ಮಡಿಕೇರಿ :ಶಾಸಕರ ಸಂಖ್ಯಾ ಬಲದ ಕೊರತೆಯನ್ನು ಎದುರಿಸುತ್ತಿರುವ ರಾಜ್ಯದ ಮೈತ್ರಿ ಸರಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತತ್‌ಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿತು.
ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಜನರಲ್ ತಿಮ್ಮಯ್ಯ ವೃತ್ತದ ಬಳಿ ಸಮಾವೇಶಗೊಂಡು, ರಾಜ್ಯದ ಮೈತ್ರಿ ಸರಕಾರ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಬಿ.ಬಿ.ಭಾರತೀಶ್ ಮಾತನಾಡಿ, ಸಂಖ್ಯಾ ಬಲದ ಕೊರತೆ ಇದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿಯ ಮೂಲಕ ಕಳೆದ ಒಂದೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿವೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಸರ್ಕಾರ ಇತ್ತೋ ಇಲ್ಲವೋ ಎನ್ನುವುದೇ ಅರಿವಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆಯೆಂದು ಲೇವಡಿ ಮಾಡಿದರು. ಮೈತ್ರಿ ಸರಕಾರದ ಇಲ್ಲಿಯ ವರೆಗಿನ ಆಡಳಿತದಲ್ಲಿ ಅವರೊಳಗಿನ ಭಿನ್ನಾಭಿಪ್ರಾಯ, ಒಳಜಗಳಗಳೇ ಪ್ರಮುಖ ವಿಷಯ ಗಳಾಗಿ ಗೋಚರಿಸಿದೆ ಎಂದು ಟೀಕಿಸಿದರು.
ರಾಜ್ಯದ ಇತಿಹಾಸದಲ್ಲೆ ಇಂತಹ ಒಂದು ಕೆಟ್ಟ ಸರಕಾರವನ್ನು ಜನತೆ ಎಂದೂ ನೋಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಭಾರತೀಶ್, ಪಕ್ಷದ ಶಾಸಕರುಗಳನ್ನೆ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಹೆಚ್.ಡಿ.ಕುಮಾರಸ್ವಾಮಿ ಅವರು ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಿಎಂ ಸ್ಥಾನ ತ್ಯಜಿಸುವವರೆಗೂ ಬಿಜೆಪಿಯಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ವಿ.ಕೆ.ಲೋಕೇಶ್, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪಕ್ಷದ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಅನಿತಾ ಪೂವಯ್ಯ, ಡೀನ್ ಬೋಪಣ್ಣ, ಕೊಮಾರಪ್ಪ, ಮೋಹನ್ ಮೊಣ್ಣಪ್ಪ, ಮನು ಮಹೇಶ್, ರವಿ ಬಸಪ್ಪ, ಅಶ್ವತ್ಥ್, ಐ.ಜಿ.ಶಿವಕುಮಾರಿ, ಎಂ.ಕೆ.ಅರುಣ್ ಕುಮಾರ್, ಸುಭಾಷ್ ಸೋಮಯ್ಯ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.