Advertisement

ಪ್ರಕರಣ ಮುಚ್ಚಿಹಾಕಲು ಜಿಲ್ಲಾ ಕಾಂಗ್ರೆಸ್‌ ಹುನ್ನಾರ: ಕುಯಿಲಾಡಿ

11:56 PM Jul 30, 2023 | Team Udayavani |

ಉಡುಪಿ: ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣದ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಉಡುಪಿ ಜಿಲ್ಲಾ ಕಾಂಗ್ರೆಸ್‌ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಆರೋಪಿಸಿದ್ದಾರೆ.

Advertisement

ಉಡುಪಿಯಲ್ಲಿ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದರೂ ಜಿಲ್ಲೆಯ ಮಾಜಿ ಶಾಸಕರ ಸಹಿತ ಕಾಂಗ್ರೆಸ್‌ ಮುಖಂಡರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತ ಮಣಿಪುರ ಘಟನೆಯ ವಿಚಾರವನ್ನು ಮುನ್ನಲೆಗೆ ತರುವ ಮೂಲಕ ಉಡುಪಿಯ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.

ಉಡುಪಿಯ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ಪ್ರಕರಣದ ಕೂಲಂಕಷ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಜೆಹಾದಿ ಮನಸ್ಥಿತಿಯ ಸಾಮಾಜಿಕ ಪಿಡುಗನ್ನು ಬೇರು ಸಹಿತ ಕಿತ್ತೂಗೆಯದೆ ಬಿಜೆಪಿ ವಿರಮಿಸದು. “ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬೊಗಳೆ ಬಿಡುವ ಕಾಂಗ್ರೆಸ್‌ ಒಂದೇ ವರ್ಗವನ್ನು ಓಲೈಸುವ ಭರದಲ್ಲಿ ನೊಂದವರನ್ನು ಅವಗಣಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಿಸಲು ಹೊರಟಿರುವುದು ವಿಷಾದನೀಯ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವೀಡಿಯೋ ಪ್ರಕರಣ
ತನಿಖೆ ಮುಂದುವರಿಕೆ
ಉಡುಪಿ: ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತನಿಖಾಧಿಕಾರಿಯಾಗಿದ್ದ ಕುಂದಾಪುರ ಡಿವೈಎಸ್‌ಪಿ ಅವರು ಈಗಾಗಲೇ ಘಟನೆಯ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರು ಹಾಗೂ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪಡೆದಿದ್ದಾರೆ. ಹೆಚ್ಚಿನ ವಿವರಗಳು ತನಿಖೆಯ ಬಳಿಕ ತಿಳಿದುಬರಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next