ಶಿರಸಿ : ಜೀವಜಲ ಕಾರ್ಯಪಡೆಯಿಂದ ನಡೆಯುತ್ತಿರುವ ಬಶೆಟ್ಟಿ ಕೆರೆ ಅಭಿವೃದ್ಧಿ ಕೆಲಸಕ್ಕೆ ಕೆಲ ಸ್ವ ಹಿತಾಸಕ್ತಿಗಳು ತೊಡರು ಹಾಕುವ ಕಾರ್ಯ ಮಾಡುತ್ತಿರುವದಕ್ಕೆ ಸಾರ್ವ ಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಲೂಕಿನ ವಿವಿಧ ಕೆಲಸಗಳಿಂದ ಉದ್ಯಮಿ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ನಡೆಯುತ್ತಿರುವ ಜೀವಜಲ ಕಾರ್ಯಪಡೆಯು ಈಗ ಪುರಾತನ ಬಶೆಟ್ಟಿ ಕೆರೆ ಅಭಿವೃದ್ಧಿಗೆ ಕೈ ಹಾಕಿದ್ದು, ಕೆರೆಗೆ ಆಕಾರ ನೀಡಿ ಸುಂದರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಡೆಗಳನ್ನು ಚಂದಗೊಳಿಸಿ ಪುಟ್ ಪಾತ್ ನಿರ್ಮಾಣ ಕೆಲಸ ಭರದಿಂದ ಸಾಗಿದೆ.
ಈಗಾಗಲೇ ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಹಾಗೂ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ ಹೆಬ್ಬಾರ್ ಅವರ ಕೆಲಸಕ್ಕೆ ಸಮ್ಮತಿ ಸೂಚಿಸಿ ಶ್ಲಾಘಿಸಿದ್ದಾರೆ. ಇದರ ಬೆನ್ನಲ್ಲೇ ದಂಡೆ ನಿರ್ಮಿಸುವ ಕೆಲಸ ನಡೆದಿದ್ದು, ಕಾಂಕ್ರೀಟ್ ಹಾಕಿ ಗಟ್ಟಿ ಮಾಡಲಾಗುತ್ತಿದೆ.
ಕೆರೆಯ ಸುತ್ತಲೂ ಸದೃಢವಾದ ದಂಡೆ ನಿರ್ಮಿಸಿ, ಅಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿ ಹಾಕುವ ಯೋಜನೆ ಕಾರ್ಯಪಡೆಯದ್ದಾಗಿದೆ. ಹಿಟಾಚಿಯ ಮೂಲಕ ಮಣ್ಣಿನ ಕೆಲಸ ನಡೆಯುತ್ತಿದ್ದು, ಕಾಂಕ್ರಿಟ್ ಮಿಶ್ರಿತ ಮಣ್ಣನ್ನು ದಂಡೆಗೆ ಸುರಿಯಲಾಗುತ್ತಿದೆ. ಅಲ್ಲದೇ ನೀರಿನಲ್ಲಿರುವ ಪಾಚಿ, ಪ್ಲಾಸ್ಟಿಕ್ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ.
ಆದರೆ, ಜೀವ ಜಲ ಕಾರ್ಯಪಡೆಯ ಕಾರ್ಯಕ್ಕೆ ಕೆಲ ಹಿತಾಸಕ್ತಿಗಳು ಕಿರಿಕಿರಿ ಮಾಡುತ್ತಿರುವದು ಬಹಿರಂಗವಾಗಿದೆ.ಬಸಟ್ಟಿ ಕೆರೆ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕೆಲ ಸ್ಥಳೀಯರು ಸ್ವಹಿತಾಸಕ್ತಿಯ ಆರೋಪ ಮಾಡಿರುವದಕ್ಕೆ ಸ್ವತಃ ಈಗಾಗಲೇ ಹತ್ತಾರು ಕೆರೆಗಳನ್ನು ಸ್ವಚ್ಚಗೊಳಿಸಿರುವ ಹೆಬ್ಬಾರ್ ಅವರು ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ನೀಡಿದಲ್ಲಿ ಇನ್ನು ಮುಂದೆ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದಿದ್ದಾರೆ.