Advertisement

ಕಾಲೇಜು ವಿದ್ಯಾರ್ಥಿಗಳಿಗೆ ಇತಿಹಾಸ ಪಾಠ ಮಾಡಿದ ಚಾಮರಾಜನಗರ ಜಿಲ್ಲಾಧಿಕಾರಿ

10:10 PM Feb 02, 2021 | Team Udayavani |

ಚಾಮರಾಜನಗರ:  ಇಲ್ಲಿನ  ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠ ಮಾಡಿ ಗಮನ ಸೆಳೆದಿದ್ದಾರೆ.

Advertisement

ಜಿಲ್ಲಾಧಿಕಾರಿಯವರು ಕಾಲೇಜಿನಲ್ಲಿ ಪಾಠ ಮಾಡಿದ್ದೇಕೆ? ಎಂಬ ಅಚ್ಚರಿ ಎಲ್ಲರಲ್ಲಿ ಮೂಡಿರಬಹುದು! ಅನೇಕರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು 2000 ರಿಂದ 2001 ರವರೆಗೆ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದರು!

ಶಿಕ್ಷಕರಾದವರೆಗೆ ಆ ಸೆಳೆತ ಎಂದಿಗೂ ಬಿಡದು! ಅವರು ಎಷ್ಟು ದೊಡ್ಡ ಹುದ್ದೆಗೆ ಹೋದರೂ, ಶಿಕ್ಷಕ ವೃತ್ತಿಯ ಜ್ಞಾನ ಬೋಧನೆಯ ತವಕ ಇದ್ದೇ ಇರುತ್ತದೆ. ಜಿಲ್ಲಾಧಿಕಾರಿಯವರ ಭಾಷಣಗಳಲ್ಲಿ, ಮಾತುಕತೆಗಳಲ್ಲಿ ಅವರೊಬ್ಬ ಉಪನ್ಯಾಸಕರಾಗಿದ್ದರು ಎಂಬುದು ಅರ್ಥವಾಗುತ್ತದೆ.

ಜಿಲ್ಲಾಧಿಕಾರಿಯವರು ತಮ್ಮ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಎಂಬ ವಿಷಯ ತಿಳಿದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ಅವರು, ಒಂದು ಬಾರಿ ಕಾಲೇಜಿಗೆ ಭೇಟಿ ನೀಡಿ, ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದರು. ಅದಕ್ಕೆ ಸಂತೋಷದಿಂದಲೇ ಸಮ್ಮಿತಿಸಿದ ಡಾ. ರವಿ  ಅವರು ಮಂಗಳವಾರ ಕಾಲೇಜಿಗೆ ಬಂದು ಉಪನ್ಯಾಸ ನೀಡಿದರು.

ಮಂಗಳವಾರ ಬೆಳಿಗ್ಗೆ 9ಗಂಟೆಗೆ  ನಗರದ ಕಾಲೇಜಿಗೆ ಆಗಮಿಸಿದ ಜಿಲ್ಲಾಧಿಕಾರಿಯವರನ್ನು ಪ್ರಾಂಶುಪಾಲರಾದ ಡಾ. ಪ್ರೇಮಲತಾ  ಮತ್ತು ಸಿಬ್ಬಂದಿ ಸ್ವಾಗತಿಸಿದರು. ಬಳಿಕ ಅಂತಿಮ ಬಿ.ಎ. ತರಗತಿಗೆ ತೆರಳಿದ ಜಿಲ್ಲಾಧಿಕಾರಿ ಡಾ. ರವಿ ಅವರು ಆರಂಭದಲ್ಲಿ ವಿದ್ಯಾರ್ಥಿಗಳೊಡನೆ ಕುಶಲ ಮಾತುಕತೆ ನಡೆಸಿದರು. ನಾನು ಜಿಲ್ಲಾಧಿಕಾರಿ ಎಂಬುದನ್ನು ಈಗ ಮರೆತು ಬಿಡಿ. 20 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ನಾನು ಪಾಠ ಮಾಡಿದ್ದೆ. ಸರಿಯಾಗಿ 20 ವರ್ಷಗಳ ನಂತರ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಜೊತೆ ವಿಚಾರಗಳನ್ನು ಹಂಚಿಕೊಳ್ಳಲು ಬಂದಿರುವ ನಾನೊಬ್ಬ ಮೇಷ್ಟ್ರು. ನಿಮ್ಮ ಎಚ್‌ಓಡಿಯವರು ಮೈಸೂರು ಒಡೆಯರ್ ಸಂಸ್ಥಾನದ ಬಗ್ಗೆ ಪಾಠ ಮಾಡಲು ತಿಳಿಸಿದ್ದಾರೆ ಎಂದು ಪೀಠಿಕೆ ಹಾಕಿ ಪಾಠ ಆರಂಭಿಸಿದರು.

Advertisement

ಇದನ್ನೂ ಓದಿ:ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಕೇವಲ ಎರಡು ಆಯ್ಕೆಗಳಿವೆ :ಅಶೋಕ್ ಹೇಳಿದ್ದೇನು?

ನಂತರ ಮೈಸೂರು ಒಡೆಯರ್ ಸಂಸ್ಥಾನ, ಅದರ ವೈಶಿಷ್ಟ್ಯತೆ, ಒಡೆಯರ್ ವಂಶಸ್ಥರು ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಕುರಿತು ಪಾಠ ಮಾಡಿದರು. ಸುಮಾರು 1 ಗಂಟೆ ಕಾಲ ಡಾ. ರವಿ ಅವರು ಸ್ವಾರಸ್ಯಕರವಾಗಿ, ಆಸಕ್ತಿ ಮೂಡುವಂತೆ ಪಾಠ ಮಾಡಿದರು. ವಿದ್ಯಾರ್ಥಿಗಳು ಸಹ ಅಷ್ಟೇ  ಆಸಕ್ತಿಯಿಂದ ಪಾಠವನ್ನು ಆಲಿಸಿದ್ದು ಕಂಡುಬಂತು. ಒಡೆಯರ್ ಸಂಸ್ಥಾನ ಕುರಿತು ಬುಧವಾರವೂ ತರಗತಿಯನ್ನು ತೆಗೆದುಕೊಳ್ಳುವುದಾಗಿ ಡಾ. ರವಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next