ಬೀದರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಅಮೆಚುರ್ ಸೈಕ್ಲಿಂಗ್ ಸಂಸ್ಥೆ ಮತ್ತು ಡಿಟ್ರ್ಯಾಕ್ ಸೈಕಲ್ ಸ್ಟೋರ್‌ನ ಆಶ್ರಯದಲ್ಲಿ 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ನಗರದಲ್ಲಿ ಅ.31ರಂದು ಜಿಲ್ಲಾ ರೋಡ್ ಸೈಕ್ಲಿಂಗ್ ಡಿಟ್ರ್ಯಾಕ್ ಚಾಂಪಿಯನ್‌ಶಿಪ್-21 ಆಯೋಜಿಸಲಾಗಿದೆ.
ಸಂಸ್ಥೆಯ ಗೌರವಾಧ್ಯಕ್ಷ ಶಿವರಾಜ ಢಣಕೆ, ಡಿಟ್ರ್ಯಾಕ್ ಮಾಲೀಕ ಧನೀಲ್ ಶಾಂತಪುರೆ ಮತ್ತು ಸೈಕ್ಲಿಂಗ್ ತರಬೇತಿದಾರ ಮೌಲಪ್ಪ ಮಾಳಗೆ ನಗರದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋವಿಡ್ ಮತ್ತು ಲಾಕ್‌ಡೌನ್ ನಿಂದಾಗಿ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಆಗಿದೆ. ಹಾಗಾಗಿ ಅವರಲ್ಲಿ ಸ್ಫೂರ್ತಿ ತುಂಬಿ, ಸದೃಢ ಆರೋಗ್ಯ ಕಾಪಾಡಲು ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಸ್ಪರ್ಧೆಯನ್ನು ಒಟ್ಟು 5 ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಯುವಕ- ಯುವತಿಯರಿಗಾಗಿ 20 ಕಿ.ಮೀ. (ಗೀಯರ್), 15 ಕಿ.ಮೀ. (ಗೀಯರ್ ಇಲ್ಲದ), 15 ವರ್ಷದೊಳಗಿನ ಬಾಲಕರಿಗೆ 12 ಕಿ.ಮೀ., ಬಾಲಕಿಯರಿಗೆ 5 ಕಿ.ಮೀ. ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಪಟುಗಳಿಗೆ ಒಟ್ಟಾರೆ 1.08 ಲಕ್ಷ ರೂ. ಮೊತ್ತದ ಡಿಟ್ರ್ಯಾಕ್ ಸೈಕಲ್‌ಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು. ಸ್ಪರ್ಧೆಗಾಗಿ ಅ.31ರವರೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ: ವಿಶ್ವಕಪ್ ಪಂದ್ಯದ ವೇಳೆ ಪಾಕ್-ಅಫ್ಘಾನ್ ಅಭಿಮಾನಿಗಳ ಹೊಡೆದಾಟ: ಟಿಕೆಟ್ ಇಲ್ಲದೆ ನುಗ್ಗಲು ಯತ್ನ
ನಗರದ ಆರ್‌ಟಿಒ ಕಚೇರಿ ಬಳಿ ಅಂದು ಬೆ. 6.45ಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸ್ಪರ್ಧೆಗೆ ಚಾಲನೆ ನೀಡುವರು. ಸಿಇಒ ಜಹೀರಾ ನಸೀಮ್ ಅಧ್ಯಕ್ಷತೆ ವಹಿಸುವರು. ಎಸ್‌ಪಿ ನಾಗೇಶ ಡಿ.ಎಲ್, ಪೌರಾಯುಕ್ತ ರವೀಂದ್ರ ಅಂಗಡಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ ನಾಡಗೀರ್, ಡಿಎಚ್‌ಒ ಡಾ| ವ್ಹಿ.ಜಿ ರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ಸಂಸ್ಥೆಯ ಜಿಲ್ಲಾಧ್ಯಕ್ಷ ಮುರಳೀಧರ ಎಕಲಾರಕರ್, ಸಂಸ್ಥೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎ ಗಫರ್, ಜಿಲ್ಲಾ ಗೌರವಾಧ್ಯಕ್ಷ ಶಿವರಾಜ ಢಣಕೆ ಆಗಮಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನೋದ ಸಿನ್ಹಾ, ಫೈರ್‌ಪ್ಯಾಕ್ ಸ್ಟೋಡಿಯೋ ನಿರ್ದೇಶಕಿ ರಚಿತಾ ಶಾಂತಪುರೆ ಇದ್ದರು.