ಉಡುಪಿ: ಯಕ್ಷಗಾನ ಅಕಾಡೆಮಿ ಇದ್ದಂತೆ ದೈವಾರಾಧನೆಗೂ ಪ್ರತ್ಯೇಕ ಅಕಾಡೆಮಿ, ಅಧ್ಯಯನ ಪೀಠ ವಾಗಬೇಕು. ಈ ಮೂಲಕ ತುಳು ನಾಡಿಗೆ ಸರಕಾರದ ವಿಶೇಷ ಮೀಸಲಾತಿ ಸಿಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಭಿಪ್ರಾಯಪಟ್ಟರು.
ಪುರಭವನದಲ್ಲಿ ಶುಕ್ರವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ತುಳುನಾಡಿನ ಆರ್ಥಿಕವಾಗಿ ಹಿಂದುಳಿದ ಸುಮಾರು 100 ಮಂದಿ ಜಾನಪದ ಕಲಾವಿದರಿಗೆ, ಸಾಹಿತಿಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿಯಲ್ಲಿ ಕಲಾವಿದರಿಗೆ ನೀಡಲು ಯಾವುದೇ ಪ್ರತ್ಯೇಕ ನಿಧಿಯಿಲ್ಲ. ಭಾಷೆಯನ್ನು ಪಸರಿಸುವ ಕೆಲಸವಷ್ಟೇ ನಡೆಯುತ್ತಿದೆ. ದೈವಾರಾಧನೆಯಲ್ಲಿ ಎಲ್ಲ ಸಮುದಾ ಯದವರೂ ತೊಡಗಿಸಿಕೊಂಡಿದ್ದಾರೆ. ಇವರಿಗೆ ಸರಕಾರದ ಮೂಲಕ ಭದ್ರ ಬುನಾದಿ ಲಭಿಸಬೇಕು, ಕಲಾವಿದರಿಗೂ ಸೂಕ್ತ ಉದ್ಯೋಗಾವಕಾಶ ಲಭಿಸಬೇಕು ಎಂದರು.
ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರತಿಯೊಬ್ಬರೂ ಕೋವಿಡ್ 19ದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇದು ತುಳುನಾಡಿನ ದೈವಾರಾಧನೆಗೂ ತಟ್ಟಿದೆ. ಸಂಕಷ್ಟದಲ್ಲಿಯೂ ಬದುಕಬಹುದು ಎಂಬುವುದನ್ನು ಕೋವಿಡ್ 19 ಕಲಿಸಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಶುಚಿತ್ವ ಕಾಪಾಡುವುದು, ಸ್ಯಾನಿಟೈಸರ್ ಬಳಕೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ಅವರು ತಿಳಿಸಿದರು.
ತುಳುಕೂಟದ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಹಮ್ಮದ್ ಮೌಲಾ, ಅಕಾಡೆಮಿ ಮಾಜಿ ಸದಸ್ಯ ಯಾದವ ಕರ್ಕೇರ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮುಖ್ಯಸ್ಥ ಹಫೀಝ್ ರೆಹ ಮಾನ್, ತುಳುಕೂಟದ ಹಿರಿಯರಾದ ಭುವನ್ ಪ್ರಸಾದ್ ಹೆಗ್ಡೆ, ತುಳು ಅಕಾಡೆಮಿ ಸದಸ್ಯರಾದ ಆಕಾಶ್‌ರಾಜ್ ಜೈನ್, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.