ಕುಷ್ಟಗಿ : ಕುಷ್ಟಗಿ ತಾಲೂಕು ತಾವರಗೇರಾ ದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ಜನೋತ್ಸವ ಕಾಟಾಚಾರಕ್ಕೆ ನಡೆದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ಮಂಗಳವಾರ ತಾವರಗೇರಾದ ಮೇಘಾ ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾಡಳಿತ ಕೊಪ್ಪಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ನೆಹರು ಯುವ ಕೇಂದ್ರ ಕೊಪ್ಪಳ, ಯುವ ಸ್ಪಂದನ ಕೊಪ್ಪಳ ಸಹಯೋದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ಜನೋತ್ಸವ ತರಾತುರಿಯಲ್ಲಿ ಅಷ್ಟೇ ಗುಟ್ಟಾಗಿ ನಡೆದಿದೆ.
ಈ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ತಮಗೆ ಬೇಕಾದ ಅತಿಥಿಗಳು, ಕಲಾವಿದರನ್ನು ಕರೆಯಿಸಿಕೊಂಡು ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಾಗೂ ಒಮಿಕ್ರಾನ್ ವೈರಸ್ ನೆಪದಲ್ಲಿ ಕಾರ್ಯಕ್ರಮ ಮಾಡಿ ಮುಗಿಸಿದೆ.
ಈ ಕಾರ್ಯಕ್ರಮ ಸ್ಥಳೀಯರಿಗೆ ಮಾಹಿತಿ ಇಲ್ಲ ಅಲ್ಲದೇ ಕುಷ್ಟಗಿ ತಾಲೂಕಾ ಯುವಜನ ಸಬಲೀಕರಣದ ಇಲಾಖಾ ತಾಲೂಕಾ ಅಧಿಕಾರಿಯ ಗಮನಕ್ಕೆ ತರದೇ ಈ ಕಾರ್ಯಕ್ರಮ ಆಯೋಜಿಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಈ ಕಾರ್ಯಕ್ರಮ ಆಯೋಜಿಸಿ ಬಿಲ್ ಎತ್ತುವಳಿಗೆ ಪ್ರಯತ್ನಿಸಿರುವುದು ಬಹಿರಂಗವಾಗಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಹಾಗೂ ಖೋ ಖೋ ತರಬೇತುದಾರ ಎನ್.ಯತಿರಾಜ್ ವಿರುದ್ದ ಆಕ್ರೋಶ ತಿರುಗಿದ್ದು, ಈ ಕಾರ್ಯಕ್ರಮ ರದ್ದುಗೊಳಿಸಿ ವಿಧಾನ ಪರಿಷತ್ ಚುನಾವಣೆ ಬಳಿಕ ಮತ್ತೊಮ್ಮೆ ಆಯೋಜಿಸಬೇಕೆನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಯುವ ಜನೋತ್ಸವ ಯಾವ ಜನೋತ್ಸವ ಕಾಣದ ಉತ್ಸವವಾಗಿದ್ದು ಈ ಕಾಟಾಚಾರದ ಉತ್ಸವದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ರ ವಿರುದ್ದ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ.