Advertisement

Manipal: ಸಿ-ವಿಜಿಲ್‌ ದೂರು ಸಲ್ಲಿಕೆಗೆ ಜಿಲ್ಲಾಧಿಕಾರಿ ಸೂಚನೆ

02:08 PM Mar 27, 2024 | Team Udayavani |

ಮಣಿಪಾಲ: ಚುನಾವಣೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಸಾರ್ವಜನಿಕರು ಸಿ-ವಿಜಿಲ್‌ ತಂತ್ರಾಂಶದ ಮೂಲಕ ನೀಡಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಲೊಕೆಶನ್‌ ಆಧಾರದಲ್ಲಿ 15-20 ನಿಮಿಷದಲ್ಲಿ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಯೂ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿವಿಜಿಲ್‌ನಲ್ಲಿ ದೂರು ನೀಡುವವರು ಹೆಸರು ಉಲ್ಲೇಖ ಮಾಡಬೇಕೆಂದೂ ಇಲ್ಲ. ಚುನಾವಣೆ ಸಂಬಂಧಿಸಿದ ದೂರು ನೀಡಲು ಸಾರ್ವಜನಿಕರು ಹೆಚ್ಚೆಚ್ಚು ಸಿವಿಜಿಲ್‌ ಬಳಕೆ ಮಾಡಬೇಕು. ಈಗಾಗಲೇ 124 ದೂರುಗಳು ಬಂದಿದ್ದು ಅದರಲ್ಲಿ 119 ದೂರು ಇತ್ಯರ್ಥ ಮಾಡಿದ್ದೇವೆ. 5 ದೂರಿನಲ್ಲಿ ಸರಿಯಾದ ಮಾಹಿತಿ ಇರಲಿಲ್ಲ ಎಂದರು.

ಮಾ.28ರಿಂದ ನಾಮಪತ್ರ ಸ್ವೀಕಾರ:

ಮಾ. 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎ.4ರವರೆಗೂ ನಡೆಯಲಿದೆ. ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿ ಸಹಿತ 5 ಮಂದಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿಯೊಳಗೆ ಪ್ರವೇಶ ಇರಲಿದೆ. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಸಬೇಕು. 25 ಸಾವಿರ ರೂ. ಠೇವಣಿ ಇಡಬೇಕು. ಪರಿಶಿಷ್ಟ ಜಾತಿ, ಪಂಡಗದ ಅಭ್ಯರ್ಥಿಗಳು ಜಾತಿ ದೃಢೀಕರಣ ಪತ್ರ ಸಲ್ಲಿಸಿದಲ್ಲಿ 12,500 ರೂ. ಠೇವಣಿ ಇಡಬೇಕು. ಅಭ್ಯರ್ಥಿಯು ಚುನಾವಣೆ ಉದ್ದೇಶಕ್ಕಾಗಿ ಹೊಸ ಬ್ಯಾಂಕ್‌ ಖಾತೆ ತೆರೆದು ಪಾಸ್‌ಬುಕ್‌ನ ನಕಲು ಪ್ರತಿ ಒದಗಿಸಬೇಕು. ಚುನಾವಣೆಯ ಎಲ್ಲ ಆರ್ಥಿಕ ವ್ಯವಹಾರವನ್ನು ಈ ಖಾತೆಯ ಮೂಲಕವೇ ನಿರ್ವಹಿಸಬೇಕು. ನಾಮಪತ್ರ ಸಲ್ಲಿಸಿದ ಅನಂತರ ಅಭ್ಯರ್ಥಿಯು ಪ್ರಮಾಣವಚನ ಸ್ವೀಕರಿಸಬೇಕು. ನಾಲ್ಕು ನಾಮಪತ್ರದಲ್ಲಿ ಆಸ್ತಿ ವಿವರ ಇತ್ಯಾದಿ ಎಲ್ಲ ವಿವರಗಳನ್ನು ಒಂದಕ್ಕೆ ಸಲ್ಲಿಸಿದರೆ ಸಾಕಾಗುತ್ತದೆ ಎಂದು ಹೇಳಿದರು.

ಅನುಮತಿ ಕಡ್ಡಾಯ:

Advertisement

ಚುನಾವಣೆ ಪ್ರಚಾರ ಸಾಮಗ್ರಿ ಬಳಸಲು, ವಾಹನ ಉಪಯೋಗಿಸಲು, ಸಭೆ, ಸಮಾರಂಭಗಳನ್ನು ನಡೆಸಲು ಲಿಖೀತ ರೂಪದಲ್ಲಿ ಪೂರ್ವಾನುಮತಿ ಪಡೆಯಬೇಕು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸಲು ಅವಕಾಶ ಇರುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮಕ್ಕೆ ಸುವಿಧ ಪೋರ್ಟಲ್‌ ಮೂಲಕ ಅನುಮತಿ ಪಡೆಯಬಹುದಾಗಿದೆ. ಎಲ್ಲ ರೀತಿಯ ರ್ಯಾಲಿಗೂ ಅನುಮತಿ ಪಡೆಯಬೇಕು ಎಂದರು.

ಮನೆಯಿಂದ ಓಟ್‌ :

85 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತ ದಾನ ಮಾಡಲು ಅವಕಾಶವಿದೆ. ಒಮ್ಮೆ ಅರ್ಜಿ ಸಲ್ಲಿಸಿ, ಆ ಅರ್ಜಿ ದೃಢೀಕರಿಸಿದ ಅನಂತರದಲ್ಲಿ 2 ಬಾರಿ ಚುನಾವಣ ತಂಡ ಸಂಬಂಧಪಟ್ಟವರ ಮನೆಗೆ ಭೇಟಿ ನೀಡಲಿದೆ. ಈ ಅವಧಿಯಲ್ಲಿ ಮತದಾನ ಮಾಡದೇ ಇದ್ದಲ್ಲಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದರು.

ಅನರ್ಹತೆ:

ಚುನಾವಣೆಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಯನ್ನು ಅಭ್ಯರ್ಥಿ ನಿರ್ದಿಷ್ಟ ಕಾಲಮಿತಿ ಯಲ್ಲಿ ಚುನಾವಣ ಆಯೋಗಕ್ಕೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅಂಥವರಿಗೆ ಆಯೋಗವು 3 ವರ್ಷಗಳ ಅವಧಿಗೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ವಿಧಿಸುತ್ತದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ಜಾಸ್ತಿ ವರ್ಷ ನಿರ್ಬಂಧ ಹೇರುವ ಸಾಧ್ಯತೆಯಿದೆ ಎಂದು ವಿವರಿಸಿದರು.

1.25 ಲಕ್ಷ ಮತದಾರರು ಡಿಲೀಟ್‌

ಹೊಸ ಮತದಾರರ ಸೇರ್ಪಡೆಯಂತೆ ಮೃತಪಟ್ಟವರು ಸಹಿತ ಬೇರೆಡೆಗೆ ಸ್ಥಳಾಂತರವಾದವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡವರನ್ನು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಲಾಗುತ್ತದೆ. ಸ್ವಯಂಪ್ರೇರಿತವಾಗಿ ಅಧಿಕಾರಿಗಳಿಗೆ ಡಿಲೀಟ್‌ ಮಾಡುವ ಅಧಿಕಾರ ಇಲ್ಲ. ಮತದಾರ ಮೃತ ಪಟ್ಟಿರುವ ಬಗ್ಗೆ ಸಂಬಂಧಿಕರು ಅರ್ಜಿ ಸಲ್ಲಿಸಿದಾಗ ಮಾತ್ರ ಡಿಲೀಟ್‌ ಮಾಡಲಾಗುತ್ತದೆ. 2019ರಿಂದ ಈವರೆಗೆ 1.25 ಲಕ್ಷ ಮತದಾರರನ್ನು ಪಟ್ಟಿಯಿಂದ ಡಿಲೀಟ್‌ ಮಾಡಲಾಗಿದೆ. ಹಾಗೆಯೇ ಹೊಸ ಸೇರ್ಪಡೆಯೂ ಇಷ್ಟೇ ಪ್ರಮಾಣದಲ್ಲಿದೆ ಎಂದು ಮಾಹಿತಿ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next