Advertisement
ಉನ್ನತ ಮೂಲಗಳ ಪ್ರಕಾರ ಉಸ್ತುವಾರಿ ಸಚಿವರ ನೇಮಕ ಆ. 15 ರೊಳಗೆ ಪೂರ್ಣಗೊಳ್ಳುವ ಸಂಭವವಿದೆ. ಅದರಂತೆ ಈ ಹಿಂದಿನ ಸರಕಾರದಲ್ಲೂ ಸಚಿವರಾಗಿದ್ದ ಕಾಂಗ್ರೆಸ್‌ನ ಖಾದರ್‌ಗೆ ದ.ಕ.ಜಿಲ್ಲೆಯ ಹೊಣೆ ಕೊಡುವುದು ಬಹುತೇಕ ಖಚಿತವಾಗಿದೆ. ಜಿಲ್ಲೆಯಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಏಕೈಕ ಶಾಸಕರು ಇವರು. ಆದರೆ ಮತ್ತೂಂದು ಮಾಹಿತಿ ಪ್ರಕಾರ, ದ. ಕ. ಜಿಲ್ಲೆ ಕೋಮುಸೂಕ್ಷ್ಮ ಜಿಲ್ಲೆಯಾದ್ದರಿಂದ ಅಲ್ಲಿಗೆ ಬೇರೊಬ್ಬರನ್ನು ನೇಮಿಸಿ ಉಡುಗೆ ಖಾದರ್ ಅವರನ್ನು ನೇಮಿಸುವ ಲೆಕ್ಕಾಚಾರವೂ ನಡೆದಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಗೆ ಉಸ್ತುವಾರಿ ವಹಿಸುವ ಕುರಿತೂ ಚರ್ಚೆ ಆರಂಭವಾಗಿದೆ. ಒಂದುವೇಳೆ ಯು.ಟಿ.ಖಾದರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅವಕಾಶ ನೀಡಿದರೆ, ಅದೇ ಜಿಲ್ಲೆಯವರಾದ ಸಚಿವೆ ಜಯಮಾಲಾರಿಗೆ ಉಸ್ತುವಾರಿ ವಹಿಸುವ ಯೋಗ ಒದಗಿಬರುವ ಸಾಧ್ಯತೆ ಇದೆ. ನಂಬಲರ್ಹ ಮೂಲಗಳ ಪ್ರಕಾರ, ಮುಖ್ಯಮಂತ್ರಿಯವರು ಉಡುಪಿಯ ಉಸ್ತುವಾರಿ ಕೊಡುವುದರ ಬಗ್ಗೆ ಜಯಮಾಲಾರಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಸ್ವಾತಂತ್ರೊತ್ಸವಕ್ಕೆ ಉಸ್ತುವಾರಿಗಳು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮೇ 23ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆಗಸ್ಟ್ 15 ರಂದು ಸ್ವಾತಂತ್ರೊತ್ಸವ ಆಚರಣೆ ನಡೆಯಬೇಕಿದ್ದು, ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವ ಸಂಪ್ರದಾಯವಿದೆ. ಸರಕಾರವಿಲ್ಲದ ಸಂದರ್ಭದಲ್ಲಿ ಹಾಗೂ ಉಸ್ತುವಾರಿ ಸಚಿವರು ನೇಮಕಗೊಳ್ಳದಿದ್ದಾಗ ಜಿಲ್ಲಾಧಿಕಾರಿಗಳೇ ಈ ಕೆಲಸವನ್ನು ನೆರವೇರಿಸುವರು. ಆದರೆ ಸರಕಾರವಿದ್ದೂ ಉಸ್ತುವಾರಿ ಸಚಿವರು ನೇಮಕವಾಗದೆ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವುದು ಸರಕಾರಕ್ಕೇ ಮುಜುಗರ ಸೃಷ್ಟಿಸುವ ಸಂಗತಿಯಾಗಿರುವುದರಿಂದ ಮುಖ್ಯಮಂತ್ರಿಯವರು ಮನಸ್ಸು ಮಾಡಿದ್ದಾರೆನ್ನಲಾಗಿದೆ. ಇದರೊಂದಿಗೇ ಆಷಾಡ ಎನ್ನುವ ಸಂಗತಿ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದರೂ, ರಾಜಕೀಯ ಮೂಲಗಳ ಪ್ರಕಾರ ಉಸ್ತುವಾರಿಗಳ ನೇಮಕಕ್ಕೂ ಆಷಾಡಕ್ಕೂ ಸಂಬಂಧವಿಲ್ಲ ಎನ್ನಲಾಗಿದೆ.
Related Articles
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೂಬಹಳ ವೇಗ ದೊರಕಿಲ್ಲ. ಅಧಿಕಾರಿಗಳ ಆಡಳಿತವೇ ನಡೆಯುತ್ತಿದೆ. ಇತ್ತೀಚೆಗೆ ಉಭಯ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಹಾರ ಕಾರ್ಯ ನಡೆಯುತ್ತಿತ್ತು ಎಂಬ ಮಾತೂ ಕೇಳಿಬಂದಿತ್ತು. ಈಗ ಲೋಕಸಭೆ ಚುನಾವಣೆಯೂ ಹತ್ತಿರವಾಗುತ್ತಿರುವುದರಿಂದ ರಾಜ್ಯ ಸರಕಾರದ ವರ್ಚಸ್ಸು ಹೆಚ್ಚಿಸಲು ಉಸ್ತುವಾರಿ ಸಚಿವರ ನೇಮಕ ತೀರಾ ಆಗತ್ಯವಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಮುಖ್ಯಮಂತ್ರಿಯವರು ಮುಂದಾದರೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಂಕಿತ ಬೇಕು ಎನ್ನಲಾಗುತ್ತಿದೆ.
Advertisement
– ಮಟಪಾಡಿ ಕುಮಾರಸ್ವಾಮಿ