ಗದಗ: ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿ-65 ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಿದಾನಂದ ಕರ್ತವ್ಯಕ್ಕೆ ಹಾಜರಾಗದೇ, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅಧಿಕಾರಿ ವಿರುದ್ಧ ಪ್ರಜಾ ಪ್ರತಿನಿಧ್ಯ ಕಾಯ್ದೆ 1951ರ ಕಲಂ ಅಡಿ ಅವಶ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದ್ದಾರೆ.
ಈ ಮೊದಲು ಶಿರಹಟ್ಟಿ-65 ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ರಿಟರ್ನಿಂಗ್ ಅಧಿಕಾರಿಗಳಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯು ಸ್ಥಳೀಯ ವಾಸಿಯಾಗಿದ್ದರಿಂದ ಸರಕಾರವು ಉಲ್ಲೇಖಿತ ಅಧಿಸೂಚನೆಯನ್ವಯ ವರ್ಗಾವಣೆಗೊಳಿಸಿ, ಆ ಹುದ್ದೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಿದಾನಂದ ಅವರನ್ನು ನಿಯೋಜಿಸಲಾಗಿತ್ತು.
ಆದರೆ, ಉಪಕಾರ್ಯದರ್ಶಿ ಚಿದಾನಂದ ಅವರು ಕರ್ತವ್ಯಕ್ಕೆ ಹಾಜರಾಗದೇ, ನೋಟಿಸ್‌ಗೆ ಉತ್ತರಿಸದೇ, ಕರೆಗಳನ್ನೂ ಸ್ವೀಕರಿಸದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿರ್ಲಕ್ಷ್ಯ ಆರೋಪದಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ನೀಡಿದ ದೂರಿನ ಅನ್ವಯ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್