Advertisement

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಹೆಮ್ಮೆ ತಂದ ಗುರುಗಳು

01:21 AM Sep 05, 2019 | mahesh |

ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಮಕ್ಕಳನ್ನು ತಿದ್ದಿ,ತೀಡಿ ಸುಶಿಕ್ಷಿತರನ್ನಾಗಿ ಮಾಡುವ ಗುರುಗಳು ಸರ್ವಶ್ರೇಷ್ಠರು. ಗುರುಗಳೆಲ್ಲರ ನಿಸ್ವಾರ್ಥ ಸೇವೆಯನ್ನು ಶಿಕ್ಷಕರ ದಿನಾಚರಣೆಯ ಶುಭದಿನದಂದು ಸ್ಮರಿಸುತ್ತಾ ತಮ್ಮ ಸಾಧನೆ-ಚಟುವಟಿಕೆಗಳಿಂದ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ತಾಲೂಕುಗಳಿಗೆ ಹೆಮ್ಮೆ ತಂದ ಶಿಕ್ಷಕ-ಶಿಕ್ಷಕಿಯರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

Advertisement

 

ಬಾಲಕೃಷ್ಣ ಕೆ. ಹೇಮಳ

content-img

ಸುಬ್ರಹ್ಮಣ್ಯ: ಕಡಬ ತಾ| ಎಡಮಂಗಲದ ಕರೆಂಬಿಲ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಹೇಮಳ ಅವರಿಗೆ ಪ್ರಾಥಮಿಕ ಶಾಲಾ ಹಿರಿಯರ ವಿಭಾಗದಲ್ಲಿ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ದೊರೆತಿದೆ.

ಅವರು ಎಣ್ಮೂರು ಗ್ರಾಮದ ದಿ| ಕುಕ್ಕಪ್ಪ ಗೌಡ ಮತ್ತು ದಿ| ಕಾಳಮ್ಮ ದಂಪತಿ ಪುತ್ರ. 1993ರಲ್ಲಿ ಬೆಳ್ತಂಗಡಿ ತಾಲೂಕಿನ ಹನ್ನೆರಡು ಕಾವಲು ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ 28 ವರ್ಷ ಸೇವೆ ಸಲ್ಲಿಸಿದ್ದಾರೆ. ಶಾಲೆಗಳಲ್ಲಿ ಪತಂಜಲಿ, ಹಸುರು ತೋಟ ನಿರ್ಮಾಣ, ಆಟದ ಮೈದಾನ ವಿಸ್ತರಣೆ, ಕ್ರೀಡೆ, ಪರಿಸರ ಸಂರಕ್ಷಣೆ, ಸ್ವಚ್ಛತೆ ಕುರಿತು ಮಕ್ಕಳಲ್ಲಿ ಆಸಕ್ತಿ ಬೆಳೆಸುತ್ತಿದ್ದಾರೆ. ಕಲೆ, ಸಾಹಿತ್ಯ ಕ್ಷೇತ್ರಕ್ಕೂ ಒತ್ತು ನೀಡಿದ್ದಾರೆ. ಪತ್ನಿ ಭುವನೇಶ್ವರಿ ಮಾನ್ಯಡ್ಕ ಅವರೂ ಶಿಕ್ಷಕಿ. ರಕ್ಷಿತ್‌ ಬಿ.ಕೆ. ರಕ್ಷಿತಾ ಬಿ.ಕೆ. ಮಕ್ಕಳು.

ರಾಮಕೃಷ್ಣ ಮಲ್ಲಾರ

ಕಡಬ: ಬಂಟ್ರ ಮರ್ದಾಳ ಸರಕಾರಿ ಹಿ.ಪ್ರಾ. ಶಾಲೆ ಶಿಕ್ಷಕ ರಾಮಕೃಷ್ಣ ಮಲ್ಲಾರ ಅವರು ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

25 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು 1994ರಲ್ಲಿ ರೆಂಜಿಲಾಡಿ ಗ್ರಾಮದ ಮೀನಾಡಿ ಸ.ಕಿ.ಪ್ರಾ. ಶಾಲೆಯಲ್ಲಿ ಸೇವೆ ಆರಂಭಿಸಿ, ಬಂಟ್ರ ಮರ್ದಾಳ ಶಾಲೆಗೆ ವರ್ಗಾವಣೆಗೊಂಡಿದ್ದರು. ಪುತ್ತೂರು ತಾ| ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಡಬ ಟೀಚರ್ ಕೋ-ಆಪ್‌ ಸೊಸೈಟಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಸಾಮಾಜಿಕ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಡಬ ತಾ| ಯೇನೆಕಲ್ನ ರುಕ್ಮಯ್ಯ ಗೌಡ – ಚೆನ್ನಮ್ಮ ದಂಪತಿಯ ಪುತ್ರನಾಗಿರುವ ಅವರ ಪತ್ನಿ ವನಿತಾ ಬಿಳಿನೆಲೆ ಕೈಕಂಬ ಶಾಲೆಯಲ್ಲಿ ಶಿಕ್ಷಕಿ. ಮನ್ವಿತ್‌, ಲವಿತ್‌ ಅವರ ಮಕ್ಕಳು.

ಉಮಾಕುಮಾರಿ

ಬೆಳ್ಳಾರೆ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನ ಉಪಪ್ರಾಂಶುಪಾಲೆ ಉಮಾಕುಮಾರಿ ಭಾಜನರಾಗಿದ್ದಾರೆ.

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮೇರ್ಲ ಹೊನ್ನಪ್ಪ ಗೌಡ, ರುಕ್ಮಿಣಿ ದಂಪತಿ ಪುತ್ರಿಯಾದ ಉಮಾಕುಮಾರಿ 1992ರಲ್ಲಿ ಉಪ್ಪಿನಂಗಡಿ ಸ. ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. 2010ರಿಂದ 2016ರ ವರೆಗೆ ಪಂಜ ಸ.ಪ.ಪೂ. ಕಾಲೇಜಿನಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ, 2016ರಿಂದ ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನಲ್ಲಿ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳ್ಳಾರೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವರು ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ಅತ್ಯುತ್ತಮ ಫ‌ಲಿತಾಂಶ ದಾಖಲಾಗಿರುವುದು ಗಮನಾರ್ಹ.

ಸವಿತಾ

ಸುಳ್ಯ: ಕೊಡಿಯಾಲಬೈಲು ಸ.ಕಿ.ಪ್ರಾ. ಶಾಲಾ ಶಿಕ್ಷಕಿ ಸವಿತಾ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Advertisement

ಪತಿ ಸುಬ್ಬಯ್ಯ ಡಿ.ಎನ್‌., ಇಬ್ಬರು ಮಕ್ಕಳೊಂದಿಗೆ ಅಜ್ಜಾವರ ಗ್ರಾಮದ ದೊಡ್ಡೇರಿ ಪಿಂಡಿಮನೆಯಲ್ಲಿ ವಾಸಿಸುತ್ತಿರುವ ಅವರು 11 ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ಉದ್ದಂತಡ್ಕ ಶಾಲೆಯಲ್ಲಿ 5 ವರ್ಷ ಸೇವೆ ಸಲ್ಲಿಸಿ ಕೊಡಿಯಾಲಬೈಲು ಶಾಲೆಗೆ ವರ್ಗಾವಣೆಗೊಂಡು 6 ವರ್ಷ ಗಳಿಂದ ಇಲ್ಲಿ ಕರ್ತವ್ಯದಲ್ಲಿದ್ದಾರೆ. ಹಿಂದೆ ಏಕೋಪಾಧ್ಯಾಯ ಶಾಲಾ ಶಿಕ್ಷಕಿ, ಮುಖ್ಯ ಶಿಕ್ಷಕಿಯಾಗಿದ್ದರು. ಇವರು ಕರ್ತವ್ಯ ನಿರ್ವಹಿಸಿದ ಶಾಲೆಗೆ ಸ್ವಚ್ಛತಾ ಪ್ರಶಸ್ತಿ, ಹಸ್ತಪ್ರತಿ ಪ್ರಶಸ್ತಿ, ಕೈ ತೋಟ ಪ್ರಶಸ್ತಿ ಇವರಿಗೆ ಲಭಿಸಿದೆ.

ಜತೆಗೆ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಪ್ರಶಸ್ತಿಗೆ ಆಯ್ಕೆಯಾಗಲು ಊರವರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರೋತ್ಸಾಹ ಕಾರಣ ಎನ್ನುತ್ತಾರೆ ಸವಿತಾ.

ಜಯಂತ್‌ ವೈ.

ಕಾಣಿಯೂರು: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಇಡ್ಯಡ್ಕ ಸ.ಕಿ.ಪ್ರಾ. ಶಾಲೆಯ ಜಯಂತ್‌ ವೈ. ಆಯ್ಕೆಯಾಗಿದ್ದಾರೆ.

ಪಳ್ಳತ್ತಾರು, ಬೊಬ್ಬೆಕೇರಿ ಶಾಲೆಗಳಲ್ಲಿ ಶಿಕ್ಷಕರಾಗಿ, ಕಾಣಿಯೂರು ಸಿಆರ್‌ಪಿಯಾಗಿ ಪ್ರಸ್ತುತ ದೋಳ್ಪಾಡಿಯ ಇಡ್ಯಡ್ಕ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಸಿಆರ್‌ಪಿ ಆಗಿರುವ ಪತ್ನಿ ಯಶೋದಾ ಎ. ಮಕ್ಕಳಾದ ಶಿವಜಿತ್‌ ವೈ.ಜೆ., ಸಾಕ್ಷಾತ್‌ ವೈ.ಜೆ. ಎಣ್ಮೂರಿನಲ್ಲಿ ವಾಸ್ತವ್ಯ. ದಾಖಲಾತಿ ಹೆಚ್ಚಿಸಲು ತಮ್ಮ ವಾಹನದಲ್ಲೇ ಮಕ್ಕಳನ್ನು ಕರೆತಂದಿದ್ದರು. ಶಾಲೆಗೆ ದಾನಿಗಳಿಂದ ಸೊತ್ತು, ಅನುದಾನವನ್ನು ಕ್ರೋಡೀಕರಿಸಿದ್ದಾರೆ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸಿದ್ದಾರೆ. ಎಸೆಸೆಲ್ಸಿಯಲ್ಲಿ ಮಿಷನ್‌ 95+ ಅಭಿಯಾನ ನಡೆಸಿದ್ದರು. 676 ಶಿಕ್ಷಕರಿಗೆ ಯೋಗ ತರಬೇತಿ ನೀಡಿದ್ದರು. ಬೆಳಂದೂರಿನ ಜೆಸಿಐ ಅಧ್ಯಕ್ಷ, ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ.

ಸುಬ್ರಹ್ಮಣ್ಯ ಉಪಾಧ್ಯಾಯ

 

ಉಪ್ಪಿನಂಗಡಿ: ಬಜತ್ತೂರು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ 30 ವರ್ಷಗಳಿಂದ ಚಿತ್ರಕಲೆ ಹಾಗೂ ಕನ್ನಡ ಶಿಕ್ಷಕರಾಗಿರುವ ಸುಬ್ರಹ್ಮಣ್ಯ ಉಪಾಧ್ಯಾಯ ಅವರಿಗೆ ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆ ಯಲ್ಲಿ ವೃತ್ತಿ ಆರಂಭ. ರಟ್ಟು, ಬೆಂಕಿಕಡ್ಡಿ, ಬಟ್ಟೆ ಚೂರು, ಧಾನ್ಯಗಳು, ಬಳೆ ಚೂರುಗಳಿಂದ ತಯಾರಿಸಿದ ಕಲಾಕೃತಿ ಗಳನ್ನು 49 ಕಡೆಗಳಲ್ಲಿ ಪ್ರದರ್ಶಿಸಿದ್ದಾರೆ. ಪೆರಾಬೆ ಗ್ರಾಮದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರು. ರಾಮಕುಂಜೇಶ್ವರ, ನಡುಮಜಲು ವಿಷ್ಣುಮೂರ್ತಿ ದೇವಸ್ಥಾನಗಳ ಜಾತ್ರೆಗಳಲ್ಲಿ 40 ವರ್ಷಗಳಿಂದ ಬ್ರಹ್ಮವಾಹಕರಾಗಿದ್ದಾರೆ. ಆಲಂಕಾರು ಗ್ರಾಮದ ಕುಪಾÛಜೆ ದಿ| ಮಧ್ವ ಉಪಾಧ್ಯಾಯ – ಶಾರದಾ ದಂಪತಿ ಪುತ್ರ. ಪತ್ನಿ ಜಾಹ್ನವಿ ಗೃಹಿಣಿ. ಪುತ್ರ ಅಮೃತಾಂಶು ಗ್ರಾಮಕರಣಿಕ. ಕಿರಿಯ ಪುತ್ರ ದೀಪ್ತಾಂಶು ಎಂಜಿನಿಯರಿಂಗ್‌ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.