Advertisement

ದೂರದ ಡೀಸಿ ಕಚೇರಿಗೆ ತೆರಳುವುದೇ ಸವಾಲು

03:11 PM Jun 18, 2023 | Team Udayavani |

ಮೈಸೂರು: ನಿತ್ಯ ನೂರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದ ಸಾರ್ವಜನಿಕರು, ದೂರದ ಸಿದ್ಧಾರ್ಥನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ದತ್ತ ಸುಳಿಯಲು ಹಿಂದೇಟು ಹಾಕುವಂತಾಗಿದೆ.

Advertisement

ನಗರದ ಕೃಷ್ಣರಾಜ ಬುಲೇವಾರ್ಡ್‌ ರಸ್ತೆಯಲ್ಲಿದ್ದ ಜಿಲ್ಲಾಧಿಕಾರಿಗಳ ಕಚೇರಿ ಸಿದ್ಧಾ ರ್ಥನಗರದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ವಾರ ಕಳೆದಿದೆ.

ನೂರಾರು ಕೋಟಿ ರೂ. ವೆಚ್ಚ ಮಾಡಿ ಕಟ್ಟಿರುವ ವಿಶಾಲ ಕಟ್ಟಡದಲ್ಲಿ ಶೇ.40ರಷ್ಟು ಭಾಗ ಬಳಕೆಯಾಗುತ್ತಿದ್ದು, ಉಳಿದ ಕೊಠಡಿಗಳು ಬಿಕೋ ಎನ್ನುತ್ತಿವೆ. ಇತ್ತ ಗ್ರಾಮೀಣ ಭಾಗದಿಂದ ಅರ್ಜಿ ಹಿಡಿದು ಬರುವ ಸಾರ್ವಜನಿಕರು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಬಾಡಿಗೆ ಆಟೋ ಮಾಡಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ತಲು ಪುವ ಸ್ಥಿತಿ ನಿರ್ಮಾಣವಾಗಿದೆ. ಐದು ಎಕರೆ ವಿಶಾಲ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾ ಣವಾಗಿದ್ದು, ಎರಡು ಅಂತಸ್ತಿನಲ್ಲಿ 80ಕ್ಕೂ ಹೆಚ್ಚು ಕೊಠಡಿಗಳಿವೆ. ಇವುಗಳಲ್ಲಿ ಶೇ.40ರಷ್ಟು ಕೊಠಡಿಗಳು ಬಳಕೆಯಾಗುತ್ತಿವೆ.

ಇನ್ನೂ ಸ್ಥಳಾಂತರವಾಗದ ಮೂರು ಕಚೇರಿಗಳು: ಸದ್ಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 12 ಇಲಾಖೆಗಳ ಕಚೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತವಾಗಿದೆ. ಆದರೆ ಲಕ್ಷ್ಮೀಪುರಂನಲ್ಲಿ ಬಾಡಿಗೆ ಕಟ್ಟಡದಲ್ಲಿ ಇರುವ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ಹಳೇ ಕಟ್ಟಡದಲ್ಲಿರುವ ಜಿಲ್ಲಾ ಖಜಾನೆ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿ. ಕಚೇರಿಗಳು ಸ್ಥಳಾಂತರವಾಗಬೇಕಿದೆ.

ಜನರಿಲ್ಲದೇ ಬಿಕೋ ಎನ್ನುತ್ತಿದೆ ಕಚೇರಿ: ಜಿಲ್ಲಾಧಿಕಾರಿಗಳ ಹಳೇ ಕಚೇರಿ ಕಟ್ಟಡದಲ್ಲಿ ನಿತ್ಯ ಕಂಡುಬರು ತ್ತಿದ್ದ ಜನದಟ್ಟಣೆ ಹೊಸ ಕಟ್ಟಡದಲಿ ಕಂಡು ಬರುತ್ತಿಲ್ಲ. ಹೊಸ ಕಟ್ಟಡ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್‌. ನಗರ, ನಂಜನಗೂಡು ಹಾಗೂ ಎಚ್‌.ಡಿ. ಕೋಟೆ ತಾಲೂಕು ಭಾಗದಿಂದ ಬರುವವರಿಗೆ ಈ ಹಿಂದೆ ಇದ್ದ ಡೀಸಿ ಕಚೇರಿ ಹತ್ತಿರವಾಗುವುದಲ್ಲದೇ ನಗರ ಪ್ರದೇಶಕ್ಕೆ ಹೊಂದಿಕೊಂಡಿತ್ತು. ಜತೆಗೆ ರೈಲ್ವೆ ನಿಲ್ದಾಣವೂ ಕೂಗಳತೆ ದೂರದಲ್ಲಿತ್ತು. ಆದರೆ ದೂರದ ಸಿದ್ಧಾರ್ಥನಗರದಲ್ಲಿರುವ ಹೊಸ ಕಟ್ಟಡಕ್ಕೆ ಈ ಭಾಗದ ಜನರು ತೆರಳುವುದು ದುಸ್ತರವಾಗಿದೆ. ಪರಿಣಾಮ ಬೃಹತ್‌ ಕಟ್ಟಡ ಜನರಿಲ್ಲದೇ ಬಣಗುಡುತ್ತಿದೆ.

Advertisement

ಸಿದ್ಧತೆಯೂ ಅಪೂರ್ಣ: ನೂತನ ಕಟ್ಟಡ ಉದ್ಘಾಟನೆಯಾಗಿ ಐದು ವರ್ಷಗಳವರೆಗೆ ಬಳಕೆಯಾಗದ ಹಿನ್ನೆಲೆ ಇಡೀ ಕಟ್ಟಡ ಧೂಳು ಹಿಡಿದು, ಭೂತ ಬಂಗಲೆಯಾಗಿ ಮಾರ್ಪಾಡಾಗಿತ್ತು. ಈಗ ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರವಾಗಿದ್ದರಿಂದ ಇಡೀ ಕಟ್ಟಡವನ್ನು ಸ್ವತ್ಛಗೊಳಿಸುವ ಹಾಗೂ ಪೀಠೊಪಕರಣ ಜೋಡಿಸುವ ಕಾರ್ಯ ಅಪೂರ್ಣವಾಗಿಯೇ ಉಳಿದಿದೆ. ಪರಿಣಾಮ ಕಚೇರಿ ಕೆಲಸಗಳು ಕುಂಟುತ್ತಾ ಸಾಗಿದೆ.

ಗಬ್ಬೆದ್ದು ನಾರುವ ಶೌಚಗೃಹ : ವಿಶಾಲವಾಗಿ ನಿಂತಿರುವ ಭವ್ಯ ಕಟ್ಟಡ ಎರಡು ಅಂತಸ್ತಿನಿಂದ ಕೂಡಿದ್ದು, ಕಟ್ಟಡದ ಹಿಂಬದಿಯ ಎರಡು ಪಾರ್ಶ್ವಗಳಲ್ಲಿ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆ ಕೊರತೆಹಾಗೂ ಈವರೆಗೆ ಬಳಕೆ ಮಾಡದೇ ಹಾಗೆಯೇ ಬಿಟ್ಟಿದ್ದರಿಂದ ಎಲ್ಲಾ ಶೌಚಾಲಯಗಳು ಅಶುಚಿತ್ವದಿಂದ ಕೂಡಿದ್ದು, ಗಬ್ಬೆದ್ದು ನಾರುತ್ತಿವೆ. ಪರಿಣಾಮ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಶೌಚಾಲಯ ಬಳಕೆಗೆ ಮುಂದಾಗುತ್ತಿಲ್ಲ.

ಪ್ರತ್ಯೇಕ ಶೌಚಾಲಯಗಳ ಅಗತ್ಯವಿದೆ: ಗ್ರಾಮೀಣ ಭಾಗದಿಂದ ಬರುವ ಜನರು ಕಟ್ಟಡದಲ್ಲಿ ಶೌಚಾಲಯಗಳನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ. ವಿಶಾಲವಾದ ಕಟ್ಟಡದಲ್ಲಿ ಯಾವ ಇಲಾಖೆ ಕಚೇರಿ ಎಲ್ಲಿದೆ ಎಂಬುದನ್ನು ತಿಳಿಯಲು ಒಂದಷ್ಟು ದಿನ ಬೇಕಿದೆ. ಈ ಮಧ್ಯೆ ಶೌಚಾಲಯಗಳನ್ನು ಹುಡುಕುವುದು ಮತ್ತಷ್ಟು ಸವಾಲಾಗಿದೆ.

ಈ ಬಗ್ಗೆ ಜಿಲ್ಲಾಡಳಿತ ಕಟ್ಟಡದ ಹೊರಭಾಗದಲ್ಲಿ ಸಾರ್ವಜನಿಕರಿಗಾಗಿ ಪ್ರತ್ಯೇಕ ಶೌಚಾಗೃಹಗಳನ್ನು ನಿರ್ಮಿಸಬೇಕು ಎಂಬುದು ಕಚೇರಿಗೆ ಭೇಟಿ ನೀಡುವ ಜನರ ಬೇಡಿಕೆಯಾಗಿದೆ.

ವಿಶೇಷ ಚೇತನರಿಗೆ ರ್‍ಯಾಂಪ್‌ ಬೇಕಿದೆ: ನೂರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಕಟ್ಟದಲ್ಲಿ ವಿಶೇಷ ಚೇತನರು ಸುಲಭವಾಗಿ ಒಳಗೆ ಪ್ರವೇಶ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಪ್ರವೇಶ ದ್ವಾರದ ಬಳಿ ಮೆಟ್ಟಿಲುಗಳನ್ನು ಮಾತ್ರ ನಿರ್ಮಿಸಲಾಗಿದೆ. ಪರಿಣಾಮ ವ್ಹೀಲ್‌ಚೇರ್‌ ಮೂಲಕ ಅಂಗವಿಕಲರು ಕಚೇರಿಗಳಿಗೆ ತೆರಳಲು ಕಷ್ಟಸಾಧ್ಯವಾಗಿದೆ. ಹೀಗಾಗಿ ವಿಶೇಷಚೇತನರು ಸುಲಭವಾಗಿ ತೆರಳಲು ರ್‍ಯಾಂಪನ್ನು ನಿರ್ಮಿಸುವ ತುರ್ತು ಅಗತ್ಯವಿದೆ.

ಹೊಸ ಜಿಲ್ಲಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ನಗರ ಭಾಗದಿಂದ ತೆರಳಲು ಬನ್ನೂರು ಮಾರ್ಗವಾಗಿ ಸಾಕಷ್ಟು ಬಸ್‌ಗಳು ಸಂಚರಿಸುತ್ತಿವೆ. ನಗರ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌ಗಳು ಜಯಚಾಮರಾಜೇಂದ್ರ ವೃತ್ತ (ಆರ್ಗೇಟ್‌)ದ ಮೂಲಕ ಸಾಗಲಿದ್ದು, ಗ್ರಾಮೀಣ ಭಾಗದ ಜನರು ಈ ವೃತ್ತದಲ್ಲೇ ಬಸ್‌ ಏರಿ ಕಚೇರಿಗೆ ತೆರಳಬಹುದಾಗಿದೆ. -ಮರೀಗೌಡ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next