Advertisement

ಲಾಕ್‌ಡೌನ್‌ ಮುಂದುವರಿಕೆ; ಸಿಎಂ ನಿರ್ಧಾರಕ್ಕೆ

02:52 PM May 20, 2021 | Team Udayavani |

ಬೀಳಗಿ: ರಾಜ್ಯದಲ್ಲಿ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಮೇ 24ರ ಲಾಕ್‌ಡೌನ್‌ ಜಾರಿಯಲ್ಲಿದ್ದು, ಅದನ್ನು ಮುಂದುವರೆಸುವ ಕುರಿತ ನಿರ್ಧಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ತಾಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೊಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಚಿಕಿತ್ಸೆಗೆ ಬೇಕಿರುವ ಎಲ್ಲ ರೀತಿಯ ಸೌಲಭ್ಯ ಕೈಗೊಂಡಿದೆ. ಲಾಕ್‌ಡೌನ್‌ ವಿಸ್ತರಣೆ ಕುರಿತು ತಜ್ಞರ ಸಮಿತಿ ಹಾಗೂ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿಯೂ ಉತ್ತಮ ಚಿಕಿತ್ಸೆ, ವ್ಯಾಕ್ಸಿನೇಶನ್‌ ಸೌಲಭ್ಯ ಸೇರಿದಂತೆ ಆಕ್ಸಿಜನ್‌ ಪೂರೈಕೆಗೆ ಕ್ರಮ ತಗೆದುಕೊಳ್ಳಲಾಗಿದೆ. ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚಳವಾಗಬಾರದು ಎಂದು ಹಲವಾರು ಕ್ರಮ ತಗೆದುಕೊಂಡಿದ್ದೇವೆ ಎಂದು ಹೇಳಿದರು.

ಬೀಳಗಿಯಲ್ಲಿ 300 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಸ್ವಲ್ಪ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಿಸಿಸಿ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬೇಕು. ಸರ್ಕಾರ ನೀಡಿರುವ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ರಾಜ್ಯದಲ್ಲಿ ಉಚಿತ ಪಡಿತರ ವಿತರಣೆ ಆರಂಭ ಮಾಡಲಾಗಿದೆ. ಬಡ ಜನರ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿದ್ದು ಕಂಡು ಬಂದರೆ ಅವುಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು. ಉಸ್ತುವಾರಿ ಸಚಿವನಾದ ಬಳಿಕ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಸಂಚಾರ ಮಾಡಿದ್ದೇನೆ. ಎಲ್ಲಿಯೂ ತೊಂದರೆಯಾಗದಂತೆ ಕ್ರಮ ತಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ನಾಲ್ಕು ದಿನಗಳ ನಂತರ ಮತ್ತೆ ಬಾದಾಮಿ, ಹುನಗುಂದ ಹಾಗೂ ಮುಧೋಳ ತಾಲೂಕಿಗೆ ಭೇಟಿ ನೀಡಿ ಆಸ್ಪತ್ರಗೆಗಳಿಗೆ ಮತ್ತು ರೋಗಿಗಳಿಗೆ ಬೇಕಿರುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಬೀಳಗಿಯಲ್ಲಿ ಎಂಆರ್‌ಎನ್‌ ಫೌಂಡೇಶನ್‌ ವತಿಯಿಂದ ಕಳೆದ 10 ದಿನಗಳಿಂದ ಕೋವಿಡ್‌ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು ಅಭಿನಂದನಾರ್ಹ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಡವರಿಗಾಗಿ ಇತರೆ ವರ್ಗದವರಿಗಾಗಿ ಘೋಷಣೆ ಮಾಡಿರುವ 1250 ಕೋಟಿ ರೂ. ಪ್ಯಾಕೇಜ್‌ ಉತ್ತಮವಾಗಿದ್ದು, ಇದನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಜತೆಗೆ ಕೊರೊನಾ ಕುರಿತಾಗಿ ಎಲ್ಲರಲ್ಲಿಯೂ ಜಾಗೃತಿ ಮೂಡಬೇಕು ಎಂದರು.

Advertisement

ಕೇರ್‌ ಸೆಂಟರ್‌ಗೆ ಭೇಟಿ: ಪಟ್ಟಣದ ಮೊರಾರ್ಜಿ ವಸತಿ ನಿಲಯದಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಎಂಆರಎನ ಪೌಂಡೇಶನ್‌ ಉಚಿತ ಊಟ ಸಿದ್ಧಪಡಿಸುವ ಸ್ಥಳವಾದ ಕಾಳಿಕಾ ದೇವಸ್ಥಾನಕ್ಕೆ ಸಚಿವ ಉಮೇಶ ಕತ್ತಿ ಭೇಟಿ ನೀಡಿ ಪರಿಶೀಲಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ತಹಶೀಲ್ದಾರ್‌ ಶಂಕರ ಗೌಡಿ, ಡಾ|ದಯಾನಂದ ಕರೆನ್ನವರ, ಸಿಪಿಐ ಸಂಜೀವ ಬಳಿಗಾರ, ಜಿಪಂ ಅಧಿಕಾರಿ ಅರಳಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next