Advertisement
ವಿನಯ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡಿನ ಗಡಿನಾಡು ಘಟಕ ಹಾಗೂ ಚಾಮರಾಜನಗರ ಜಿಲ್ಲಾ ಕಸಾಪ ಘಟಕ ಎರಡೂ ಕಡೆ ಸದಸ್ಯತ್ವ ಹೊಂದಿರುವುದು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿನ ನಿಯಮಕ್ಕೆ ವಿರುದ್ಧವಾಗಿರುವುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
Related Articles
Advertisement
ಚಾ.ನಗರ ಜಿಲ್ಲಾ ಕಸಾಪ ಸದಸ್ಯರಾಗಿ ಬಿ.ಎಸ್. ವಿನಯ್ ಕೇರಾಫ್ ಮಹದೇವಸ್ವಾಮಿ, ಹೆಗ್ಗೊಠಾರ, ಚಾ.ನಗರ ತಾಲೂಕು ವಿಳಾಸದಲ್ಲಿ ಮತದಾರರ ಪಟ್ಟಿಯಲ್ಲಿದ್ದಾರೆ. ತಮಿಳುನಾಡಿನ ಗಡಿನಾಡು ಘಟಕದ ಮತದಾರರ ಪಟ್ಟಿಯಲ್ಲಿ ಬಿ.ಎಸ್. ವಿನಯ್, ನೀಲಗಿರಿ ಮೋಟಾರ್‌ಸ್, ತಾಳವಾಡಿ, ಈರೋಡು ಜಿಲ್ಲೆ ಎಂಬ ವಿಳಾಸ ನೀಡಿದ್ದಾರೆ. ಹೀಗೆ ಏಕಕಾಲದಲ್ಲಿ ಎರಡೂ ಕಡೆ ಸದಸ್ಯತ್ವ ಹೊಂದಿರುವುದರಿಂದ ಯಾವುದೇ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಲು ಅರ್ಹತೆ ಹೊಂದಿರುವುದಿಲ್ಲ ಎಂದು ಬೆಂಗಳೂರಿನ ಕೇಂದ್ರ ಚುನಾವಣಾಧಿಕಾರಿ, ಶುಕ್ರವಾರ ಮಧ್ಯಾಹ್ನ ಮೊದಲಿಗೆ ಗಡಿನಾಡು ಘಟಕದ ನಾಮಪತ್ರ ತಿರಸ್ಕರಿಸಿದರು. ಇದೇ ಮಾನದಂಡದ ಮೇಲೆ ಚಾ.ನಗರ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಚಾ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ನಾಮಪತ್ರ ತಿರಸ್ಕರಿಸಿದರು.
ಬಿ.ಎಸ್. ವಿನಯ್ ಅವರು ಚಾಮರಾಜನಗರ ಜಿಲ್ಲಾ ಕಸಾಪ ಚುನಾವಣೆಯ ಪ್ರಬಲ ಅಭ್ಯರ್ಥಿಯಾಗಿದ್ದರು.ಮಲೆಯೂರು ಗುರುಸ್ವಾಮಿ ನಾಮಪತ್ರ ವಾಪಸ್: ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿಯವರು ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆದರು. ಹೊಸಬರಿಗೆ ಅವಕಾಶ ನೀಡೋಣ ಎಂಬ ಕಾರಣಕ್ಕೆ ನಾಮಪತ್ರ ವಾಪಸ್ ಪಡೆಯಲು ಕಾರಣ. ಅವಿರೋಧ ಆಯ್ಕೆಯಾಗುತ್ತೀರಿ ಎಂಬ ಹಿರಿಯ ಸದಸ್ಯರ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದೆ. ಆದರೆ ಈಗ ಅಂಥ ಪರಿಸ್ಥಿತಿ ಕಾಣುತ್ತಿಲ್ಲ. ಎರಡು ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೇಸರವಾಗಿದೆ ಹಾಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಮ.ಗು. ಮಾಧ್ಯಮಗಳಿಗೆ ತಿಳಿಸಿದರು. ನಾಮಪತ್ರ ವಾಪಸ್ ಪಡೆಯಲು ಏ. 12 ಕೊನೆಯ ದಿನಾಂಕವಾಗಿದೆ. ಪ್ರಸ್ತುತ ಸಿ.ಎಂ. ನರಸಿಂಹಮೂರ್ತಿ, ಶೈಲಕುಮಾರ್, ನಾಗೇಶಸೋಸ್ಲೆ, ನಿರಂಜನಕುಮಾರ್, ಸ್ನೇಹಲಕ್ಷ್ಮಿ, ಮಾದಾಪುರ ರವಿಕುಮಾರ್, ಶಿವಾಲಂಕಾರಯ್ಯ ಅವರ ನಾಮಪತ್ರಗಳು ಅಂಗೀಕೃತವಾಗಿವೆ. ಇವರಲ್ಲಿ ಕಣದಲ್ಲಿ ಯಾರ್ಯಾರು ಉಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮೇ. 9ರಂದು ರಾಜ್ಯ ಹಾಗೂ ಜಿಲ್ಲಾ ಘಟಕಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.