ಧಾರವಾಡ: ಇಲ್ಲಿನ ಸಿವಿಲ್ ಆಸ್ಪತ್ರೆ ಆವರಣದಲ್ಲಿರುವ ಡಿಮ್ಹಾನ್ಸ್ ಕೋವಿಡ್ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿಣ್ಣನ್ನವರ್ ಆರ್.ಎಸ್. ಶನಿವಾರ ಭೇಟಿ ನೀಡಿದ್ದರು.
ಕೊರೊನಾ ಸೋಂಕಿತ ಆರೈಕೆದಾರರ ಜೊತೆ ಚರ್ಚಿಸಿ ಧೈರ್ಯ ತುಂಬಿದರು. ಸ್ವಲ್ಪ ಹೊತ್ತು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಭಿಪ್ರಾಯ ಪಡೆದರು. ಕೊರೊನಾ ಸೋಂಕಿತ ಸಂಬಂಧಿ ಕರು ಇಲ್ಲಿನ ಸೌಲಭ್ಯ ಹಾಗೂ ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಮೆಚ್ಚುಗೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. ಕೋವಿಡ್ ಆಸ್ಪತ್ರೆಯ ಕುರಿತು ಎಲ್ಲಾ ತಜ್ಞರ ಜೊತೆ ನ್ಯಾಯಾಧೀಶರು ಚರ್ಚಿಸಿದರು.
31 ಕೊರೊನಾ ಸೋಂಕಿತರು ದಾಖಲಾಗಿದ್ದು ಎಲ್ಲಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡುತ್ತಿರುವುದರ ಬಗ್ಗೆ, ರೋಗಿಗಳಿಗೆ ಕೊಡುವ ಆಹಾರ ಗುಣಮಟ್ಟದ ಬಗ್ಗೆ, ಆಹಾರವನ್ನು ಕೊಡುತ್ತಿರುವ ಏಜೆನ್ಸಿಯ ಬಗ್ಗೆ, ಕೊವಿಡ್ ವಾರ್ಡ್‌ನಲ್ಲಿ ಆಕ್ಸಿಜನ್ ಸೌಲಭ್ಯದ ಕುರಿತು ವೈದ್ಯ ತಂಡದ ಜೊತೆ ಚರ್ಚಿಸಿದರು.
ಡಿಮ್ಹಾನ್ಸ್ ನಿರ್ದೆಶಕ ಡಾ| ಮಹೇಶ ದೇಸಾಯಿ ಮಾತನಾಡಿ, ಡಿಮ್ಹಾನ್ಸ್ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತಂಡದವರು ಹೆಚ್ಚಿನ ಕಾಳಜಿ ವಹಿಸಿ ಕೋವಿಡ್ ರೋಗಿಗಳ ಮಾನಸಿಕ ಆರೋಗ್ಯಕ್ಕೆ ಮಹತ್ವ ನೀಡುತ್ತಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಆಪ್ತಸಮಾಲೋಚನೆ, ಟೆಲಿ ಕೌನ್ಸೆಲಿಂಗ್‌ನಿಂದ ಮನೋಸ್ಥೈರ್ಯ ಹೆಚ್ಚಿಸಲಾಗುತ್ತಿದೆ. ಗುಣಮಟ್ಟದ ಸೇವೆ ಒದಗಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಮನೋರೋಗ ತಜ್ಞ ಡಾ| ಆದಿತ್ಯ ಪಾಂಡುರಂಗಿ, ಹಿರಿಯ ಶಸ್ತ್ರ ಚಿಕಿತ್ಸಕ ಡಾ| ಸಂಗಪ್ಪ ಗಾಬಿ, ಡಾ| ಉಮೇಶ ಜಿ., ಡಾ| ಶ್ರೀಧರ ಕುಲಕರ್ಣಿ, ಪಿಎಲ್‌ವಿ ಸದಸ್ಯರಾದ ಅಶೋಕ ಕೋರಿ ಉಪಸ್ಥಿತರಿದ್ದರು.