ಮಡಿಕೇರಿ: ವ್ಯಾವಹಾರಿಕ ಸಂಘ, ಸಂಸ್ಥೆಗಳು ಸಾಮಾಜಿಕ ಕಳಕಳಿಯನ್ನು ತೋರುವುದರೊಂದಿಗೆ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದ್ದಾರೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ವತಿಯಿಂದ ಕೊಡಗು ಜಿಲ್ಲೆಯ ಸಾರ್ವಜನಿಕರ ಉಪಯೋಗಕ್ಕಾಗಿ ಮಂಗಳೂರಿನ ಎಚ್ಪಿಸಿಎಲ್ನ ಮಾರಾಟಾಧಿಕಾರಿ ಅರವಿಂದ್ ಮಿಶ್ರಾ ಅವರು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸುಸ್ಸಜಿತವಾದ ಆ್ಯಂಬುಲೆನ್ಸ್ ಹಸ್ತಾಂತರ ಮಾಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಇಂತಹ ಪೆಟ್ರೋಲಿಯಂ ಸಂಸ್ಥೆಗಳು ಸಾಮಾಜಿಕ ಕಾಳಜಿಯೊಂದಿಗೆ ಜನರ ಆರೋಗ್ಯದ ರಕ್ಷಣೆಗೆ ಹಾಗೂ ನಗರದ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕೆಂದರು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಅರವಿಂದ್ ಮಿಶ್ರಾ ಅವರು ಮಾತನಾಡಿ ಭಾರತ ಸರ್ಕಾರದ ಸಹಯೋಗದೊಂದಿಗೆ ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆರೋಗ್ಯದ ತುರ್ತು ರಕ್ಷಣೆಗೆ ಆ್ಯಂಬುಲೆನ್ಸ್‌ನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಆಂಬುಲೆನ್ಸ್‌ನ ಅಗತ್ಯವಿದೆ. ಜಿಲ್ಲೆಯಾದ್ಯಂತ ಪೆಟ್ರೋಲ್ ಪಂಪುಗಳ ನೂರು ಗಜ ಅಂತರದವೆರೆಗೆ ಸ್ವಚ್ಚತೆಯನ್ನು ಕಾಪಾಡುವಂತೆ ಸ್ವಚ್ಚತಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಸ್ವಚ್ಚ ದೇಶ, ಸ್ವಚ್ಚ ಪರಿಸರ ಉಳಿಸಿ ಬೆಳೆಸಲು ಸಮಯವನ್ನು ಮೀಸಲಾಗಿರಿಸುತ್ತೇನೆ. ಪ್ರತಿ ವರ್ಷದ 100 ಗಂಟೆಗಳನ್ನು ಅಂದರೆ ಪ್ರತಿ ವಾರಕ್ಕೆ 2 ಗಂಟೆಗಳನ್ನು ಸ್ವಚ್ಛತೆ ಕಾಪಾಡಲು ಸ್ವಚ್ಚ ಭಾರತ ಅಭಿಯಾನಕ್ಕಾಗಿ ಮೀಸಲಿಡುತ್ತೇನೆ. ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಹಾಕುವುದಿಲ್ಲ ಮತ್ತು ಉಳಿದವರಿಗೂ ಈ ಬಗ್ಗೆ ವಿವರಿಸುತ್ತೇನೆ. ಮೊದಲನೆಯದಾಗಿ ಕುಟುಂಬ, ವಾಸಸ್ಥಳ, ಪರಿಸರ, ಕಾರ್ಯಸ್ಥಳ ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡುತ್ತೇನೆ. ಈ ಅಭಿಯಾನವನ್ನು ಎಷ್ಟು ಸಾಧ್ಯವೋ ಅಷ್ಟು ಹಳ್ಳಿ ಪಟ್ಟಣಗಳಲ್ಲಿ ಪ್ರಚಾರ ಮಾಡುತ್ತೇನೆ. ಕಡಿಮೆ ಪಕ್ಷ ಒಂದು ಸಾವಿರ ಜನರನ್ನು ಈ ಅಭಿಯಾನಕ್ಕೆ ಸ್ವಯಂ ಸೇವಕರಾಗಿ ತೊಡಗಿಸಲು ಉತ್ತೇಜಿಸುತ್ತೇನೆ ಮತ್ತು ಪ್ರತಿ ವರ್ಷ 100 ಗಂಟೆಗಳ ಕಾಲ ಅವರಿಂದ ಸ್ವಚ್ಚ ಭಾರತ ಅಭಿಯಾನದಲ್ಲಿ ದೇಶವನ್ನು ಸ್ವಚ್ಚವಾಗಿರಿಸಲು ಕಾರ್ಯ ನಿರ್ವಹಿಸುತ್ತೇನೆ. ನಾನು ಸಂಪೂರ್ಣ ನಂಬಿಕೆಯೊಂದಿಗೆ ನನ್ನ ದೇಶವನ್ನು Óಚ್ಛ ಭಾರತ ದೇಶವಾಗಿಸಲು ನನ್ನ ಪ್ರತಿ ಹೆಜ್ಜೆಯಲ್ಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವೇಣುಗೋಪಾಲ್, ಪ್ರಸನ್ನ ಪೂಜಾರಿ, ರವೀಂದ್ರನ್ ಉಪಸ್ಥಿತರಿದ್ದರು.