ಧಾರವಾಡ: ಅವಳಿ ನಗರಗಳ ಮಧ್ಯೆ ಸಂಚಾರ ಮಾಡಲು ಬೇಂದ್ರೆ ನಗರ ಸಾರಿಗೆ ವಾಹನಗಳ ತಾತ್ಕಾಲಿಕ ರಹದಾರಿ ನವೀಕರಣ ಮಾಡುವ ಕುರಿತು ಡಿಸಿ ದೀಪಾ ಚೋಳನ್ ಅವರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಡಿಸಿ ದೀಪಾ ಅವರು, ಬೇಂದ್ರೆ ನಗರ ಸಾರಿಗೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾದಗಳನ್ನು ಆಲಿಸಿದರು.
ಪ್ರಯಾಣಿಕ ವಾಹನಗಳಿಗೆ ವಿಶೇಷವಾಗಿ ಸಾರ್ವಜನಿಕರು ಹೆಚ್ಚು ಪ್ರಯಾಣ ಮಾಡುವ ಮಜಲು ವಾಹನಗಳು ಮತ್ತು ಒಪ್ಪಂದ ವಾಹನಗಳಿಗೆ ವಾಹನದ ಮೂಲ ನೋಂದಣಿ ದಿನಾಂಕದಿಂದ 15 ವರ್ಷಗಳ ವರೆಗೆ ಅವಧಿ ನಿಗದಿ ಪಡಿಸಿ ರಹದಾರಿ ನೀಡುವ ಕುರಿತು ಚರ್ಚೆ ನಡೆಯಿತು.
ಬೇಂದ್ರೆ ಸಾರಿಗೆ ವಾದವೇನು?: ಮಾನವೀಯತೆ ಆಧಾರದ ಮೇಲೆ ಸಂಸ್ಥೆಯ ವಾಹನಗಳಿಗೆ ತಾತ್ಕಾಲಿಕ ನವೀಕರಣ ನೀಡಬೇಕು. ಸುಮಾರು 400 ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ, ವಿಶೇಷ ವರ್ಗದವರಿಗೆ ಉಚಿತ ಮತ್ತು ರಿಯಾಯತಿ ದರದ ಬಸ್ ಪಾಸ್‌ಗಳನ್ನು ನೀಡಲಾಗಿದೆ. ಈಗಾಗಲೇ 3 ತಿಂಗಳ ತೆರಿಗೆ ಪಾವತಿಸಲಾಗಿದೆ. ಮೋಟಾರು ವಾಹನಗಳ ಕಾಯ್ದೆ 99(2) ಪ್ರಕಾರ ರಹದಾರಿಯನ್ನು ತಾತ್ಕಾಲಿಕವಾಗಿ ನವೀಕರಿಸಿ ಕೊಡಬೇಕು ಎಂದು ಬೇಂದ್ರೆ ನಗರ ಸಾರಿಗೆ ವಾಹನಗಳ ಪರವಾಗಿ ನ್ಯಾಯವಾದಿ ನಾಗೇಶ ಮನವಿ ಮಾಡಿದರು.
ವಾಕರಸಾ ತಕರಾರೇನು?: ಬೇಂದ್ರೆ ಸಾರಿಗೆ ವಾಹನಗಳ ನವೀಕರಣ ಅರ್ಜಿ ಪ್ರಾಧಿಕಾರದ ಮುಂದೆ ಬಾಕಿ ಇರದ್ದರಿಂದ ನವೀಕರಣ ಪ್ರಶ್ನೆ ಉದ್ಭವಿಸುವುದಿಲ್ಲ. ರಹದಾರಿ ಅವಧಿ ತಿಳಿದಿದ್ದರೂ ಉಚಿತ ಮತ್ತು ರಿಯಾಯತಿ ಬಸ್ ಪಾಸ್ ವಿತರಿಸಿದ್ದು ಹಾಗೂ ತೆರಿಗೆ ಪಾವತಿಸಿರುವುದು ಅನುಕಂಪ ಗಿಟ್ಟಿಸುವ ತಂತ್ರ. ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ವರ್ಗದವರಿಗೆ ನೀಡಿದ ಬಸ್ ಪಾಸ್‌ಗಳನ್ನು ವಾಕರಸಾ ಸಂಸ್ಥೆ ಮಾನ್ಯ ಮಾಡಿ ಅವರಿಗೆ ಸೇವೆ ಮುಂದುವರಿಸಲು ಸಿದ್ಧವಿದೆ. ಈಗಾಗಲೇ ವಾಕರಸಾ ಸಂಸ್ಥೆಯ 50 ಸಾಮಾನ್ಯ ವಾಹನಗಳು ಅವಳಿ ನಗರ ಮಧ್ಯೆ ಮಿಶ್ರ ಪಥದಲ್ಲಿ ಪ್ರತಿನಿತ್ಯ 587 ಸರತಿಗಳಲ್ಲಿ ಹಾಗೂ ಬಿಆರ್‌ಟಿಎಸ್‌ನ 98 ವಾಹನಗಳು ಪ್ರತಿನಿತ್ಯ 640 ಸರತಿಗಳಲ್ಲಿ ಪ್ರಯಾಣಿಕರಿಗೆ ಸಮರ್ಪಕ ಸೇವೆ ಒದಗಿಸುತ್ತಿವೆ. ಹೀಗಾಗಿ ಖಾಸಗಿ ವಾಹನಗಳಿಗೆ ರಹದಾರಿ ನೀಡುವ ಅಗತ್ಯ ಇಲ್ಲ ಎಂದು ವಾಕರಸಾ ಸಂಸ್ಥೆಯ ಪರವಾಗಿ ಕಾನೂನು ಅಧಿಕಾರಿ ನಾರಾಯಣಪ್ಪ ಮನವಿ ಮಾಡಿದರು.
ಎರಡೂ ಕಡೆಯ ವಾದ ಆಲಿಸಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಿಸಿ ದೀಪಾ ಅವರು, ತೀರ್ಪನ್ನು ಕಾಯ್ದಿರಿಸಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರವೀಂದ್ರ ಕವಲಿ, ಅಪ್ಪಯ್ಯ ನಾಲತವಾಡಮಠ, ನಗರ ಉಪ ಪೊಲೀಸ್ ಆಯುಕ್ತ ಡಾ| ಶಿವಕುಮಾರ ಗುಣಾರಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ರತಾ, ವಾಕರಾಸಾಸಂನ ವಿವೇಕಾನಂದ ವಿಶ್ವಜ್ಞ ಇನ್ನಿತರರಿದ್ದರು.