Advertisement

ಕೋವಿಡ್‌ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ

10:36 AM Jul 24, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಗುರುವಾರ ನಗರದ ಚಂದ್ರಬಂಡ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿದ ಜಿಲ್ಲಾ ಧಿಕಾರಿ ಆರ್‌. ವೆಂಕಟೇಶ ಕುಮಾರ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.

Advertisement

ಈ ಹಿಂದೆ ಇದನ್ನು ಸರ್ಕಾರಿ ಕ್ವಾರಂಟೈನ್‌ ಕೇಂದ್ರವನ್ನಾಗಿ ಬಳಸಿದ್ದು, ಅದನ್ನು ಇನ್ನುಮುಂದೆ ಕೊರೊನಾ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಬೇಕು. ಅಲ್ಲಿಯೇ ರೋಗ ಲಕ್ಷಣಗಳುಳ್ಳವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುವುದು. ಪ್ರತಿ ಕೊಠಡಿಯಲ್ಲಿ ಇಬ್ಬರು ಸೋಂಕಿತರಿಗೆ ಅವಕಾಶ ಮಾಡಿಕೊಡಲಾಗುವುದು. ಅವರಿಗೆ ಊಟ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನೂತನವಾಗಿದ್ದು, ಅಲ್ಲಿನ ಶೌಚಗೃಹಗಳನ್ನು ಸ್ಪತ್ಛಗೊಳಿಸಬೇಕು. ನೀರು ಸಮರ್ಪಕವಾಗಿ ಸರಬರಾಜಾಗುವ ವ್ಯವಸ್ಥೆ ಮಾಡಬೇಕು. ಅಲ್ಲಿಗೆ ಅಗತ್ಯವಿರುವ ಮಂಚ ಹಾಗೂ ಹಾಸಿಗೆಗಳನ್ನು ಪೂರೈಸಲು ಕ್ರಮ ವಹಿಸುವಂತೆ ತಹಶೀಲ್ದಾರ್‌ ಹಂಪಣ್ಣ ಅವರಿಗೆ ನಿರ್ದೇಶನ ನೀಡಿದರು.

ಅದೇ ರೀತಿ ಅಲ್ಲಿ ನರ್ಸಿಂಗ್‌ ಸ್ಟೇಷನ್‌, ಟಿವಿ, ಕೇರಮ್‌, ಚೆಸ್‌ ಸೇರಿದಂತೆ ರೋಗಿಗಳು ಕಾಲ ಕಳೆಯಲು ಅನುಕೂಲವಾಗುವ ವಾತಾವರಣ ಕಲ್ಪಿಸಬೇಕು. ವಸತಿ ಶಾಲೆಯ ಸಂಕೀರ್ಣವನ್ನು ಸಂಪೂರ್ಣ ಸ್ಪಚ್ಛಗೊಳಿಸಬೇಕು. ಹಂದಿ ಹಾಗೂ ನಾಯಿಗಳ ಕಾಟ ಇರದಂತೆ ನೋಡಿಕೊಳ್ಳುವಂತೆ ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಯರಮರಸ್‌ಗೆ ಭೇಟಿ: ತದನಂತರ ಯರಮರಸ್‌ನ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿದ್ದ

Advertisement

ಜಿಲ್ಲಾಧಿಕಾರಿ, ಅಲ್ಲಿ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಪ್ರಕ್ರಿಯೆಗಳು ಹಾಗೂ ಔಷಧಗಳ ವಿವರ ಪಡೆದರು. ಅಲ್ಲಿನ ಉಸ್ತುವಾರಿ ಮೆಡಿಕಲ್‌ ಅಧಿಕಾರಿ ಡಾ| ಶಶಿಕಾಂತ ಮಾತನಾಡಿ, ಪ್ರತಿದಿನ ರೋಗಿಗಳನ್ನು ಪರೀಕ್ಷಿಸುವ ವೇಳೆ ಅವರು ಸೇವಿಸಬೇಕಾದ ಮಾತ್ರೆಗಳು ಹಾಗೂ ಔಷಧಗಳ ಬಗ್ಗೆ ತಿಳಿಸಿಕೊಡಬೇಕು. ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಇರುವ ವ್ಯವಸ್ಥೆಗಳನ್ನು ಬಳಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಈ ಕೇಂದ್ರದ ಸುತ್ತಮುತ್ತಲೂ ನಾಯಿ ಹಾಗೂ ಹಂದಿಗಳ ಹಾವಳಿ ಇರದಂತೆ ಕ್ರಮ ಕೈಗೊಳ್ಳುವಂತೆ ನಗರಸಭೆಯವರಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ಆರೋಗ್ಯ ಇಲಾಖೆ ಅಧಿಕಾರಿ ನಾಗರಾಜ, ಡಿವೈಎಸ್‌ಪಿ ಶಿವನಗೌಡ ಪಾಟೀಲ, ಆರೋಗ್ಯ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next