Advertisement

ಮಠ-ಮಂದಿರಗಳಿಗೆ ಸ್ವಾಯತ್ತತೆ ಅಗತ್ಯ

05:54 PM Jun 13, 2022 | Team Udayavani |

ಶಿರಸಿ: ದೇವಸ್ಥಾನಗಳ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುವ ನಿರ್ಣಯ ಕೈಬಿಡಬೇಕು ಹಾಗೂ ದೇವಸ್ಥಾನಗಳಿಗೆ, ಮಠಗಳಿಗೆ ಸ್ವಾಯತ್ತತೆಯಂತೆ ಕಾನೂನು ಜಾರಿಗೆ ತರಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಗ್ರಹಿಸಿದರು.

Advertisement

ರವಿವಾರ ನಗರದ ತೋಟಗಾರಿಕಾ ಮಂಟಪದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇವಾಲಯಗಳ ಜಿಲ್ಲಾ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನುಡಿದರು.

ಮಠ ಮಂದಿರಗಳ ಮೇಲೆ ಸರ್ಕಾರ ಅಧಿಕಾರ ಪ್ರಯೋಗ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಸರ್ಕಾರ ವಹಿಸಿಕೊಂಡ ದೇವಸ್ಥಾನಗಳಲ್ಲಿ ಸರಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ಆ ದೇವಸ್ಥಾನದ ಹೆಸರಿಗೆ ಚ್ಯುತಿ ತರುವಂತೆ ಆಗುತ್ತದೆ. ಆದ್ದರಿಂದ ಹಿಂದೂ ಸಮಾಜ ಸಂಘಟಿತರಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕು. ಸಮಾಜ ಸಂಘಟಿತವಾದರೆ ಸರ್ಕಾರ ಎಚ್ಚರಗೊಳ್ಳುತ್ತದೆ ಎಂದರು.

ಹಿಂದೂ ಧಾರ್ಮಿಕ ಪರಿಷತ್‌ ರಚನೆ ಮಾಡಿ, ಅದರ ಮುಖ್ಯ ಸ್ಥಾನವನ್ನು ನ್ಯಾಯಾಧೀಶರು ಇರಲಿ. ಆದರೆ ರಾಜಕೀಯ ಇರಬಾರದು. ಕೇಂದ್ರ ಸರ್ಕಾರ ಈ ಕುರಿತು ಚಿಂತನೆ ನಡೆಸಬೇಕು. ದೇವಸ್ಥಾನಗಳನ್ನು ನಿರ್ಮಾಣ ಮಾಡಿದವರು ಭಕ್ತರು. ಹಾಗಿದ್ದಾಗ ದೇವಸ್ಥಾನಗಳನ್ನು ನಡೆಸಲು ಭಕ್ತರಿಗೆ ಅವಕಾಶ ಕೊಡಬೇಕು. ಇದುವರೆಗೆ ಯಾವ ದೇವಸ್ಥಾನಗಳನ್ನೂ ಸರ್ಕಾರ ನಿರ್ಮಾಣ ಮಾಡಿಲ್ಲ. ಕಾರಣ ದೇವಸ್ಥಾನಗಳ ವಿಚಾರದಲ್ಲಿ ಮೂಗು ತೂರಿಸುವುದು ಯಾವ ನ್ಯಾಯ?ಎಂದು ಪ್ರಶ್ನಿಸಿದರು.

40 ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಆದರೆ ಇದೀಗ ರಾಜಕಾರಣಿಯೊಬ್ಬರು ದೇವಸ್ಥಾನಗಳನ್ನು ಭಕ್ತರ ಕೈಗೆ ನೀಡುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತು ಆದಷ್ಟು ಬೇಗ ಜಾರಿಗೆ ಬರಬೇಕಿದೆ. ಆ ನಿಯಮ ಜಾರಿಗೆ ತರಬೇಕು ಎನ್ನುವ ಉದ್ದೇಶದಿಂದಲೇ ಇಂತಹ ಸಭೆಗಳನ್ನು ನಡೆಸುತ್ತಿದ್ದೇವೆ ಎಂದರು.

Advertisement

ದೇವಾಲಯಗಳ ವಿಚಾರದಲ್ಲಿ ಸರ್ಕಾರದ ನಿಯಮಗಳು ಮೂರ್ಖತನದ್ದಾಗಿದೆ. ರಾಮಾ ಜೋಯಿಸ್‌ ವರದಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಹಿಂದೇಟು ಹಾಕುತ್ತಿರಲು ಕಾರಣವೇನೆಂದು ತಿಳಿಯುತ್ತಿಲ್ಲ. ವಕ್ಫ್ ಮಾದರಿಯಂತೆ ದೇವಸ್ಥಾನ ನಡೆಸಲು ಅವಕಾಶ ಕೊಡಬೇಕು ಎಂದರು.

ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ, ಧರ್ಮದಲ್ಲಿ ರಾಜಕೀಯ ಬರುತ್ತಿದೆ. ರಾಜಕೀಯದ ವ್ಯಾಪ್ತಿಯಲ್ಲಿ ಸರ್ಕಾರ ಆಡಳಿತ ಮಾಡಲಿ. ದೇವಸ್ಥಾನಕ್ಕೆ ಬಂದು ಇಲ್ಲಿಯ ಪೂಜಾ ಪದ್ಧತಿ, ಆಚರಣೆಗಳಲ್ಲಿ ಅಧಿಕಾರಿಗಳು ದರ್ಪ ತೋರಿಸುವ ಸ್ಥಳವಲ್ಲ. ಮಂದಿರವು ಮನಸ್ಸನ್ನು ಸ್ವಚ್ಛ ಮಾಡುವ, ಭಗವಂತನ ವಾಸ ಇರುವ ಸ್ಥಾನ. ಇಲ್ಲಿ ಅಧಿಕಾರ ಸಲ್ಲ. ದೇವಸ್ಥಾನಗಳನ್ನು ದೇವಸ್ಥಾನವಾಗಿ ಇರಲು ಬಿಡಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ ದಯಾನಂದ ಗುರುಕುಲದ ಶ್ರೀ ಚಿದ್ರೂಪಾನಂದ ಸರಸ್ವತೀ ಮಹಾಸ್ವಾಮಿಗಳು, ದೇವಾಲಯಗಳ ಸರ್ಕಾರೀಕರಣ ರಾಷ್ಟ್ರದ ಸಮಸ್ಯೆ. ನಮ್ಮ ದೇವಸ್ಥಾನ, ನಮ್ಮ ಪೂಜಾ ವಿಧಾನಗಳಿಗೆ ನಮಗೇ ಸ್ವಾತಂತ್ರ್ಯ ಇಲ್ಲ. ಕಾರಣ ಇದೊಂದು ದೊಡ್ಡ ಆಂದಲೋನದ ಮೂಲಕ ಗೆಲ್ಲಬೇಕಾಗಿದೆ. ನಾವು ಸಂಘಟಿತರಾಗಿ ಎಲ್ಲಾ ಭೇದಭಾವ ಬಿಟ್ಟು ಆಂದೋಲನದ ಮೂಲಕ ಗೆಲ್ಲಬೇಕು. ಸರ್ಕಾರ ನಮ್ಮ ಅಸ್ತಿತ್ವ ಅಲುಗಾಡಿಸಲು ಪ್ರಯತ್ನಿಸದೇ ತಾಳ್ಮೆ ಪರೀಕ್ಷೆ ಮಾಡಬಾರದು. ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಡೆ ಮಠದ ಮಹಾಂತ ಮಹಾಸ್ವಾಮಿ, ದೇವಾಲಯಗಳನ್ನು ಸರ್ಕಾರಿಕರಣದಿಂದ ಮುಕ್ತಗೊಳಿಸಲು ಸೂಕ್ತ ಕಾನೂನು ಬೇಕು. ದೇವಾಲಯಗಳು ಸ್ವಾಯತ್ತಗೊಂಡರೆ ಹಿಂದೂಗಳು ನೆಮ್ಮದಿಯಿಂದ ಇರಲು ಸಾಧ್ಯ. ಕಾರಣ ನಾವು ದೇವಾಲಯ, ಮಠ ಮಂದಿರ ಉಳಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡೋಣ ಎಂದರು.

ಸಿದ್ದಾಪುರ ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಮಾತನಾಡಿ, ಎಲ್ಲಿ ಹೋದಾಗ ನಮ್ಮ ಮನಸ್ಸು ಶಾಂತವಾಗುತ್ತದೆಯೋ, ಮನಸ್ಸಿಗೆ ನೆಮ್ಮದಿ ಸಿಗುತ್ತದೆಯೋ ಅಲ್ಲಿ ದೈವ ಸಾನ್ನಿಧ್ಯವಿದೆ ಎಂದರ್ಥ. ಆದರೆ ಈಗ ಸಮಾಜದಲ್ಲಿ ಮಠಗಳ ಮೇಲೆ, ಸಂತರ ಮೇಲೆ, ದೇವಸ್ಥಾನಗಳು ಶೋಷಣೆಗಳು ನಡೆಯುತ್ತಿದೆ. ಕಾರಣ ಹಿಂದೂಗಳ ಬಗ್ಗೆ, ಹಿಂದೂ ಧರ್ಮ ಹಾಗೂ ಧಾರ್ಮಿಕ ಕೇಂದ್ರಗಳ ಬಗ್ಗೆ ನಾವು ಧ್ವನಿ ಎತ್ತಬೇಕಿದೆ ಎಂದರು.

ಧರ್ಮ ರಕ್ಷಣೆ ಮಾಡುವಾಗ ದುಷ್ಟರಿಗೆ ಶಿಕ್ಷೆಯಾಗಬೇಕು. ಶಿಷ್ಟರ ರಕ್ಷಣೆಯಾಗಬೇಕು. ಸಮಸ್ತ ಹಿಂದೂ ಬಾಂಧವರು ಧರ್ಮರಕ್ಷಣೆಗಾಗಿ ಹೋರಾಡೋಣ ಎಂದರು.

ವಾಸವಿ ಪೀಠದ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಗೂಗಲ್‌ ಮೀಟ್‌ ಮೂಲಕ ಮಾತನಾಡಿ, ಹಿಂದೂ ದೇವಾಲಯಗಳ ಬಗ್ಗೆ ನಮಗೆ ವಿಶೇಷ ಕಾಳಜಿಯಿದೆ. ನಮ್ಮ ಪ್ರಮುಖ ದೇವಾಲಯಗಳು ಸರ್ಕಾರ ನಡೆಸುವುದರಿಂದ ನಾವು ಕಳೆದುಕೊಳ್ಳುತ್ತಿರುವುದು ನಮಗೆ ಅರಿವು ಆಗಬೇಕಿದೆ. ಇದು ಸಂಘಟನೆ ಏಳ್ಗೆಗೆ ಅಡ್ಡಿಯಾಗಬಹುದು. ಹೀಗಾಗಿ ವಕೀಲರ ಹೋರಾಟ ಅಗತ್ಯವಿದೆ. ಜನರೂ ಸಂಘಟಿತರಾಗಬೇಕಿದೆ ಎಂದರು.

ಹೈಕೋರ್ಟ್‌ ವಕೀಲ ಅರುಣಾಚಲ ಹೆಗಡೆ ಮಾತನಾಡಿ, ದೇವಸ್ಥಾನಗಳ ಸ್ವಾಯತ್ತತೆ ಕಾಪಾಡಿಕೊಳ್ಳುವ ಉದ್ದೇಶಕ್ಕೆ ಹಿಂದೂ ಧಾರ್ಮಿಕ ಮಹಾಮಂಡಳ ಕಾನೂನು ಹೋರಾಟ ನಡೆಸುತ್ತಿದೆ. ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ ಸಮರ್ಪಕವಾಗಿಲ್ಲ. ರಾಜಕೀಯ ಪ್ರೇರಿತ ನೇಮಕಾತಿ ಪ್ರಯತ್ನ ನಡೆಯುವುದಿತ್ತು. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಬಾರದು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ ಮೇಲ್ಮನವಿ ಹಿಂಪಡೆಯಲಿ ಎಂದರು.

ಸಿದ್ದಾಪುರ ಶಂಕರಮಠದ ವಿಜಯ ಹೆಗಡೆ ದೊಡ್ಮನೆ, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್‌.ಜಿ. ನಾಯ್ಕ, ಪ್ರಮುಖರಾದ ರವೀಂದ್ರ ಪವಾರ್‌ ಕಾರವಾರ, ಟಿ.ಜಿ.ನಾಡಿಗೇರ ಇದ್ದರು.

ಸಮಾವೇಶ ನಿರ್ಣಯ: ನಿರ್ಣಯ ಮಂಡಿಸಿದ ಎಸ್‌.ಎನ್‌. ಭಟ್‌, ಹಿಂದೂ ದೇವಾಲಯ ಭಕ್ತರ ಕೈಗೆ ನೀಡುವ ಮುಖ್ಯಮಂತ್ರಿ ಹೇಳಿಕೆ ಶೀಘ್ರ ಜಾರಿಗೆ ತರಬೇಕು. ಹಿಂದೂಗಳಿಗೆ ಹಿಂದೂ ಧಾರ್ಮಿಕ ಪರಂಪರೆ ಉಳಿವಿಗೆ ಸರ್ವಸಮ್ಮತ ಕಾನೂನು ಜಾರಿಗೆ ತರಬೇಕು. ಸಂವಿಧಾನ ಬಾಹೀರ ಎಂದು ನ್ಯಾಯಾಲಯ ಘೋಷಿಸಿದ ಕಾನೂನು ಕೈಬಿಟ್ಟು ಹೊಸ ಕಾನೂನು ರೂಪಿಸಬೇಕು. ಅಲ್ಲಿಯವರೆಗೆ ದೇವಾಲಯಗಳಿಗೆ ಆಡಳಿತಾಧಿಕಾರಿ, ವ್ಯವಸ್ಥಾಪನ ಸಮಿತಿ ನೇಮಕ ಕೈಬಿಡಬೇಕು. ಸುಪ್ರಿಂ ಕೋರ್ಟ್‌ನಲ್ಲಿ ವಿವಾರಣೆಗೆ ಬಾಕಿ ಇರುವ ಮೇಲ್ಮನವಿಯನ್ನು ಹಿಂಪಡೆಯಬೇಕು ಹಾಗೂ ದೇವಾಲಯದ ಉಳಿವಿಗೆ ಹಿಂದೂಗಳು ಸಂಘಟಿತರಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next