Advertisement

ತ್ಯಾಜ್ಯ ನಿರ್ವಹಣೆಗೆ ಜಿಲ್ಲಾಸ್ಪತ್ರೆ ಮಾದರಿ

11:53 PM Jan 23, 2020 | Sriram |

ಆಸ್ಪತ್ರೆ ತ್ಯಾಜ್ಯಗಳನ್ನು ಖರೀದಿಸುವ ಸಂಸ್ಥೆಗಳೇ ಇವೆ. ಹಾಗಾಗಿ ನಿರ್ವಹಣೆ ಜತೆ ಒಂದಷ್ಟು ಆದಾಯ ಸಂಗ್ರಹವೂ ಸಾಧ್ಯವಾಗುತ್ತದೆ. ಜಿಲ್ಲೆಯ ಇತರೆ ಸರಕಾರಿ, ಖಾಸಗಿ ಆಸ್ಪತ್ರೆಗಳು ಈ ಘಟಕವನ್ನು ಮಾದರಿಯಾಗಿಟ್ಟುಕೊಳ್ಳುವ ಅಗತ್ಯವಿದೆ.

Advertisement

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಲುವಾಗಿ ಸುಮಾರು 1 ವರ್ಷಗಳ ಹಿಂದೆ ಆರಂಭಗೊಂಡ ತ್ಯಾಜ್ಯ ನಿರ್ವಹಣೆ ಘಟಕ (ಎಸ್‌ಎಲ್‌ಆರ್‌ಎಂ)ವು ಆದಾಯವನ್ನು ಗಿಟ್ಟಿಸಿಕೊಳ್ಳುವುದರ ಜತೆಗೆ ಶುಚಿತ್ವದಲ್ಲಿ ಮಾದರಿ ಎನಿಸಿಕೊಂಡಿದೆ.

ಈ ಮೊದಲು 5.30 ಟನ್‌ ವಿಲೇವಾರಿ
ಎಸ್‌ಎಲ್‌ಆರ್‌ಎಂ ಕೇಂದ್ರದಲ್ಲಿ ಆಸ್ಪತ್ರೆಯಿಂದ ಉತ್ಪಾದನೆ ಯಾಗುವ ತ್ಯಾಜ್ಯಗಳನ್ನು (ಜನರಲ್‌ ವೇಸ್ಟ್‌) ಅಂದರೆ ಮೆಡಿಸಿನ್‌ ಕವರ್‌, ಮೆಡಿಸಿನ್‌ ಬಾಕ್ಸ್‌, ಬಾಟಲಿಗಳು, ಇತರ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸಿ ಪುನರ್‌ ವಿಂಗಡಿಸಲಾಗುತ್ತಿದೆ. 6 ತಿಂಗಳ ಹಿಂದೆ ಇಲ್ಲಿ ವಿಲೇವಾರಿಯಾದ ತ್ಯಾಜ್ಯವನ್ನು ಟೆಂಡರ್‌ ಮೂಲಕ ಮಾರಾಟ ಮಾಡಲಾಗಿತ್ತು. 5.30 ಟನ್‌ ತ್ಯಾಜ್ಯ ಸಂಗ್ರಹವಾಗಿದ್ದು, ಜಿಲ್ಲಾಸ್ಪತ್ರೆಗೆ 32 ಸಾವಿರ ರೂ. ಆದಾಯ ಬಂದಿತ್ತು. ಈ ಬಾರಿ 6 ಟನ್‌ ತ್ಯಾಜ್ಯ ಸಂಗ್ರಹಗೊಂಡಿದ್ದು, ವಿಲೇವಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಯಶಸ್ವಿ ಪ್ರಯೋಗ
ಇದು ಜಿಲ್ಲೆಯಲ್ಲಿಯೇ ಮೊದಲ ಪ್ರಯೋಗವಾಗಿದೆ. ಇಲ್ಲಿ ವೈದ್ಯಕೀಯವಾಗಿ ಬಳಸಿದ ಕೆಲವು ಸಾಮಾನ್ಯ ತ್ಯಾಜ್ಯಗಳನ್ನು (ಜನರಲ್‌ ವೇಸ್ಟ್‌) ಮಾತ್ರ ಸಂಗ್ರಹಿಸಿ ಪುನರ್‌ ವಿಂಗಡಿಸಲಾಗುತ್ತದೆ. ಯಾವುದೇ ಬಯೋ ಮೆಡಿಕಲ್‌ ವೇಸ್ಟ್‌ನ್ನು ಸಂಗ್ರಹಿಸಲಾಗುತ್ತಿಲ್ಲ. ಸದ್ಯ ಜಿಲ್ಲಾಸ್ಪತ್ರೆ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿ, ಸರ್ವೇಕ್ಷಣಾ ಘಟಕ, ಸಿಟಿ ಸ್ಕ್ಯಾನ್‌ ಸೆಂಟರ್‌ ಮತ್ತು ಆಯುಷ್‌ ಆಸ್ಪತ್ರೆಯ ತ್ಯಾಜ್ಯಗಳನ್ನು ಇಲ್ಲಿ ಸಂಗ್ರಹಿಸಿ ಬೇರ್ಪಡಿಸಲಾಗುತ್ತದೆ. ಇಲ್ಲಿರುವ ಸಿಬಂದಿ ಅದನ್ನು ವಿಂಗಡನೆ ಮಾಡುತ್ತಾರೆ.

ಪ್ರತ್ಯೇಕವಾಗಿ ವಿಂಗಡನೆ
ಇಲ್ಲಿ ಒಂದು ವಸ್ತುವಿನಿಂದ ಅನೇಕ ಉತ್ಪನ್ನಗಳನ್ನು ಬೇರ್ಪಡಿಸಲಾಗುತ್ತದೆ. ಮೆಡಿಸಿನ್‌ ಕವರ್‌ನಲ್ಲಿ ಪ್ಲಾಸ್ಟಿಕ್‌ ಮತ್ತು ರ್ಯಾಪರ್‌ ಎಂಬ ಪ್ರತ್ಯೇಕ ವಸ್ತುಗಳಿರುತ್ತವೆ. ಅದನ್ನು ಬೇರ್ಪಡಿಸಿಡಲಾಗುತ್ತದೆ. ಅದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ದರ್ಜೆ ಗುಣಮಟ್ಟದ ಕವರ್‌ಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಮೆಡಿಸಿನ್‌ ಬಾಕ್ಸ್‌ನಲ್ಲಿ ಬಾಕ್ಸ್‌, ಕವರ್‌, ಪ್ಲಾಸ್ಟಿಕ್‌ ಪ್ರಿಂಟ್‌ ಮೊದಲಾದವುಗಳಿರುತ್ತವೆ. ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ತೆಗೆದಿಡಲಾಗುತ್ತದೆ.

Advertisement

ಪ್ಲಾಸ್ಟಿಕ್‌ನಲ್ಲಿ ಪೆಟ್‌ ಬಾಟಲ್‌, ಮಿಲ್ಕಿ ವೈಟ್‌, ನ್ಯಾಚುರಲ್‌ ಪ್ಲಾಸ್ಟಿಕ್‌, ಎಲ್‌ಡಿ ಕವರ್ ಮೊದಲಾದವು ಇರುತ್ತವೆ. ಬಾಕ್ಸ್‌ಗಳನ್ನು ಕಟ್ಟಲು ಬಳಸಲಾಗುವ ಮೋನೋಪಟ್ಟಿಯನ್ನು ಪುನರ್‌ಬಳಕೆಗಾಗಿ ಬಳಸಲಾಗುತ್ತದೆ. ವಿಂಗಡಣೆಯಾದ ಇತರ ವಸ್ತುಗಳು ಕೂಡ ಮರುಬಳಕೆ ಅಥವಾ ಉಪ ಉತ್ಪನ್ನಕ್ಕೆ ರವಾನೆಯಾಗುತ್ತವೆ.

ಪಾಳುಬಿದ್ದಿದ್ದ ಕಟ್ಟಡದ ನವೀಕರಣ
ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಜಿಲ್ಲಾ ಸರ್ಜನ್‌ ವಸತಿ ನಿಲಯವನ್ನು 7.5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣ ಕೇಂದ್ರವನ್ನು ಆರಂಭಿಸಲಾಗಿತ್ತು. ಪ್ರಸ್ತುತ ದಿನಕ್ಕೆ 50 ಕೆಜಿ ತ್ಯಾಜ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಯ 159 ಬಗೆಯ ತ್ಯಾಜ್ಯಗಳನ್ನು ಇಲ್ಲಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಗೆ ತ್ಯಾಜ್ಯ ನಿರ್ವಹಣೆ ಜತೆಗೆ ಆದಾಯವೂ ಲಭಿಸುವಂತಾಗಿದೆ.

ವರ್ಷಕ್ಕೆ 2 ಬಾರಿ ವಿಲೇವಾರಿ
ಆಸ್ಪತ್ರೆಯ ಜನರಲ್‌ ವೇಸ್ಟ್‌ಗಳನ್ನು ನಾವೇ ತ್ರಿಚಕ್ರವಾಹನದಲ್ಲಿ ತಂದು ಸಂಗ್ರಹಿಸಿಟ್ಟು ಬೇರ್ಪಡಿಸುತ್ತೇವೆ. ಆಸ್ಪತ್ರೆಯ ಬಯೋ ಮೆಡಿಕಲ್‌ ತ್ಯಾಜ್ಯ ಪ್ಲಾಂಟ್‌ಗಳಿಗೆ ಹೋಗುತ್ತವೆ. ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಸಾಕಷ್ಟು ತರಬೇತಿ ಪಡೆದಿದ್ದೇವೆ. ಘಟಕ ಆರಂಭವಾದ ಅನಂತರ ಒಂದು ಬಾರಿ ತ್ಯಾಜ್ಯಗಳ ವಿಲೇವಾರಿ ನಡೆದಿದೆ. ಶೀಘ್ರದಲ್ಲೇ ಮತ್ತೂಂದು ಬಾರಿ ತ್ಯಾಜ್ಯಗಳ ವಿಲೇವಾರಿ ನಡೆಯಲಿದೆ.
– ಜ್ಯೋತಿ, ಜಿಲ್ಲಾಸ್ಪತ್ರೆಯ ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ

ಉತ್ತಮ ಆದಾಯ
ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ತ್ಯಾಜ್ಯವನ್ನು ನಗರಸಭೆ ಯವರು ಸಂಗ್ರಹಿಸಿಕೊಂಡು ಹೋಗುತ್ತಿದ್ದರು. ಆದರೆ ಅದು ಸಮರ್ಪಕವಾಗಿ ವಿಲೇವಾರಿಯಾಗಲು ಸಮಸ್ಯೆ ಇತ್ತು. ಈಗ ಈ ಘಟಕ ಸ್ಥಾಪನೆಯಿಂದ ವ್ಯವಸ್ಥಿತ ವಿಲೇವಾರಿ ಸಾಧ್ಯವಾಗಿದೆ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ತ್ಯಾಜ್ಯವೂ ಹೆಚ್ಚು.
-ಡಾ| ಮಧುಸೂದನ ನಾಯಕ್‌,
ಜಿಲ್ಲಾ ಸರ್ಜನ್‌

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next