Advertisement

ನಾರಾಯಣ್‌ ಕೈತಪ್ಪಿಹೋದ 18 ಚಿತ್ರಗಳು; ನಾವು ನತದೃಷ್ಟರೋ, ಬಕ್ರಾಗಳೋ

12:35 PM Feb 06, 2018 | Sharanya Alva |

ಅಂತೂ ಒಂದು ಚಿತ್ರದ ಮುಹೂರ್ತ ಆಯ್ತು …ಹಾಗಂತ ಹೇಳಿ ನಕ್ಕರು ಎಸ್‌. ನಾರಾಯಣ್‌. ಕಳೆದ ವರ್ಷ ಅವರ ಎರಡು ಚಿತ್ರಗಳ ಮುಹೂರ್ತವಾಗಿದ್ದವು. ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಇನ್ನು ಹಲವು ಚಿತ್ರಗಳ ಕೆಲಸ ನಡೆಯುತ್ತಿದ್ದರೂ, ಒಂದಲ್ಲ ಒಂದು ಕಾರಣಕ್ಕೆ ಕೈತಪ್ಪಿ ಹೋಗುತ್ತಿದ್ದವಂತೆ. ಈಗ ಕೊನೆಗೂ ಅವರ ಹೊಸ ಚಿತ್ರ ಸೋಮವಾರ ಬೆಳಿಗ್ಗೆ, ಹನುಮಂತನಗರದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಪ್ರಾರಂಭವಾಯಿತು. ಇಷ್ಟಕ್ಕೂ ನಾರಾಯಣ್‌ ಅವರಿಂದ ಚಿತ್ರಗಳು ಕೈತಪ್ಪಿ ಹೋಗುತ್ತಿದುದೇಕೆ ಎಂಬ ಪ್ರಶ್ನೆಗೆ ಅವರ ಬಳಿಯೂ ಉತ್ತರವಿಲ್ಲ.

Advertisement

“ನಿರ್ಮಾಪಕರು ಬರೋರು. ಕಥೆ ಬರೆದು ಮುಗಿಸುತ್ತಿದ್ದೆ. ಕೆಲವು ಚಿತ್ರಗಳು ಸಂಗೀತ ಸಂಯೋಜನೆ ಲೆವೆಲ್‌ವರೆಗೂ ಬರುತಿತ್ತು. ಆದರೆ, ಇದಕ್ಕಿದ್ದಂತೆ ಕೈತಪ್ಪಿ ಹೋಗೋದು. ನಿಜ ಹೇಳಬೇಕೆಂದರೆ, ಕನ್ನಡ ಚಿತ್ರರಂಗದಲ್ಲಿ ನನ್ನಷ್ಟು ಬಿಝಿ ಯಾರೂ ಇಲ್ಲ. ಸತತವಾಗಿ ಬರೆಯುವ ಕೆಲಸದಲ್ಲಿ ನಿರತನಾಗಿದ್ದೆ. ಆದರೆ, ಚಿತ್ರ ಮಾತ್ರ ಒಂದಲ್ಲ ಕಾರಣಕ್ಕೆ ನನ್ನ ಕೈತಪ್ಪಿ ಹೋಗೋದು. ಎಲ್ಲಾ ಮುಗಿದು ಇನ್ನು ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ, ಅದೇ ನಿರ್ಮಾಪಕರು ಅದೇ ಕಥೆಯನ್ನಿಟ್ಟುಕೊಂಡು ಬೇರೆಯವರ ಜೊತೆಗೆ ಚಿತ್ರ ಮಾಡುತ್ತಿದ್ದುದು ಇದೇ. ನನಗೆ ಪೇಪರ್‌ ನೋಡಿದ ಮೇಲಷ್ಟೇ, ಆ ನಿರ್ಮಾಪಕರು ಬೇರೆ ಇನ್ನೊಂದು ಚಿತ್ರ ಮಾಡುತ್ತಿರುವುದು ಗೊತ್ತಾಗುತಿತ್ತು. 

ಇತ್ತೀಚೆಗೆ ಒಂದು ಚಿತ್ರ ಮಿಸ್‌ ಆಯ್ತು. ನಾಲ್ಕು ತಿಂಗಳು ಕೆಲಸ ಮಾಡಿದ್ದೆ. ಕಾರಣ ಇಲ್ಲದೇ ಅದು ಕೈತಪ್ಪಿ ಹೋಯಿತು. ಇದುವರೆಗೂ 18 ಸಿನಿಮಾಗಳು ನನ್ನ ಕೈತಪ್ಪಿ ಹೋದವು’ ಎನ್ನುತ್ತಾರೆ ನಾರಾಯಣ್‌. 

ಬರೀ ನಾರಾಯಣ್‌ಗಷ್ಟೇ ಅಲ್ಲ, ಅವರ ಮಗ ಪಂಕಜ್‌ಗೂ ಇದೇ ತರಹ ಆಗಿದೆಯಂತೆ. ಈ ಕುರಿತು ಮಾತನಾಡಿದ ನಾರಾಯಣ್‌, “ಒಬ್ಬರು ಬಂದು ಒಂದು ಪಾತ್ರಕ್ಕೆ ಉದ್ದ ಕೂದಲು ಬೇಕು, ಶೇವಿಂಗ್‌ ಬೇಡ ಎಂದು ಹೇಳಿ ಹೋದರು. ಆಮೇಲೆ ನೋಡಿದರೆ ಅವರು ಮಾಯ. ಇನ್ನೊಮ್ಮೆ ಅವನಿಗೆ ಮಾಡಿದ ಕಥೆಯೊಂದು, ಹಾಡುಗಳ ರೆಕಾರ್ಡಿಂಗ್‌ವರೆಗೂ ಬಂದಿತ್ತು. ಕೊನೆಗೆ ನಿರ್ಮಾಪಕರು ಆ ಕಥೆಯನ್ನು ಬೇರೆ ನಿರ್ದೇಶಕರಿಂದ ಮಾಡಿಸಿದರು. ಎಂಥಾ ವಿಪರ್ಯಾಸ ಎಂದರೆ, ನಾನೇ ಹೋಗಿ ಆ ಚಿತ್ರಕ್ಕೆ ಕ್ಲಾಪ್‌ ಮಾಡಿ ಬಂದೆ.

Advertisement

ನಾವು ನತದೃಷ್ಟರೋ, ಬಕ್ರಾಗಳ್ಳೋ ಗೊತ್ತಿಲ್ಲ. ಒಂದು ಸಿನಿಮಾ ಅಂತೂ ಆಗಲ್ಲ ಎಂದು ಎಲ್ಲರಿಗೂ ಗೊತ್ತಿತ್ತು, ನನ್ನೊಬ್ಬನನ್ನು ಬಿಟ್ಟು. ನಾನು ಆ ಚಿತ್ರ ಆಗೇಆಗುತ್ತದೆ ಎಂದು ಕಾಯುತ್ತಿದ್ದೆ. ಆಮೇಲೆ ನಾನು ಬಕ್ರಾ ಆದೆ ಅಂತ ಗೊತ್ತಾಯ್ತು. ಇನ್ನೊಂದು ಚಿತ್ರಕ್ಕೆ ನನ್ನ ಕೈಯಿಂದ ಖರ್ಚು ಮಾಡಿದ್ದೆ. ಕೆಲವು ವರ್ಷಗಳ ಹಿಂದೆ, ಈ ಚಿತ್ರ ನಿರ್ದೇಶನ ಮಾಡೋದು ನಿಲ್ಲಿಸಿದ್ದೆ. ಆಗ ಎಲ್ಲರೂ ನನ್ನ ನಿರ್ಧಾರವನ್ನ ಬಾಲಿಷ ಎಂದರೆ. ಈಗ ಅದೇ ಸರಿ ಅನಿಸುತ್ತಿದೆ’ ಎನ್ನುತ್ತಾರೆ ನಾರಾಯಣ್‌.

ಎಲ್ಲಾ ಸರಿ, ಈ ಕುರಿತು ಯಾಕೆ ನಾರಾಯಣ್‌ ಕ್ರಮ ಕೈಗೊಳ್ಳಬಾರದು ಎಂಬ ಪ್ರಶ್ನೆ ಬರುವುದು ಸಹಜ. “ಯಾರ ವಿರುದ್ಧ ಕ್ರಮ ಕೈಗೊಳ್ಳಲಿ. ನನಗೆ ಅದೆಲ್ಲಾ ಇಷ್ಟ ಇಲ್ಲ. ಚಿತ್ರರಂಗದಲ್ಲಿ ಕಳೆದ 30 ವರ್ಷಗಳಿಂದ ಇದ್ದು, ಎಲ್ಲವನ್ನೂ ನೋಡಿರುವುದರಿಂದ ನಾನು ಜೀರ್ಣಿಸಿ ಕೊಳ್ಳುತ್ತೀನಿ. ದುರ್ಬಲ ಇರೋರಿಗೆ ಬಹಳ ಕಷ್ಟ’ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next