ಮಂಗಳೂರು: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮುಂಗಾರು ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಕೃತಿಕವಾಗಿ ಹಾಗೂ ಮಾನವನಿಂದಾಗುವ ಅವಘಡಗಳು ಸಂಭವಿಸದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಹಾಗೂ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿ.ಪಂ. ಮಿನಿ ಸಭಾಂಗಣದಲ್ಲಿ ಗುರುವಾರ ವಿಪತ್ತು ನಿರ್ವಹಣೆ ಕುರಿತಂತೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ. ಅವರ ತಂಗು ವಿಕೆಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು. ಸರಕಾರದ ಏಜೆನ್ಸಿಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಿರ್ವಹಿಸುವ ಕೆಲಸಗಾರರಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಬೇಕು. ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ತೊಂದರೆ ಆಗದಂತೆ ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಮಿಶ್ರಿಕೋಟೆ ಅವರು ಸಂಬಂಧಿಸಿದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ವಾಹನ ಸಂಚಾರ: ಎಚ್ಚರ :
Related Articles
ಜಿಲ್ಲೆಯಲ್ಲಿ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳೆ ಸುರಿಯುತ್ತಿರುವ ಕಾರಣ ಅಲ್ಲಿ ಸಂಚರಿಸುವ ಬಸ್‌ಗಳು ಅವಘಡ ಆಗದಂತೆ ಮುಂಜಾಗ್ರತೆ ಪಾಲಿಸಬೇಕು. ನಿಗದಿಪಡಿಸಿದ ವೇಗದಲ್ಲಿಯೇ ಸಂಚರಿಸಬೇಕು. ಗುರುತಿನ ಬೋರ್ಡ್ ಅಳವಡಿಸಬೇಕು ಎಂದರು.
ಮಳೆಯಿಂದಾಗಿ ರಸ್ತೆ ಸಂಪರ್ಕ ಅಥವಾ ಇನ್ನಿತರ ಸಮಸ್ಯೆಗಳು ತಲೆ ದೋರಿದಾಗ ಶಾಲೆ, ಕಾಲೇಜು ಗಳಿಗೆ ರಜೆ ನೀಡಲು ತಹಶೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಎಸ್‌ಪಿ ಹೃಷಿಕೇಶ್ ಭಗವಾನ್:
ಸೋನಾವಣೆ ಮಾತನಾಡಿ, ಹಳ್ಳ-ಕೊಳ್ಳ ಗಳ ಮೂಲಕ ಹಾದುಹೋಗುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟು ಕೊಳ್ಳಬೇಕು. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಸಂಬಂಧಿಸಿದ ಶಾಲೆಗಳಿಗೆ ರಜೆ ಘೋಷಿಸಲು ಅನುಕೂಲವಾಗಲಿದೆ ಎಂದರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಂ ಶಂಕರ್, ಸಹಾಯಕ ಪೊಲೀಸ್ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು.
1.50ಲಕ್ಷ ರೂ. ಅನುದಾನ :
ಜಿಲ್ಲೆಯಲ್ಲಿ ದುಸ್ಥಿತಿಯಲ್ಲಿರುವ ಶಾಲೆಗಳ ದುರಸ್ತಿಗೆ 1.50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು. ಯಾವುದೇ ತುರ್ತು ಕಾಮಗಾರಿ ಆವಶ್ಯಕತೆಯಿದ್ದಲ್ಲಿ ವರದಿ ನೀಡಬೇಕು. ಅಂತಹ ಶಾಲೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಸಂಭವನೀಯ ಭೂಕುಸಿತ ಗುಡ್ಡ ಕುಸಿತ ಪ್ರಕರಣಗಳಿಂದ ಎಚ್ಚರವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಅಲ್ಲಿ ಜನರಿದ್ದರೆ ಸ್ಥಳಾಂತರಿಸಲು ಕ್ರಮವಹಿಸಬೇಕು. ಅವಘಡಗಳು ಸಂಭವಿಸಿದಲ್ಲಿ ಎಸ್.ಡಿ.ಆರ್.ಎಫ್. ಹಾಗೂ ಎನ್.ಡಿ .ಆರ್.ಎಫ್. ಮಾರ್ಗಸೂಚಿಗಳಂತೆ ಪರಿಹಾರ ನೀಡಬೇಕು, ಇದಕ್ಕಾಗಿ ಜಿಲ್ಲೆಯ ಪ್ರತಿಯೊಂದು ತಾಲೂಕುಗಳ ತಹಶೀಲ್ದಾರರ ಖಾತೆಯಲ್ಲಿ 50 ಲಕ್ಷ ರೂ.ಗಳ ಅಗತ್ಯ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ಈಗಲೇ ಅಗತ್ಯ ಸ್ಥಳಗಳನ್ನು ಗುರುತಿಸಿಕೊಳ್ಳುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಯವರು ಸಿಬಂದಿ ಸಜ್ಜುಗೊಳಿಸಿಟ್ಟಿರುವಂತೆ ಸೂಚಿಸಿದರು.