Advertisement

ಸಂಸ್ಕಾರ ಹಾಗೂ ಸಾಧನೆಯಿಂದ ದೈವತ್ವ ಸಾಧ್ಯ

04:54 PM May 13, 2019 | Suhan S |

ಕುಣಿಗಲ್: ಸನಾತನ ಪರಂಪರೆ ಪ್ರತಿಪಾದಿಸುವಂತೆ ಪ್ರತಿಯೊಂದು ಜೀವಿಯೂ ಜನ್ಮತಃ ಮೃಗವಾಗಿರುತ್ತದೆ. ಸಂಸ್ಕಾರಗಳಿಂದ ಮಾನವ ಮತ್ತು ಸಾಧನೆಯಿಂದ ದೈವತ್ವವನ್ನು ಪಡೆಯುತ್ತದೆ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ರಾಮಣ ಬ್ಲಾಕ್‌ನ ಶ್ರೀ ಕೋಂದಡರಾಮ ದೇವಸ್ಥಾನದಲ್ಲಿ ನಡೆದ ಶ್ರೀ ಶಂಕರ ಜಯಂತಿ ಹಾಗೂ ಸಾಮೂಹಿಕ‌ ಉಪನಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವೇದಾಧ್ಯಯನ ಅಗತ್ಯ: ಮಾನವ ಜೀವನದ ಪಯಣ 16ಸಂಸ್ಕಾರದೊಂದಿಗೆ ಹಾಸುಹೊಕ್ಕಾಗಿದೆ. ಇವುಗಳಲ್ಲಿ ಉಪನಯನ ಅರ್ಥಾತ್‌ ಬ್ರಹ್ಮೋಪ ದೋಶ ಎಂಬುದು ಶ್ರೇಷ್ಠ ಸಂಸ್ಕಾರವಾಗಿದೆ. ಮಾಂಸದ ಶರೀರಕ್ಕೆ ತಾಯಿ, ತಂದೆಯರು ಜನ್ಮ ನೀಡಿದರೆ, ಸೂಕ್ಷ್ಮ ಶರೀರಕ್ಕೆ ದ್ವಿಜತ್ವ ಅಂದರೆ, ಎರಡನೇ ಜನ್ಮ ಪ್ರಾಪ್ತವಾಗುತ್ತದೆ. ಉಪನಯನ ಸಂಸ್ಕಾರ ಎಂದರೆ ಬದುಕಿಗೆ ಹೊಸ ದೃಷ್ಟಿಯನ್ನು ನೀಡುವ, ಜೀವನ ತತ್ವವನ್ನು ಪರಿಚಯಿಸುವ ಬದುಕಿನ ಶಿಕ್ಷಣ. ಆದ್ದರಿಂದ, ಪ್ರತಿಯೊಬ್ಬ ಮಾನವನಿಗೂ ವೇದಾಧ್ಯಯನ ಹಾಗೂ ಸದ್‌ಗ್ರಂಥಗಳ ಪಾರಾಯಣಗಳ ಧಾರ್ಮಿಕ ಕರ್ತವ್ಯ ಎನಿಸುತ್ತದೆ ಎಂದು ತಿಳಿಸಿದರು.

ಉಪನಯನಕ್ಕೆ ತಂದೆ ತಾಯಿ ಅಗತ್ಯ: ಸಮಾಜದಲ್ಲಿ ವಿವಾಹದ ಕರ್ತವ್ಯ ತಾಯಿ ತಂದೆಗಳಿಂದ ನಿರ್ವಹಿಸಲ್ಪಡಬಹುದು. ಕೆಲ ವೊಂದು ಸಂದರ್ಭಗಳಲ್ಲಿ ವಿವಾಹಗಳು ಪೊಲೀಸ್‌ ಠಾಣೆಗಳಲ್ಲಿ ಆಗಬಹುದು. ಆದರೆ, ಉಪನಯನ ಜನ್ಮ ಕೊಟ್ಟ ತಂದೆ ತಾಯಿಗಳ ಮತ್ತು ಕುಲ ಗುರುಗಳ ಸಮಕ್ಷಮದಲ್ಲಿಯೇ ನಡೆಯಬೇಕೇ ಹೊರತು ಆರಕ್ಷಕರ ಠಾಣೆಗಳಲ್ಲಿ ಅಲ್ಲ. ವಿದ್ಯಾರ್ಥಿ ಬದುಕಿನಲ್ಲಿ ಆಯಾ ಕಾಲಕ್ಕೆ ದೊರೆಯಬೇಕಾದ ಸಂಸ್ಕಾರಗಳನ್ನು ತಂದೆ ತಾಯಿ ಮತ್ತು ಸಮಾಜದ ಹಿರಿಯರೇ ನಿರ್ವಹಿಸಬೇಕು ಎಂದರು.

ಸಂಸ್ಕಾರ, ಶಿಕ್ಷಣ ಅವಶ್ಯಕ: ಸ್ವಾಮಿ ವಿವೇಕಾನಂದರು, ಶ್ರೀ ಶಂಕರಚಾರ್ಯರು ವೇದಾಧ್ಯಯನದ ಕುರಿತಾಗಿ ಸಮಾಜಕೆ ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ದೇಶದ ಸಂಸ್ಕೃತಿಗಳ ಮುಂದುವರಿಕೆಗೆ ಸಂಸ್ಕಾರ, ಶಿಕ್ಷಣ ಅವಶ್ಯಕ ಎಂದು ಯುಗಪುರುಷರು ಸಾರಿ ಹೇಳಿದ್ದಾರೆ. ಅವರ ಸಂದೇಶಗಳನ್ನು ಬದುಕಿಗೆ ಹೆದ್ದಾರಿಗಳಾಗಿ ಪರಿಗಣಿಸಿ ಸಾಗಬೇಕಾದ ಕರ್ತವ್ಯ ಸಮಾಜದ್ದಾಗಿದೆ ಎಂದು ತಿಳಿಸಿದರು.

Advertisement

ಶ್ಲಾಘನೀಯ ಕಾರ್ಯ: ಕುಣಿಗಲ್ನ ಬ್ರಾಹ್ಮಣ ಸಾಮುದಾಯ 7 ಜನ ಒಟ್ಟಾಗಿ ಅತ್ಯಂತ ಉತ್ತಮ ರೀತಿಯಲ್ಲಿ ಉಪನಯನ ಕಾರ್ಯಕ್ರಮವನ್ನು ಆಯೋಜಿಸಿ ಸಾಕಾರಗೊಳಿಸುವುದು ಹರ್ಷ ದಾಯಕ ಸಂಗತಿ. ಇದು ಇಡೀ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ವಿಪ್ರ ಜನಾಂಗದ ಮಾರ್ಗದರ್ಶಕರನ್ನು ಪೂಜ್ಯರು ಅಭಿನಂದಿಸಿದರು.

ನಿಮ್ಮ ಊರು ಕುಣಿಗಲ್ ನಿಮಗೆ ಏನು ಕೊಟ್ಟಿದೆ ಎಂದು ಹಲವಾರು ಜನರು ನನನ್ನು ಪ್ರಶ್ನಿಸುತ್ತಾರೆ. ಅದಕ್ಕೆ ನನ್ನ ಅಂತರಾಳದ ಉತ್ತರ, ನನ್ನ ಊರು ಬದುಕಿಗೆ ಬೇಕಾದ ಸರ್ವಸ್ವವನ್ನು ನೀಡಿದೆ. ಅಲ್ಲದೇ, ಪ್ರತಿಯಾಗಿ ಊರಿಗಾಗಿ ಎಷ್ಟೇ ಸೇವೆಗಳಿದ್ದರೂ ಹೆತ್ತ ತಾಯಿ ಹಾಗೂ ಹುಟ್ಟಿದ ಊರಿನ ಋಣ ತೀರಿಸಲು ಆಗದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಎಸ್‌. ದೇವಿರಯ್ಯ, ಕೆ.ವಿ.ಸೀತಾರಾಮಯ್ಯ, ಸತ್ಯಾ ನಾರಾಯಣಶಾಸ್ತ್ರಿ, ಎಚ್.ಸಿ.ಸುರೇಶ್‌. ಎಂ.ಎನ್‌.ವೇಣುಕುಮಾರ್‌, ಕೆ.ಜನಾರ್ದನ್‌, ಕೃಷ್ಣಪ್ರಸಾದ್‌, ಲಲಿತಮ್ಮ, ಟಿ.ಕೆ.ಜಯಂತಿ, ಸುಷ್ಮಾ ಸುರೇಶ್‌, ದಾಕ್ಷಾಯಿಣಿ ಜಯರಾಮ್‌, ಕೃಷ್ಣಮೂರ್ತಿ, ಅನಂತರಾಮು ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next