Advertisement

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

08:49 PM Oct 15, 2021 | Team Udayavani |

ಅ. 16ರಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅವರು ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದು, ಇದರಿಂದ ಮತ್ತೊಮ್ಮೆ ಇಲ್ಲಿನ ಜನರ ಬಹುಕಾಲದಿಂದ ಈಡೇರದ ಸಮಸ್ಯೆಗಳು ಮುನ್ನೆಲೆಗೆ ಬಂದಿದ್ದು, ಮಾತ್ರವಲ್ಲದೆ ಒಂದಷ್ಟಾದರೂ ಈಡೇರುವ ನಿರೀಕ್ಷೆ ಗ್ರಾಮಸ್ಥರದ್ದಾಗಿದೆ. ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಆವಶ್ಯಕವಾಗಿ ಈಡೇರಲೇಬೇಕಾದ ಅಗತ್ಯತೆಗಳ ಕುರಿತಂತೆ ಗ್ರಾಮಸ್ಥರು, ಜನಪ್ರತಿನಿಧಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು “ಉದಯವಾಣಿ’ಯು ತೆರೆದಿಟ್ಟಿದೆ.

Advertisement

ಉದಯವಾಣಿ “ಸುದಿನ’ ತಂಡ- ಕುಂದಾಪುರ/ಕೊಲ್ಲೂರು: ಅನಾರೋಗ್ಯವುಂಟಾದರೆ ಸರಕಾರಿ ಆಸ್ಪತ್ರೆಗೆ 25 – 30 ಕಿ.ಮೀ. ಅಲೆದಾಟ, ಒಂದೆಡೆ ಡೀಮ್ಡ್ ಫಾರೆಸ್ಟ್‌ನಿಂದ ಹಕ್ಕುಪತ್ರ ಸಿಗುತ್ತಿಲ್ಲ. ಮತ್ತೊಂದೆಡೆ ಕೃಷಿಗೆ ಕಾಡು ಪ್ರಾಣಿ ಹಾವಳಿ, ಲೋವೋಲ್ಟೇಜ್  ಸಮಸ್ಯೆ, ಹೊಂಡ- ಗುಂಡಿಮಯ ಗ್ರಾಮೀಣ ರಸ್ತೆಗಳು.. ಇದು ಪಶ್ಚಿಮ ಘಟ್ಟದ ತಪ್ಪಲಿನ ಜಡ್ಕಲ್‌ – ಮುದೂರು ಗ್ರಾಮಸ್ಥರು ಎದುರಿಸುತ್ತಿರುವ ನಿತ್ಯದ ಸಮಸ್ಯೆಗಳ ಸರಮಾಲೆ.ಅ. 16ರಂದು ಬೆಳಗ್ಗೆ 10 ಗಂಟೆಯಿಂದ ಬೈಂದೂರು ತಾಲೂಕಿನ ಜಡ್ಕಲ್‌ ಗ್ರಾ.ಪಂ. ಬಳಿಯ ಶ್ರೀ ಮೂಕಾಂಬಿಕಾ ದೇಗುಲದ ಪ್ರೌಢಶಾಲೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಿದ್ದಾರೆ.

ಆಸ್ಪತ್ರೆಗೆ 30 ಕಿ.ಮೀ. ಸಂಚಾರ
ಜಡ್ಕಲ್‌ ಗ್ರಾಮಸ್ಥರು ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಯಾರಿಗಾದರೂ ಅನಾರೋಗ್ಯ ಉಂಟಾದರೆ ಚಿಕಿತ್ಸೆಗಾಗಿ ಜಡ್ಕಲ್‌ನಿಂದ 12 ಕಿ.ಮೀ., ಸೆಳ್ಕೋಡಿನಿಂದ 15 ಕಿ.ಮೀ., ಇನ್ನು ಮುದೂರಿನಿಂದ ಬರೋಬ್ಬರಿ 30 ಕಿ.ಮೀ. ಸಂಚರಿಸಬೇಕಾಗಿದೆ. ಜಡ್ಕಲ್‌, ಸೆಳ್ಕೋಡು ಭಾಗದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು ಎನ್ನುವ ಬೇಡಿಕೆ ಗ್ರಾಮಸ್ಥರದ್ದಾಗಿದೆ.

ಮಣ್ಣಿನ ರಸ್ತೆಗೆಂದು ಮುಕ್ತಿ?
ಸೆಳ್ಕೋಡು ಗ್ರಾಮದ ಹರುಮನೆ – ಗೊಳಿಗುಡ್ಡೆ ಮಣ್ಣಿನ ರಸ್ತೆಯೂ ಈ ಬಾರಿಯ ಮಳೆಗೆ ಮತ್ತಷ್ಟು ಹದಗೆಟ್ಟಿದ್ದು, ಸಂಚಾರವೇ ದುಸ್ತರವಾಗಿದೆ. ಪ್ರತೀ ಮಳೆಗಾಲದಲ್ಲಿ ಕೆಸರು ಮಯವಾದರೆ, ಬೇಸಗೆಯಲ್ಲಿ ಧೂಳು ಮಯವಾಗಿರುತ್ತದೆ. ಒಂದೂವರೆ 3-4 ಕಿ.ಮೀ. ದೂರದ ಈ ರಸ್ತೆಯ ಅಭಿವೃದ್ಧಿಗೆ ಈ ಭಾಗದ ಜನರು ಸಾಕಷ್ಟು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಮಹಿಷಮರ್ದಿನಿ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯೂ ಇದೆ ಆಗಿದೆ. ಸುಮಾರು 1,300 ಮಂದಿ ಮತದಾರರು, 2 ಸಾವಿರಕ್ಕೂ ಅಧಿಕ ಮಂದಿ ಇದೇ ರಸ್ತೆಯನ್ನು ನಿತ್ಯದ ಓಡಾಟಕ್ಕೆ ಆಶ್ರಯಿಸಿದ್ದಾರೆ. ಇದಲ್ಲದೆ ಮೆಕ್ಕೆ- ಬಸ್ರಿಬೇರು, ತರ್ಕಾಣ ರಸ್ತೆಯ ಅಭಿವೃದ್ಧಿಗೂ ಬೇಡಿಕೆಯಿದೆ.
ಮುಖ್ಯ ರಸ್ತೆಯೂ ಹೊಂಡಮಯ

ಜಡ್ಕಲ್‌ನಿಂದ ಸೆಳ್ಕೋಡುವರೆಗಿನ 5 ಕಿ.ಮೀ. ದೂರದ ಲೋಕೋಪಯೋಗಿ ಇಲಾಖೆ ಅಧೀನದ ಮುಖ್ಯ ರಸ್ತೆಯು ಹಲವು ವರ್ಷಗಳಿಂದ ಮರು ಡಾಮರು ಕಾಮಗಾರಿಯಾಗದೇ ಅನೇಕ ಕಡೆಗಳಲ್ಲಿ ಹೊಂಡಮಯವಾಗಿದೆ. ಇದಲ್ಲದೆ ಕೆಲವೆಡೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಈ ರಸ್ತೆಯ ಬೀಸಿನ ಪಾರೆ ಕಿರಿದಾದ ಸೇತುವೆಯಿದ್ದು, ರಸ್ತೆ ಅಗಲೀಕರಣಗೊಳಿಸಿ, ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಈ ಭಾಗದ ಜನರದ್ದಾಗಿದೆ.

Advertisement

ಪ್ರತ್ಯೇಕ ಪಂಚಾಯತ್‌ ಬೇಡಿಕೆ
10 ಗ್ರಾ.ಪಂ. ಸದಸ್ಯರಿರುವ ಜಡ್ಕಲ್‌ ಹಾಗೂ 8 ಸದಸ್ಯರಿರುವ ಮುದೂರು ಎರಡು ಗ್ರಾಮವನ್ನೊಳಗೊಂಡ 18 ಸದಸ್ಯರಿರುವ ದೊಡ್ಡ ಪಂಚಾಯತ್‌ ಜಡ್ಕಲ್‌. ಅನೇಕ ವರ್ಷಗಳಿಂದ ಮುದೂರು ಭಾಗದ ಜನರಿಗೆ ಜಡ್ಕಲ್‌ ಪಂಚಾಯತ್‌ ಕಚೇರಿಗೆ ದೂರ ಆಗುವುದರಿಂದ ಜಡ್ಕಲ್‌ ಹಾಗೂ ಮುದೂರನ್ನು ಬೇರ್ಪಡಿಸಿ, ಮುದೂರನ್ನು ಪ್ರತ್ಯೇಕ ಗ್ರಾ.ಪಂ. ಆಗಿ ರಚಿಸಬೇಕು ಎನ್ನುವ ಬೇಡಿಕೆಯಿದೆ. ಮುದೂರು, ಬೆಳ್ಕಲ್‌, ಮೈದಾನ, ಉದಯನಗರ, ಉಂಡಿ, ಮತ್ತಿತರ ಭಾಗದ ಜನರು ಪಂಚಾಯತ್‌ ಕೆಲಸಕ್ಕಾಗಿ 15 ಕಿ.ಮೀ.ಗೂ ದೂರ ಹೋಗಬೇಕಾಗಿದೆ.

ಇದನ್ನೂ ಓದಿ:ಕಾಪು : ಮಾನಸಿಕ ಅಸ್ವಸ್ಥ ವ್ಯಕ್ತಿ, ಗಾಯಗೊಂಡ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು!

ಹಕ್ಕುಪತ್ರ ಬಾಕಿ
ಜಡ್ಕಲ್‌ ಗ್ರಾಮದಲ್ಲಿ 255 ಮಂದಿ ನಿವೇಶನಕ್ಕಾಗಿ ಹಕ್ಕುಪತ್ರ ಸಲ್ಲಿಸಿದ್ದು, ಅದರಲ್ಲಿ 51 ಮಂಜೂರಾಗಿದ್ದು, 182 ತಿರಸ್ಕೃತವಾಗಿದ್ದು, 24 ಬಾಕಿ ಇದೆ. ಮುದೂರಿನಲ್ಲಿ 131 ಅರ್ಜಿ ಸಲ್ಲಿಕೆ, 38 ಮಂಜೂರಾದರೆ, 86 ತಿರಸ್ಕೃತಗೊಂಡಿದ್ದು, 7 ಬಾಕಿ ಇದೆ. ಇನ್ನು ಪಂಚಾಯತ್‌ ವ್ಯಾಪ್ತಿಯಲ್ಲಿ 528 ಮಂದಿ ನಿವೇಶನ ರಹಿತರಿದ್ದು, ಕಳೆದ 2 ವರ್ಷದಿಂದ ಒಂದೇ ಒಂದು ಮನೆ ಮಂಜೂರಾಗಿಲ್ಲ. ಪಂಚಾಯತ್‌ ವ್ಯಾಪ್ತಿಯಲ್ಲಿ ರುದ್ರಭೂಮಿ ಇಲ್ಲದೆ ಸಮಸ್ಯೆಯಾಗುತ್ತಿದೆ.

ಎಟಿಎಂಗಾಗಿ ಕಿ.ಮೀ.ಗಟ್ಟಲೆ ಅಲೆದಾಟ
ಜಡ್ಕಲ್‌ನಲ್ಲಿ ಹಿಂದೆ ಸಿಂಡಿಕೇಟ್‌ ಬ್ಯಾಂಕ್‌ ಎಟಿಎಂ ಇತ್ತು. ಆದರೆ ಆ ಬಳಿಕ ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಂಡ ಬಳಿಕ ಇಲ್ಲಿನ ಎಟಿಎಂ ಕೇಂದ್ರ ಸ್ಥಗಿತಗೊಂಡಿದೆ. ಇದರಿಂದ ಜಡ್ಕಲ್‌, ಮುದೂರು, ಸೆಳ್ಕೋಡು ಭಾಗದವರು ತುರ್ತಾಗಿ ಹಣ ತೆಗೆಯಬೇಕಾದರೆ 20 ರಿಂದ 30 ಕಿ.ಮೀ. ದೂರದ ಇಡೂರು-ಕುಂಜ್ಞಾಡಿ, ಕೊಲ್ಲೂರು ಅಥವಾ ವಂಡ್ಸೆಗೆ ಹೋಗಬೇಕಾಗಿದೆ. ಇಲ್ಲಿನ ಎಟಿಎಂ ಕೇಂದ್ರವನ್ನು ಮತ್ತೆ ಜನಸೇವೆಗೆ ತೆರೆದಿಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಲೋವೋಲ್ಟೇಜ್ ಗೋಳು
ಜಡ್ಕಲ್‌ ಗ್ರಾಮದ ಬಹುತೇಕ ಮಂದಿ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ತೆಂಗು, ಅಡಿಕೆ, ರಬ್ಬರ್‌, ಅನಾನಸು, ತರಕಾರಿ, ಭತ್ತ ಪ್ರಮುಖ ಕೃಷಿಯಾಗಿದೆ. ಆದರೆ ಬೇಸಗೆಯಲ್ಲಿ ಈ ಭಾಗದ ರೈತರಿಗೆ ವಿದ್ಯುತ್‌ ಲೋವೋಲ್ಟೇಜ್ಅನ್ನುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಾಲ್ಕಲ್‌ ಬಳಿ ಸಬ್‌ಸ್ಟೇಶನ್‌ ಆದರೆ ಈ ಸಮಸ್ಯೆ ಇತ್ಯರ್ಥವಾಗಲಿದ್ದು, ಆದರೆ ಅದಕ್ಕೆ ಇನ್ನೂ ಅರಣ್ಯ ಇಲಾಖೆಯ ಅಡ್ಡಿ ನಿವಾರಣೆಯಾಗಿಲ್ಲ. ಇನ್ನು ಕೃಷಿಗೆ ಕಾಡುಪ್ರಾಣಿಗಳ ಹಾವಳಿಯಂತೂ ಬಗೆಹರಿಯದ ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next