ಹಾವೇರಿ: ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ಹಸಿರು ನಿರ್ವಹಣೆ ಉತ್ತೇಜಿಸಲು ಜಿಲ್ಲಾಡಳಿತದಿಂದಇದೇ ಪ್ರಥಮ ಬಾರಿಗೆ ನೀಡುತ್ತಿರುವ ಜಿಲ್ಲಾ ಮಟ್ಟದ ಜಿಲ್ಲಾ ಸ್ವಚ್ಛತಾ ಗಾಂಧಿ ಪುರಸ್ಕಾರ 2020ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರಥಮ ಸ್ಥಾನ ಲಭಿಸಿದ್ದು, ರಾಜ್ಯೋತ್ಸವ ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲಾ ಪಂಚಾಯತಿ ಕಚೇರಿಗೆ ದ್ವಿತೀಯ ಸ್ಥಾನ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಕಚೇರಿಗೆ ತೃತೀಯ ಸ್ಥಾನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ತಾಲೂಕು ಮಟ್ಟದ ಕಚೇರಿ ವಿಭಾಗದಲ್ಲಿ ಕ್ರಮವಾಗಿ ಬ್ಯಾಡಗಿ ತಹಶೀಲ್ದಾರ್ ಕಚೇರಿ, ಹಿರೇಕೆರೂರು ಪಟ್ಟಣ ಪಂಚಾಯತಿ, ಹಾವೇರಿ ತಾಲೂಕು ಪಂಚಾಯತಿ ಕಚೇರಿಗೆ ಪ್ರಥಮ ಸ್ಥಾನ, ಹಾನಗಲ್ಲ ತಹಶೀಲ್ದಾರ್ ಕಚೇರಿ, ಹಾವೇರಿ ನಗರಸಭೆ, ಸವಣೂರು ತಾಲೂಕು ಪಂಚಾಯತಿ ಕಚೇರಿಗೆ ದ್ವಿತೀಯ ಸ್ಥಾನ ಹಾಗೂ ರಾಣೆಬೆನ್ನೂರು ತಾಲೂಕು ಕಚೇರಿ, ಹಾನಗಲ್ಲ ಪುರಸಭೆ, ರಾಣೆಬೆನ್ನೂರು ಹಾಗೂ ಶಿಗ್ಗಾವಿ ತಾಲೂಕು ಪಂಚಾಯತಿಗೆ ತೃತೀಯ ಸ್ಥಾನ ನೀಡಲಾಯಿತು. ಬಂಕಾಪುರ, ಗುತ್ತಲ, ಹಂಸಭಾವಿ, ಕುಮಾರಪಟ್ಟಣ, ತಡಸ ಪೊಲೀಸ್ ಠಾಣೆಗಳು ಅಕ್ಕಿ ಆಲೂರ, ಕಾಟೇನಹಳ್ಳಿ, ಬಂಕಾಪುರ, ಕದರಮಂಡಲಗಿ, ತಡಕನಹಳ್ಳಿ, ಆರೋಗ್ಯ ಕೇಂದ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ತಾಲೂಕ ಮಟ್ಟದ ಕಚೇರಿಗಳ ವಿಭಾಗದಲ್ಲಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಅತ್ತಿಗೇರಿ ಕೃಷಿ ಇಲಾಖೆ, ರಾಣೆಬೆನ್ನೂರು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ, ರಾಣೆಬೆನ್ನೂರ ಸಮಾಜ ಕಲ್ಯಾಣ ಇಲಾಖೆ, ಹಾನಗಲ್ಲ ಲೋಕೋಪಯೋಗಿ ಇಲಾಖೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಗ್ರಾಮ ಪಂಚಾಯತಿಗಳ ವಿಭಾಗದಲ್ಲಿ ದೇವಿಹೊಸೂರ, ರಟ್ಟಿಹಳ್ಳಿ, ಕುಂಚೂರ, ಕೊಡಿಹಾಳ, ಮತ್ತೂರ, ಅಕ್ಕಿಆಲೂರ, ತೆಗ್ಗಿಹಳ್ಳಿ, ಚಿಕ್ಕಮುಳಗುಂದ ಗ್ರಾಮ ಪಂಚಾಯತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ಇದಲ್ಲದೇ ತಾಲೂಕ ಮಟ್ಟದಲ್ಲಿ ಎಲ್ಲ ತಾಲೂಕುಗಳ ತಾಲೂಕುಮಟ್ಟದ ಕಚೇರಿ ಹಾಗೂ ಗ್ರಾಮ ಪಂಚಾಯತಿಗಳಿಗೆ ತಲಾ ಐದು ಬಹುಮಾನಗಳನ್ನು ಘೋಷಿಸಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕೆ.ಜಿ ದೇವರಾಜು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಂಬಾಜಿ ಶಿವಾಜಿ ಅತ್ತರವಾಲ ಪ್ರಶಸ್ತಿ ಸ್ವೀಕರಿಸಿದರು.
ತಾಲೂಕು ಕಚೇರಿಗಳ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚೈತ್ರಾ ಇತರ ಅಧಿಕಾರಿಗಳು ಗೃಹ ಸಚಿವರಿಂದ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಸ್ವೀಕರಿಸಿದರು.