಗೆ, ಈ ಮೊಬೈಲ್‌ ತುಣುಕುಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಿಐಡಿ ತಂಡ ಕಾರ್ಯೋನ್ಮುಖವಾಗಿದೆ. ಅಲ್ಲದೇ ದಿವ್ಯಾ ಅವರ ಕಳೆದ 18 ದಿನಗಳ ಮಾಹಿತಿಯನ್ನು ಸಂಪೂರ್ಣ ಕಲೆ ಹಾಕುವುದರ ಮೂಲಕ ತನಿಖೆಯ ಆಳ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒದ್ದಾಡಿ ಅತ್ತರಂತೆ
ಪ್ರಕರಣ ದಾಖಲಾಗುತ್ತಿದ್ದಂತೆ ಮಹಾರಾಷ್ಟ್ರದ ಪುಣೆಯ ಹತ್ತಿರದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾರನ್ನು ಬಂಧಿಸಲು ಸಿಐಡಿ ತಂಡ ಗುರುವಾರ ತಡರಾತ್ರಿ ಹೋಗಿದ್ದಾಗ ಆಕೆ ನೆಲಕ್ಕೆ ಬಿದ್ದು ಒದ್ದಾಡಿ ಅತ್ತಿದ್ದಾಳೆ. ಈಗ ಅತ್ತರೇನು ಪ್ರಯೋಜನ? ತಪ್ಪು ಮಾಡುವಾಗಲೇ ಪರಿಣಾಮ ಅರಿಯಬೇಕಿತ್ತು ಎಂದು ತಿಳಿ ಹೇಳಿ ಮಹಿಳಾ ಪೊಲೀಸ್‌ ಅಧಿಕಾರಿಗಳು ಕರೆ ತಂದರು ಎನ್ನಲಾಗಿದೆ.

ಪ್ರತ್ಯೇಕ ವಿಚಾರಣೆ
ದಿವ್ಯಾ ಮತ್ತು ಬಂಧಿತ ಅಕ್ರಮ ಮರಳು ದಂಧೆಕೋರ ಸುರೇಶ ಕಾಟೆಗಾಂವ್‌, ಸಹಾಯ ಮಾಡಿದ ಕಾಳಿದಾಸ, ಜ್ಞಾನಜ್ಯೋತಿ ಶಾಲೆ ಸಿಬಂದಿ ಅರ್ಚನಾ, ಸುನೀತಾ, ಚಾಲಕ ಸದ್ದಾಂ ಹಾಗೂ ನಗರಸಭೆ ಉದ್ಯೋಗಿ ಜ್ಯೋತಿ ಪಾಟೀಲ್‌ ವಿಚಾರಣೆಯನ್ನು ಸಿಐಡಿ ತಂಡದವರು ಪ್ರತ್ಯೇಕವಾಗಿ ನಡೆಸಿದರು. ಈ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ ಎಂದು ಗೊತ್ತಾಗಿದೆ.

Advertisement

ನ್ಯಾಯಾಲಯ ಆದೇಶದಂತೆ 11 ದಿನ ಸಿಐಡಿ ಕಸ್ಟಡಿಗೆ ಪಡೆದ ಬೆನ್ನಲ್ಲೇ ಬಂಧಿತ ಮಹಿಳೆಯರನ್ನು ಶುಕ್ರವಾರ ರಾತ್ರಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ನಿಲಯದಲ್ಲಿ ವಾಸ್ತವ್ಯಕ್ಕೆ ಬಿಡಲಾಯಿತು. ಶನಿವಾರ ಜಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಿದ ಅನಂತರ ಐವಾನ್‌-ಇ-ಶಾಹಿ ಅತಿಥಿಗೃಹಕ್ಕೆ ಕರೆತಂದು ವಿಚಾರಣೆ ನಡೆಸಲಾಯಿತು. ಸಂಜೆಯಾಗತ್ತಲೇ ಮಹಿಳೆಯರನ್ನು ಮತ್ತೆ ಮಹಿಳಾ ನಿಲಯಕ್ಕೆ ಕಳುಹಿಸಿ ಕೊಟ್ಟರೆ, ಉಳಿದವರನ್ನು ಎಂ.ಬಿ. ನಗರ ಠಾಣೆ ಸೆಲ್‌ಗೆ ರವಾನಿಸಲಾಯಿತು.

ದಿವ್ಯಾಗೆ ಎಸಿ ಬೇಕಂತೆ
ಇನ್ನು ದಿವ್ಯಾ ಶುಕ್ರವಾರ ರಾತ್ರಿ ತಂಗಿದ್ದ ನಗರದ ಮಹಿಳಾ ನಿಲಯದಲ್ಲಿ ಫ್ಯಾನ್‌ ಮಾತ್ರ ಇದೆ. ಬೇಸಿಗೆ ಬಿಸಿಲು ಹೆಚ್ಚಿದ್ದರಿಂದ ಎಸಿ ಬೇಡಿಕೆ ಇಟ್ಟಿದ್ದರಂತೆ. ಇನ್ನೊಂದೆಡೆ ನ್ಯಾಯಾಲಯ ಆದೇಶದಂತೆ ದಿವ್ಯಾ, ಅರ್ಚನಾ, ಸುನಂದಾ, ಜ್ಯೋತಿ ಅವರನ್ನು ಶುಕ್ರವಾರ ರಾತ್ರಿ ಆಳಂದ ರಸ್ತೆಯ ಮಹಿಳಾ ನಿಲಯದಲ್ಲಿರಿಸಲು ಸಿಐಡಿ ತಂಡ ಕರೆದುಕೊಂಡು ಹೋಗುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ್ದ ದಿವ್ಯಾ ಬೆಂಬಲಿಗರು, ಈ ನಿಲಯದಲ್ಲಿ ಫ್ಯಾನ್‌ ಮಾತ್ರ ಇದೆ. ಬೇಸಿಗೆಯಲ್ಲಿ ಅವರಿಗೆ ಕಷ್ಟವಾಗುತ್ತದೆ. ಕೂಲರ್‌ ಅಥವಾ ಎಸಿ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

12 ಮಂದಿ ಬಂಧನ
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನಗರದಲ್ಲಿ 12 ಮಂದಿಯನ್ನು ಬಂಧಿಸಿದ್ದು, ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್‌ ದೊರೆತಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬೆಂಗಳೂರು ಮತ್ತು ರಾಮನಗರ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಹನ್ನೆರಡು ಮಂದಿಯನ್ನು ಬಂಧಿಸಿದ್ದು, ಹತ್ತು ಜನರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದೇ ವೇಳೆ, 25 ಒಎಂಆರ್‌ ಶೀಟ್‌ಗಳಲ್ಲಿ ವ್ಯತ್ಯಾಸಕಂಡು ಬರುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದ ಅಕ್ರಮ ಇದೀಗ ಬೆಂಗಳೂರು, ರಾಮನಗರ ಹಾಗೂ ರಾಜ್ಯದ ಇತರೆ ಕೇಂದ್ರಗಳ ವ್ಯಾಪ್ತಿಯಲ್ಲಿ ಪತ್ತೆಯಾಗುತ್ತಿದ್ದು ಹಗರಣದ ಆಳ-ಅಗಲ ತಿಳಿಯದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next