ವಾಡಿ: ಚಿತ್ತಾಪುರ ತಾಲೂಕಿನ ಸನ್ನತಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಂಸದರು ಈ ನೆಲದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಹಾಗೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಶಿಲಾ ಶಾಸನ ಪತ್ತೆಯಾಗಿರುವುದು ತಮಗೆ ಗೊತ್ತೇ ಇರಲಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಈ ಶಿಲಾಶಾಸನಗಳು ಪತ್ತೆಯಾಗಿ 21 ವರ್ಷಗಳ ನಂತರವಾದರೂ ಸಂಸದರಿಗೆ ಜ್ಞಾನೋದಯ ಆಗಿರುವುದು ಖುಷಿಯ ವಿಚಾರ. ಒಟ್ಟಿನಲ್ಲಿ ಜಿಲ್ಲೆಗೆ ಡ್ರಾಮಾ ಮಾಡುವ ಸಂಸದರು ಸಿಕ್ಕಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಪಟ್ಟಣದಲ್ಲಿ ಗುರುವಾರ 6 ಕೋಟಿ ರೂ. ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ಸ್ತೂಪ ಸ್ಥಳದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ಭಾವಚಿತ್ರ ತೆಗೆಸಿಕೊಂಡು ದಲಿತರ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ತಾವು ಏಳು ವರ್ಷದ ಹಿಂದೆಯೇ ಸನ್ನತಿ ಅಭಿವೃದ್ಧಿಗೆ ಮತ್ತು ಇನ್ನಷ್ಟು ಸ್ಥಳದ ಉತ್ಖನನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದೇವು. ಮೋದಿ ಸರ್ಕಾರ ಇದುವರೆಗೂ ಈ ಕುರಿತು ಗಮನ ಹರಿಸಿಲ್ಲ. ಸನ್ನತಿ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿರುವ ಸಂಸದ ಡಾ| ಉಮೇಶ ಜಾಧವ ಅವರಿಗೆ ನಿಜವಾಗಲು ಬೌದ್ಧ ತಾಣದ ಬಗ್ಗೆ ಕಾಳಜಿ ಇದ್ದಿದ್ದರೆ, ಪಕ್ಷ ರಾಜಕಾರಣ ಬದಿಗೊತ್ತಿ ಸ್ಥಳಕ್ಕೆ ಭೇಟಿ ನೀಡುವ ಮುಂಚೆ ತಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಿತ್ತು. ತಾವು ರಾಜ್ಯ ಪ್ರವಾಸೋದ್ಯಮ ಸಚಿವರಾಗಿದ್ದಾಗ ಕೈಗೊಂಡ ಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಇವರ ದಲಿತರ ಪರ ಪ್ರೀತಿ ಭಾವಚಿತ್ರಕ್ಕೆ ಫೋಜ್ ಕೊಡಲು ಸೀಮಿತ ಎಂದು ಟೀಕಿಸಿದರು.
ಅಭಿವೃದ್ಧಿಯ ಗಂಧ-ಗಾಳಿ ಗೊತ್ತಿಲ್ಲದ ಬಿಜೆಪಿಯವರು ಚುನಾವಣೆ ಬಂದಾಗ ಧರ್ಮ, ಭಕ್ತಿಯನ್ನು ಜನರ ಮುಂದಿಟ್ಟು ಮರಳು ಮಾಡುತ್ತಾರೆ. ರಾಮ-ಕೃಷ್ಣರ ಕಥೆ ಹೇಳಿ ಮತ ಕೀಳುವ ಮೂಲಕ ಮೋಸ ಮಾಡುತ್ತಾರೆ. ಇಂಥಹವರನ್ನು ಅಧಿಕಾರದಿಂದ ದೂರವಿಡಿ ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಮುಖ್ಯಾ ಧಿಕಾರಿ ಡಾ| ಚಿದಾನಂದ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಪಾಟೀಲ, ನಾಗರೆಡ್ಡಿ ಪಾಟೀಲ ಕರದಾಳ, ಶಂಕ್ರಯ್ಯಸ್ವಾಮಿ ಮದರಿ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ಭೀಮರಾವ್ ದೊರೆ, ದೇವಿಂದ್ರ ಕರದಳ್ಳಿ, ಜಗಣ್ಣಗೌಡ ಪಾಟೀಲ, ರಮೇಶ ಮರಗೋಳ, ಸುಗಂಧಾ ಜೈಗಂಗಾ, ವಿಶಾಲ ನಂದೂರಕರ, ಮಲ್ಲಯ್ಯ ಗುತ್ತೇದಾರ, ಶರಣು ನಾಟೀಕಾರ, ಪೃಥ್ವಿರಾಜ ಸೂರ್ಯವಂಶಿ, ಮರಗಪ್ಪ ಕಲಕುಟಗಿ, ಮಹ್ಮದ್ ಗೌಸ್ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು. ಪುರಸಭೆ ಸಿಬ್ಬಂದಿ ಮಲ್ಲಿಕಾರ್ಜುನ ಯಳಸಂಗಿ ನಿರೂಪಿಸಿದರು.