Advertisement

ಜಿಲ್ಲಾಡಳಿತ ಮಾರ್ಗದರ್ಶಿ ಸೂತ್ರ

10:59 AM Jul 09, 2019 | keerthan |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಖಾಸಗಿ ಜೀವನದ ಬಗ್ಗೆಯೂ ಶಿಕ್ಷಕರು ಮತ್ತು ಮಾರ್ಗದರ್ಶಕರು ವೈಯಕ್ತಿಕವಾಗಿ ವಿಶೇಷ ಗಮನ ನೀಡಬೇಕು. ಇದಕ್ಕಾಗಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಿ, ಆಪ್ತ ಮಾರ್ಗದರ್ಶನ ನಡೆಸಬೇಕು. ಜತೆಗೆ ವಿದ್ಯಾರ್ಥಿಗಳು ಮೊಬೈಲ್‌ ಬಳಸುವ ಬಗ್ಗೆ ಆಯಾ ಶಾಲಾ ಕಾಲೇಜುಗಳು ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರದಲ್ಲಿ ಶಾಲಾ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದರು.

Advertisement

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಹಾಗೂ ಮಾದಕ ದ್ರವ್ಯ ಸೇವನೆ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳೂರಿನ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಶಾಲೆ, ಕಾಲೇಜು ಮುಖ್ಯಸ್ಥರು, ಸಂಘ-ಸಂಸ್ಥೆಗಳು, ಎನ್‌ಜಿಒ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಹದಿಹರೆಯದ ವಿದ್ಯಾರ್ಥಿಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ಅವರ ಹೇಳಿಕೊಳ್ಳಲಾಗದ ವಿಚಾರಗಳನ್ನು ಅರಿತುಕೊಂಡು ಅವರ ಮಾನಸಿಕ ಸ್ಥಿತಿ ಅರ್ಥೈಸಿಕೊಳ್ಳುವುದಕ್ಕೆ ಮಾರ್ಗದರ್ಶಕರು ಬೇಕು. ಈ ವ್ಯವಸ್ಥೆ ಈಗಾಗಲೇ ಹಲವು ದೇಶಗಳ ಕಾಲೇಜುಗಳಲ್ಲಿವೆ. ನಾಗರಿಕ ಸೇವಾ ತರಬೇತಿಯಲ್ಲೂ ಇದೆ. ಮಾರ್ಗದರ್ಶಕರು ಪ್ರತಿ ವಿದ್ಯಾರ್ಥಿಯೊಂದಿಗೆ ಮಾತನಾಡುವ ಆವಶ್ಯಕತೆ ಇದೆ. ಯಾವ ರೀತಿ ಈ ವ್ಯವಸ್ಥೆ ನಡೆಯಬೇಕು, ವ್ಯವಸ್ಥೆಯ ರಚನೆ ಹೇಗಿರಬೇಕು ಎನ್ನುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರ ರಚಿಸಲಾಗುವುದು ಎಂದರು.

ಡ್ರಗ್ಸ್‌ ಜಾಲ; ಮಾಹಿತಿ ನೀಡಿ
ಡಿಸಿಪಿ ಹನುಮಂತರಾಯ ಮಾತನಾಡಿ, ಮೊಬೈಲ್‌, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಶಾಲೆ, ಕಾಲೇಜುಗಳಲ್ಲಿ ಮೊಬೈಲ್‌ ನಿರ್ಬಂಧಿಸುವ ಕುರಿತು ಜಿಲ್ಲಾಡಳಿತ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿದರೆ ಅದರಂತೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಶಾಲೆಯಲ್ಲಿ ಮೊಬೈಲ್‌ ನಿಷೇಧಕ್ಕೆ ಕಠಿನ ಕ್ರಮ ಆಗಬೇಕಿದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲ ಸಂಕೀರ್ಣವಾಗಿದೆ. ಒಬ್ಬ ಅಪರಾಧಿಯನ್ನು ಜೈಲಿಗೆ ಕಳುಹಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇಲ್ಲಿ ಆ್ಯಪ್‌ ಆಧಾರಿತವಾಗಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ. ಸಾರ್ವಜನಿಕರು ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸಿದರೆ ಈ ಜಾಲವನ್ನು ಪೂರ್ಣವಾಗಿ ಮಟ್ಟ ಹಾಕಲು ಸಹಕಾರಿಯಾಗುತ್ತದೆ ಎಂದರು.

ಮಂಗಳೂರು ವಿವಿ ಕುಲಸಚಿವ ಪ್ರೊ| ಎ.ಎಂ. ಖಾನ್‌ ಮಾತನಾಡಿ, ವಿ.ವಿ. ವ್ಯಾಪ್ತಿಗೆ ಬರುವ ಎಲ್ಲ ಕಾಲೇಜು ಗಳಲ್ಲಿ ಆಪ್ತ ಸಲಹೆಗಾರರನ್ನು ನೇಮಕಗೊಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಮುಂದೆ ಕ್ಲಸ್ಟರ್‌ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ತಜ್ಞರ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು. ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್‌, ಮನೋರೋಗ ತಜ್ಞ ಡಾ| ರವೀಶ್‌ ತುಂಗ ಉಪಸ್ಥಿತರಿದ್ದರು.

ಸಹಾಯವಾಣಿ ಇನ್ನಷ್ಟು ಸಶಕ್ತ
ಸದ್ಯ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ 1077 ನಂಬರ್‌ನ “ಸಹಾಯವಾಣಿ’ಯನ್ನು ಸಶಕ್ತಗೊಳಿಸಿ ವಿದ್ಯಾರ್ಥಿಗಳ ದೂರು- ಅಳಲು ಕೇಳಿ, ಸೂಕ್ತವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಬಲ್ಲ ತಂಡವನ್ನು ಸಿದ್ಧಗೊಳಿಸ ಲಾಗುವುದು. ಅನೇಕ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆ ಹೇಳಿ ಕೊಳ್ಳಲು ಸೂಕ್ತ ಜಾಗವಿಲ್ಲದೆ ಸುಮ್ಮನಾಗಿದ್ದಾರೆ ಎಂಬ ಮಾತು ಕೇಳಿಬಂದಿರುವ ಕಾರಣ ಸಹಾಯವಾಣಿಯನ್ನು ಸಶಕ್ತಗೊಳಿಸಲು ತೀರ್ಮಾನಿಸಲಾಗಿದೆ. ನಿರ್ದಿಷ್ಟ ದೂರುಗಳ ಪರಿಹಾರಕ್ಕೆ ಆಪ್ತ ಸಮಾಲೋಚಕರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

Advertisement

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು
* ಅಪರಾಧ ಕೃತ್ಯಗಳಿಗೆ ಇರುವ ಶಿಕ್ಷೆಯ ಕುರಿತು ಪ್ರತಿ ಕಾಲೇಜಿನಲ್ಲೂ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ನಡೆಯಬೇಕು.
* ಮಹಿಳಾ ಸಹಾಯವಾಣಿ ಸುಲಭವಾಗಿ ಲಭ್ಯವಾಗಬೇಕು.
* ದೌರ್ಜನ್ಯ ಮತ್ತು ಮಾದಕ ವಸ್ತು ಜಾಲದಲ್ಲಿರುವವರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು.
*ವಿದ್ಯಾರ್ಥಿಗಳು ಮೊಬೈಲ್‌ ಬಳಸದಂತೆ ಪೋಷಕರೇ ಎಚ್ಚರಿಕೆ ವಹಿಸಬೇಕು.
*ಅಧಿಕೃತ ಕಾರ್ಯಕ್ರಮ ಹೊರತುಪಡಿಸಿ ವಿದ್ಯಾರ್ಥಿಗಳನ್ನು ಶಾಲೆ-ಕಾಲೇಜಿನಿಂದ ಹೊರಗೆ ಕಳುಹಿಸಬಾರದು.

Advertisement

Udayavani is now on Telegram. Click here to join our channel and stay updated with the latest news.

Next