ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ಘೋಷಣೆಯಾಗಿ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಈ ಸಂದರ್ಭದಲ್ಲಿ ಹಾಲಿ ಆಡಳಿತ ಮಂಡಳಿ ಸಮ್ಮೇಳನ ನಡೆಸುವುದು ಸರಿಯಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿ. ವಾಮದೇವಪ್ಪ ಅಭಿಪ್ರಾಯಪಟ್ಟರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ, ಕಾನೂನು ಏನೇ ಇದ್ದರೂ ಚುನಾವಣೆ ಘೋಷಣೆಯಾದ ಮೇಲೆ ಸಮ್ಮೇಳನದಂಥ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುವುದು ನೀತಿಯಲ್ಲ. ಜಿಲ್ಲಾ ಕೇಂದ್ರದಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಸುವ ಬದಲಾಗಿ ಪರಿಷತ್ ಚುನಾವಣೆ ಬಳಿಕ ಜಗಳೂರು ತಾಲೂಕಿನಲ್ಲಿ ಏರ್ಪಡಿಸುವ ಮೂಲಕ] ಅಲ್ಲಿಯೂ ಕನ್ನಡ ಚಟುವಟಿಕೆ ಚುರುಕುಗೊಳಿಸುವ ಕಾರ್ಯ ಆಗಬೇಕು ಎಂಬುದು ತಮ್ಮ ಅನಿಸಿಕೆ ಎಂದರು.
ಕಸಾಪ ಜಿಲ್ಲಾ ಸಾಹಿತ್ಯ ಪರಿಷತ್ ಹಾಲಿ ಅಧ್ಯಕ್ಷರೊಂದಿಗೆ ಈ ಹಿಂದೆಯೇ ಮುಂದಿನ ಬಾರಿ ನನ್ನನ್ನು ಕಸಾಪ ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಅವರೇ ಇನ್ನೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವುದರಿಂದ ಚುನಾವಣೆ ಸ್ಪರ್ಧೆಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ದೇವದಾಸಿ ಪದ್ಧತಿ ಮುಕ್ತ ಸಮಾಜಕ್ಕೆ ಶ್ರಮಿಸಿ
ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ಎಲ್ಲ ತಾಲೂಕುಗಳಲ್ಲಿರುವ ಸಾಹಿತಿ, ಲೇಖಕರ ವಿಳಾಸದ ಕೈಪಿಡಿ ತಯಾರಿಸುತ್ತೇನೆ.ನಗರ ಕನ್ನಡ ಭವನದಲ್ಲಿರುವ ಅಪಾರ ಗ್ರಂಥರಾಶಿ ಸದುಪಯೋಗವಾಗುವನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತೇನೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಪರಿಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ’ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸುವ ಯೋಚನೆ ಇದೆ. ನನ್ನ ಅವಧಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಹಾಗೂ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಇಚ್ಛೆ ಹೊಂದಿದ್ದೇನೆ ಎಂದು ತಿಳಿಸಿದರು.
ಕನ್ನಡಪ್ರೇಮಿಗಳಾದ ಸದಾಶಿವಪ್ಪ, ಶಾಂತ ಗಂಗಾಧರ, ಸಾಲಿಗ್ರಾಮ ಗಣೇಶ ಶೆಣೈ, ಸಂತೋಷಕುಮಾರ್ ಶೆಟ್ಟಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.