Advertisement
ಅತ್ಯಂತ ಕಡಿಮೆ ಪರಿಶ್ರಮ, ಖರ್ಚು, ಆರೈಕೆ ಅಗತ್ಯವಿರುವ ದೀವಿ ಹಲಸಿನ ಬೇಸಾಯ ತೀರಾ ಸರಳ. ಮನೆಯ ಸುತ್ತಮುತ್ತ ಖಾಲಿ ಜಾಗ ಇದ್ದಲ್ಲಿ ಇದನ್ನು ನೆಟ್ಟು ಬೆಳೆಸಬಹುದು. ಇದೊಂದು ವಿಶಾಲವಾಗಿ ಕೊಂಬೆಗಳನ್ನು ಚಾಚಿ ಬೆಳೆಯುವ ಮರವಾಗಿದ್ದು, ಸುಮಾರು 15ರಿಂದ 20 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ದೀವಿ ಹಲಸು ಮೋರೆಸಿ ಸಸ್ಯ ಕುಟುಂಬಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್ ಆಲ್ತಿಲಿಸ್. ಇದು ಹಲಸಿನ ಮರದ ವರ್ಗಕ್ಕೆ ಸೇರಿದರೂ ದೀವಿ ಹಲಸಿನಲ್ಲಿ ಬೀಜಗಳಿಲ್ಲ, ಮೇಣವೂ ಕಡಿಮೆ. ಹಾಗಾಗಿ ಗುಣಧರ್ಮದಲ್ಲಿ ವೈರುಧ್ಯಗಳಿವೆ.
ನೀರು ಹರಿಯುತ್ತಿರುವ ಹಳ್ಳಗಳ ಬದಿ, ತೋಟದ ತಂಪು ವಾತಾವರಣ ಬೆಳೆಗೆ ಅವಶ್ಯ. ಬೇಸಗೆಯಲ್ಲಿ ಬಿಸಿಲಿನ ಝಳ ಹೆಚ್ಚಾದರೆ ದೀವಿ ಹಲಸು ಪಕ್ವವಾಗುವ ಮೊದಲೇ ಬಾಡಿ ಬೀಳುವುದುಂಟು. ಕಪ್ಪು, ಕೆಂಪು ಸಹಿತ ಅಧಿಕ ತೇವಾಂಶವಿರುವ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.
Related Articles
ಹಟ್ಟಿಗೊಬ್ಬರ, ಆಡಿನ ಹಿಕ್ಕೆ, ಕೋಳಿ ಗೊಬ್ಬರ, ವಿವಿಧ ಹಿಂಡಿಗಳು, ಕುರಿಗೊಬ್ಬರ, ಸುಡುಮಣ್ಣು, ಸೊಪ್ಪು, ಸಾವಯವ ಗೊಬ್ಬರಗಳನ್ನು ಬಳಸಬಹುದು. ಮಳೆಗಾಲದಲ್ಲಿ ದೀವಿ ಮರದ ಕೊಂಬೆಗಳಿಗೆ ಶಿಲೀಂಧ್ರ ರೋಗ ತಗುಲುವ ಸಾಧ್ಯತೆಯಿದೆ. ಅದರಿಂದ ಕೊಂಬೆಗಳು ಸಾಯಲಾರಂಭಿಸುತ್ತವೆ. ನಿವಾರಣೆಗೆ ಬೋರ್ಡೋ ದ್ರಾವಣದ ಸಿಂಪಡಣೆ, ರೋಗ ಬಂದ ಕೊಂಬೆ ಕತ್ತರಿಸಿ ಆ ಜಾಗಕ್ಕೆ ಬೋರ್ಡೋ ಮಿಶ್ರಣ ಹಚ್ಚುವುದು ಸೂಕ್ತ.
Advertisement
ಕೃಷಿ ಹೇಗೆ?ದೀವಿ ಹಲಸಿನ ಸಸ್ಯಾಭಿವೃದ್ಧಿಯನ್ನು ಸಾಮಾನ್ಯವಾಗಿ ಬೇರುಗಳಿಂದ ಮಾಡಲಾಗುತ್ತದೆ. ನೆಲದ ಆಳದಲ್ಲಿ ಹರಡಿ ಬೆಳೆಯುವ ಗಿಡದ ಬೇರನ್ನು ಸ್ವಲ್ಪ ಗಾಯಗೊಳಿಸಿ ಅನಂತರ ಅದನ್ನು ಮಣ್ಣಿನಿಂದ ಮುಚ್ಚಬೇಕು. ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಗಾಯಗೊಳಿಸಿದ ಜಾಗದಿಂದ ಚಿಗುರೊಡೆದು ಗಿಡವಾಗುತ್ತದೆ. ಗಿಡದ ಬೇರನ್ನು ಉಳಿಯುವಂತೆ ಮಾಡಿ, ಬೇರು ಸಹಿತ ಸಸ್ಯವನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ಬೆಳೆಸಿ, ಅನಂತರ ಸೂಕ್ತ ಸ್ಥಳದಲ್ಲಿ ಎರಡು ಅಡಿ ಉದ್ದ ಮತ್ತು ಅಗಲ ಹಾಗೂ ಒಂದೂವರೆ ಅಡಿ ಆಳದ ಗುಂಡಿ ತೋಡಿ ಅದಕ್ಕೆ ಸುಡುಮಣ್ಣು ಮಿಶ್ರ ಮಾಡಿ ನೆಡಬೇಕು. ಬಳಿಕ ಗಿಡ ಚೆನ್ನಾಗಿ ಚಿಗುರುವ ವರೆಗೆ ಪ್ರತಿ ದಿನ ಸ್ವಲ್ಪ ನೀರುಣಿಸುವುದು ಉತ್ತಮ. ಬಳಿಕ ಅದಕ್ಕೆ ಹಟ್ಟಿಗೊಬ್ಬರ, ಸೊಪ್ಪು, ಇತ್ಯಾದಿಗಳನ್ನು ಹಾಕಿದರೆ ಗಿಡ ಚೆನ್ನಾಗಿ ಬೆಳೆಯುವುದು. ಮಳೆಗಾಲ ಇದರ ನಾಟಿಗೆ ಹೆಚ್ಚು ಸೂಕ್ತ ಸಮಯ. ಗಿಡನೆಟ್ಟು ನಾಲ್ಕೈದು ವರ್ಷಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. 15- 20 ವರ್ಷಗಳವರೆಗೂ ಫಲ ನೀಡುತ್ತದೆ. ಸ್ಥಳೀಯ ತಳಿಯಲ್ಲದೇ ಕಸಿ ಕಟ್ಟುವ ಮೂಲಕ ಕೆಲವೊಂದು ಹೈಬ್ರಿಡ್ ತಳಿಗಳನ್ನೂ ಈಗ ಅಭಿವೃದ್ಧಿ ಪಡಿಸಲಾಗಿದೆ.
- ಗಣೇಶ ಕುಳಮರ್ವ