ರಾಮನಗರ: ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಿದ್ದರು.
ಶಿಷ್ಟಾಚಾರದಂತೆಯೇ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಿ, ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಿ. ಶಿಷ್ಟಾಚಾರ ಉಲ್ಲಂಘನೆಯಾದಲ್ಲಿ ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆಯನ್ನಾಗಿಸುವುದಾಗಿ ಎಚ್ಚರಿಸಿದರು.
ಅನುಮತಿ ಅಗತ್ಯ: 2019ರ ಏಪ್ರಿಲ್‌ನಲ್ಲಿ ಸರ್ಕರದ ಮುಖ್ಯಕಾರ್ಯದರ್ಶಿಗಳು ಹೊರೆಡಿಸಿರುವ ಸುತ್ತೋಲೆಯ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಆಮಂತ್ರಣ ಪತ್ರಿಕೆ ವಿತರಣೆ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕು. ಅನುಮೋದನೆ ಬಳಿಕ ಯಾವುದೇ ಹೆಚ್ಚುವರಿ ಹೆಸರುಗಳನ್ನು ಸೇರಿಸಬಾರದು ಹಾಗೂ ಅನುಮೋದಿಸಿರುವ ಹೆಸರುಗಳನ್ನು ಕೈಬಿಡಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜನಪ್ರತಿನಿಧಿಗಳ ಪತ್ರಗಳಿಗೆ ಉತ್ತರಿಸಿ: ಜಿಲ್ಲೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರಾಗಲಿ ಇಲ್ಲವೆ ಜನಪ್ರತಿನಿಧಿಗಳ ಪತ್ರಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮರು ಟಪಾಲಿನಲ್ಲಿ ಉತ್ತರಿಸಬೇಕು. ಕೇಳಿರುವ ಮಾಹಿತಿಗಳನ್ನು ಅವರಿಗೆ ಒದಗಿಸುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು