Advertisement

ಬಿಜನಗೇರಾ ಬಳಿ ಶೀಘ್ರವೇ ಜಿಲ್ಲಾ ಕಾರಾಗೃಹ!

05:17 PM Jan 02, 2022 | Team Udayavani |

ರಾಯಚೂರು: ಬಹುದಿನಗಳ ಬೇಡಿಕೆ ಜಿಲ್ಲಾ ಕಾರಾಗೃಹ ಸ್ಥಳಾಂತರಕ್ಕೆ ಶೀಘ್ರವೇ ಚಾಲನೆ ಸಿಗುವ ಲಕ್ಷಣ ಗೋಚರವಾಗಿವೆ.

Advertisement

ಸಮೀಪದ ಬಿಜನಗೇರಾ ಬಳಿ 19.15 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು, ಜಿಲ್ಲಾಧಿಕಾರಿ ಅನುಮೋದನೆ ನೀಡುವುದೊಂದೇ ಬಾಕಿ ಇದೆ. ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಬೆಳಗಾವಿ ಡಿಐಜಿ ಉತ್ತರ ಕರ್ನಾಟಕ ಭಾಗದಲ್ಲಿ ಕಾರಾಗೃಹಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು, 100 ಕೋಟಿ ರೂ. ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದರು. ಅದರ ಭಾಗವಾಗಿ ಅಧಿಕಾರಿಗಳು ಜಿಲ್ಲಾ ಕಾರಾಗೃಹ ಸ್ಥಳ ಶೋಧನೆಗೆ ಮುಂದಾಗಿದ್ದರು.

ಸುಸಜ್ಜಿತ ಕಾರಾಗೃಹ ನಿರ್ಮಾಣಕ್ಕೆ ವಿಶಾಲವಾದ ಸ್ಥಳ ಬೇಕಿರುವ ಕಾರಣ ನಗರ ಹೊರವಲಯದ ಬಿಜನಗೇರಾ ಬಳಿ ಸ್ಥಳ ಆಯ್ಕೆ ಮಾಡಲಾಗಿದೆ. ಡಿಸಿ ಅನುಮೋದನೆ ನೀಡುತ್ತಿದ್ದಂತೆ ಆ ಸ್ಥಳವನ್ನು ಇಲಾಖೆ ಹೆಸರಿಗೆ ವರ್ಗಾಯಿಸಿ ಕಾರಾಗೃಹ ನಿರ್ಮಾಣಕ್ಕೆ ಮುಂದಾಗುವ ನಿರೀಕ್ಷೆ ಇದೆ.

ಇಕ್ಕಟ್ಟು ಪ್ರದೇಶದಲ್ಲಿತ್ತು ಈಗಿರುವ ಕಾರಾಗೃಹ

ಈಗಿರುವ ಜೈಲು ನಗರದ ಹೃದಯ ಭಾಗದಲ್ಲಿದ್ದು, ಒಂದೂವರೆ ಎಕರೆ ಪ್ರದೇಶದಲ್ಲಿದೆ. ಜೈಲಿನ ಸುತ್ತಲೂ ಜನವಾಸವಿದ್ದಾರೆ. ಇದು 170 ಕೈದಿಗಳ ಕೂಡಿಡುವ ಸಾಮರ್ಥ್ಯ ಹೊಂದಿದ್ದು, ಈಗ 212 ಕೈದಿಗಳಿದ್ದಾರೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಲಾಗುತ್ತಿದೆ. ಅಲ್ಲದೇ ಯಾವುದೇ ಚಟುವಟಿಕೆ ನಡೆಸಬೇಕಾದರೂ ಇಲ್ಲಿ ಸ್ಥಳಾಭಾವ ಎದುರಾಗುತ್ತಿದೆ. ಇನ್ನು ಕೈದಿಗಳನ್ನು ಕರೆ ತರುವುದು, ನ್ಯಾಯಾಲಯಕ್ಕೆ ಹಾಜರು ಪಡಿಸುವುದು ಸೇರಿದಂತೆ ಇತ್ಯಾದಿ ಪ್ರಕ್ರಿಯೆಗಳು ನಿತ್ಯ ನಡೆಯುತ್ತಿದ್ದು, ರಸ್ತೆ ಮಧ್ಯೆಯೇ ಪೊಲೀಸ್‌ ವಾಹನ ನಿಲ್ಲಿಸುವ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಎಲ್ಲ ಕಾರಣಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕಾರಾಗೃಹ ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಬೃಹತ್‌ ಕಾರಾಗೃಹ ನಿರ್ಮಾಣ ಅನಿವಾರ್ಯವಾಗಿತ್ತು.

Advertisement

ಕೈದಿಗಳ ಚಟುವಟಿಕೆಗೆ ಪೂರಕ

ಈಗಿರುವ ಜೈಲುಗಳು ಕೇವಲ ಶಿಕ್ಷೆ ನೀಡುವ ತಾಣವಾಗಿರದೆ ಕೈದಿಗಳ ಮನಪರಿವರ್ತನೆ ತಾಣಗಳಾಗಿ ಮಾರ್ಪಟ್ಟಿವೆ. ಜೈಲುಗಳಲ್ಲೂ ನಾನಾ ರೀತಿಯ ಚಟುವಟಿಕೆಗಳು, ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಲ್ಲ ಈಗಿರುವ ಜೈಲಿನ ವಾತಾವರಣ ಅಷ್ಟೊಂದು ಪೂರಕವಾಗಿಲ್ಲ. ಉದ್ದೇಶಿತ ಕಾರಾಗೃಹದಲ್ಲಿ 19.15 ಎಕರೆ ಸ್ಥಳಾವಕಾಶ ಸಿಗಲಿದ್ದು, ಅಲ್ಲಿ ದೊಡ್ಡ ಕಟ್ಟಡದ ಜತೆ ವಿವಿಧ ಚಟುವಟಿಕೆ ನಡೆಸಲು ಸಾಕಷ್ಟು ಜಾಗ ಸಿಗಲಿದೆ. ಕ್ರೀಡೆಗಳಿಗೆ, ತೋಟಗಾರಿಕೆಗೆ, ಉದ್ಯಾನಕ್ಕೆ ಯಾವುದಾದರೂ ದೊಡ್ಡ ಕಾರ್ಯಕ್ರಮ ಆಯೋಜಿಸಲು ನಾನಾ ಕಾರಣಗಳಿಗೆ ದೊಡ್ಡ ಮೈದಾನ ಉಪಯೋಗವಾಗಲಿದೆ.

ಹೊಸ ಕಾರಾಗೃಹ ನಿರ್ಮಾಣದ ಉದ್ದೇಶದಿಂದ ಸಮೀಪದ ಬಿಜನಗೇರಾ ಹತ್ತಿರ 19.15 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಇಲಾಖೆಗೆ ಹಸ್ತಾಂತರಿಸಲು ಡಿಸಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಕೈದಿಗಳಿಗೆ ಈ ಸ್ಥಳ ಸಾಲದಾಗಿದೆ. ಅಲ್ಲದೇ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಡಿಸಿಯವರ ಅನುಮೋದನೆ ಬಳಿಕ ಮುಂದಿನ ಚಟುವಟಿಕೆ ಆರಂಭಿಸಲಾಗುವುದು. -ಬಿ.ಆರ್‌.ಅಂದಾನಿ, ಅಧೀಕ್ಷಕರು, ಜಿಲ್ಲಾ ಕಾರಾಗೃಹ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next