ಸಿರುಗುಪ್ಪ: ತಾಲೂಕಿನ ಹಚ್ಚೊಳ್ಳಿ ನವಗ್ರಾಮಕ್ಕೆ ಜಿಲ್ಲಾ ಧಿಕಾರಿ ಪವನ್‌ಕುಮಾರ ಮಾಲಪಾಟಿ ಭೇಟಿ ನೀಡಿ ನವಗ್ರಾಮದಲ್ಲಿ ನೆರೆ ಸಂತ್ರಸ್ಥರಿಗಾಗಿ ಕಟ್ಟಿರುವ ಆಸರೆ ಮನೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಜಿಲ್ಲಾಧಿ ಕಾರಿ ಮಾತನಾಡಿ, ಹಚ್ಚೊಳ್ಳಿ ನವಗ್ರಾಮದಲ್ಲಿ ನೆರೆ ಸಂತ್ರಸ್ಥರಿಗಾಗಿ ಕೋಟ್ಯಾಂತರ ರೂಗಳನ್ನು ವೆಚ್ಚಮಾಡಿ ಜಾಗ ಖರೀದಿಸಿ ಮನೆಗಳನ್ನು ಕಟ್ಟಲಾಗಿದೆ.
ಆದರೆ ನವಗ್ರಾಮದಲ್ಲಿ ಯಾರು ವಾಸ ಮಾಡುತ್ತಿಲ್ಲ. ಗ್ರಾಮಸ್ಥರಿಗೆ ನವಗ್ರಾಮಕ್ಕೆ ಬರಲು ಮನಸ್ಸಿಲ್ಲವೇ ಅಥವಾ ಬೇರೇನಾದರೂ ಸಮಸ್ಯೆಗಳಿವೆಯೇ ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದರು. ಮಾಜಿ ತಾಪಂ ಉಪಾಧ್ಯಕ್ಷ ಶರಣಬಸವ ಮಾತನಾಡಿ, ನವಗ್ರಾಮದಲ್ಲಿ 10 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮನೆಗಳು ಯಾರು ವಾಸಮಾಡದ ಕಾರಣ ರಿಪೇರಿಗೆ ಬಂದಿವೆ.
ಈ ನವಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆ ಸಮರ್ಪಕವಾಗಿ ಮಾಡದ ಕಾರಣ ನಮ್ಮ ಗ್ರಾಮದ ಜನರು ನವಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಗ ಮನೆಗಳನ್ನು ರಿಪೇರಿ ಮಾಡಿಸಿ ಮೂಲಸೌಕರ್ಯಗಳನ್ನು ಒದಗಿಸಿದರೆ ಜನರು ಬರುತ್ತಾರೆ.
ಆದರೆ ನೀವು ಸೇರಿದಂತೆ ನಾಲ್ಕು ಜನ ಜಿಲ್ಲಾ ಧಿಕಾರಿಗಳು ನವಗ್ರಾಮಕ್ಕೆ ಭೇಟಿನೀಡಿ ಹೋಗಿದ್ದು, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ, ಇನ್ನಾದರೂ ನವಗ್ರಾಮದಲ್ಲಿರುವ ಮನೆಗಳನ್ನು ದುರಸ್ತಿಮಾಡಿಸಿ ಮೂಲಸೌಕರ್ಯಗಳನ್ನು ಒದಗಿಸಿದರೆ ತಕ್ಷಣವೇ ಗ್ರಾಮಸ್ಥರು ನವಗ್ರಾಮಕ್ಕೆ ಬಂದು ವಾಸಿಸುತ್ತಾರೆ ಎಂದು ತಿಳಿಸಿದರು. ಜಿಲ್ಲಾ ಧಿಕಾರಿ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಜನರು ಮಾಸ್ಕ್ ಧರಿಸುವುದಿಲ್ಲವೆ. ನೀವು ಕೂಡ ಮಾಸ್ಕ್ ಧರಿಸಿಲ್ಲ.
ನಿಮಗೆ ದಂಡ ವಿಧಿಸಬೇಕಾಗುತ್ತದೆಂದು ಜಿಲ್ಲಾಧಿ ಕಾರಿಗಳು ಮಾಸ್ಕ್ ಧರಿಸದೇ ಬಂದಿದ್ದ ತಾಪಂ ಮಾಜಿ ಉಪಾಧ್ಯಕ್ಷರಿಗೆ ಪ್ರಶ್ನಿಸಿದರು. ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ, ನೀವು ಬಂದಿದ್ದೀರೆಂದು ತಿಳಿದು ಇಲ್ಲಿಗೆ ಬಂದಿದ್ದೇನೆ, ನೀವು ಬರುವ ಸುದ್ದಿಯು ನಮಗೆ ಮೊದಲೇ ಗೊತ್ತಾಗಿದ್ದರೆ ನಮ್ಮ ಗ್ರಾಮಸ್ಥರನ್ನು ಕರೆದುಕೊಂಡು ಬರುತ್ತಿದ್ದೆ. ಕೃಷಿ ಕೆಲಸ ಮಾಡುತ್ತಿದ್ದರಿಂದ ನಾನು ಮಾಸ್ಕ್ ಧರಿಸಿರಲಿಲ್ಲವೆಂದು ಮಾಜಿ ಉಪಾಧ್ಯಕ್ಷರು ತಿಳಿಸಿದರು.
ನಮ್ಮ ನವಗ್ರಾಮದಲ್ಲಿ ಮೂಲಸೌಕರ್ಯ ಗಳಲ್ಲಿ ಒಂದಾದ ಕುಡಿಯುವ ನೀರಿನ ಕೆರೆಗೆ ಕಾಲುವೆಯಿಂದ ನೀರು ಹರಿಸಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥ ಗಂಗಾರಾಂ ಸಿಂಗ್ ಜಿಲ್ಲಾಧಿ ಕಾರಿಗಳಿಗೆ ತಿಳಿಸಿದರು. ಸಹಾಯಕ ಆಯುಕ್ತ ಆಕಾಶ್, ತಹಶೀಲ್ದಾರ್ ಮಂಜುನಾಥ, ಕಂದಾಯ ನಿರೀಕ್ಷಕ ಬಸವರಾಜ್, ಎ.ಇ.ಇ. ವೀರೇಶನಾಯ್ಕ, ಗ್ರಾಮಲೆಕ್ಕಾ ಧಿಕಾರಿ ಮಲ್ಲಪ್ಪ ಗುಡಿಹಿಂದಲ ಇದ್ದರು.