Advertisement

ಸಾವಯವ ಕೃಷಿಕ ಹನುಮಂತಪ್ಪಗೆ ಜಿಲ್ಲಾ ಪ್ರಶಸ್ತಿ

12:56 PM Sep 18, 2022 | Team Udayavani |

ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮದ ಸಾವಯವ ಯುವ ಕೃಷಿಕ ಹನುಮಂತಪ್ಪ ಜಿ. ಚಿಂಚಲಿ ಅವರು ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.18 ರಂದು ಧಾರವಾಡದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Advertisement

ಹನುಮಂತಪ್ಪನ ಕೃಷಿ ಸಾಧನೆ: ಕೃಷಿಯನ್ನೇ ಬದುಕಾಗಿಸಿ ಕೊಂಡಿರುವ ಕುಟುಂಬದವರಾದ ಹನುಮಂತಪ್ಪ ಅವರು ಓದಿದ್ದು ಎಸ್‌ಎಸ್‌ಎಲ್‌ಸಿ ವರೆಗೆ ಮಾತ್ರ. ಮನೆಯಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ತಂದೆಯ ಸಲಹೆಯಂತೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಸ್ವಂತ 30 ಎಕರೆ ಜಮೀನು ಹೊಂದಿರುವ ಅವರು ಕೃಷಿ ಮೇಲಿನ ಪ್ರೀತಿ, ಆಸಕ್ತಿಯಿಂದ ಕೃಷಿಯಲ್ಲಿಯೇ ಉತ್ತಮ ಸಾಧನೆ ಮಾಡುವ ಮೂಲಕ “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬುದನ್ನು ಸಾಬೀತುಪಡಿಸಿದ್ದಾರೆ.

30 ಎಕರೆ ಕಪ್ಪು ಮಣ್ಣಿನ ಜಮೀನಿನಲ್ಲಿ ಸಾವಯುವ ಕೃಷಿಗೆ ಅಣಿಯಾಗಿರುವ ಅವರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಅವಶ್ಯಕ ಸಂದರ್ಭದಲ್ಲಿ ಬೆಳೆಗಳಿಗೆ ಹನಿ ನೀರಾವರಿ ಮೂಲಕ ಕೃಷಿ ಬೆಳೆ ಮತ್ತು ತರಕಾರಿ ಬೆಳೆಯುತ್ತಾರೆ. ಮಣ್ಣಿನ ಸವಕಳಿ ತಡೆಗಾಗಿ ನರೇಗಾ ಯೋಜನೆಯಡಿ, ಟ್ರ್ಯಾಕ್ಟರ್ ಮೂಲಕ ಮಳೆ ನೀರು ಕೊಯ್ಲು, ಇಳಿಜಾರು ಬದು ನಿರ್ಮಾಣ ಮಾಡಿ ಕೊಳ್ಳುತ್ತಾರೆ. ಅಲ್ಲದೇ, ಜಮೀನಿನ ಬದುವುಗಳಲ್ಲಿ ಬೇವು, ಹೆಬ್ಬೇವು, ಬನ್ನಿ, ಹೊಂಗೆ ಮರಗಳನ್ನು ಬೆಳೆಸಿದ್ದಾರೆ.

ಸಾವಯುವ ಕೃಷಿ: ರಾಸಾಯನಿಕ ಗೊಬ್ಬರ-ಕ್ರಿಮಿನಾಶಕ ಬಳಸದ ಇವರು ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡುತ್ತಾರೆ. ಅದಕ್ಕಾಗಿ ಕೃಷಿ ವಿವಿಯಿಂದ ತರಬೇತಿ ಪಡೆದು ತಾವು ಸಾಕಿರುವ ದೇಶಿ ಆಕಳು, ಎತ್ತುಗಳಿಂದ ಗೊಬ್ಬರ ತಯಾರಿಸಿ ಭೂಮಿಯ ಫಲವತ್ತತೆ ಹೆಚ್ಚಿಸುತ್ತಾರೆ. ‌

“ಭೂಮಿ ತಾಯಿ ಕೂಡ ಆಡಿದ್ರ ಕೇಡಿಲ್ಲ’ ಎಂಬ ಹಿರಿಯರ ಮಾತನ್ನು ಬಲವಾಗಿ ನಂಬಿದ್ದೇನೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ವೆಚ್ಚ ಬಹಳಷ್ಟು ಕಡಿಮೆ ಮಾಡಿಕೊಂಡಿದ್ದೇನೆ. ಮಣ್ಣಿನ ಫಲವತ್ತತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ, ಮನೆಯವರೆಲ್ಲ ಕಾಯಾ, ವಾಚಾ, ಮನಸಾ ಸಂಪೂರ್ಣ ಕೃಷಿಯಲ್ಲೇ ತೊಡಗಿಸಿಕೊಂಡಿದ್ದರಿಂದ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ-ಸಹಕಾರದಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ.  –ಹನುಮಂತಪ್ಪ ಚಿಂಚಲಿ, ಜಿಲ್ಲಾ ಶ್ರೇಷ್ಠ ಕೃಷಿಕ

Advertisement

ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ಅತ್ಯಂತ ಆಸಕ್ತಿಯಿಂದ ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಕಳೆದ ವರ್ಷ ತುಕ್ಕು ರೋಗದ ನಡುವೆಯೂ ಉತ್ತಮ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿಯ ನಡುವೆಯೂ ತಕ್ಕ ಮಟ್ಟಿಗಾದರೂ ಬೆಳೆ ತೆಗೆದು ಕೃಷಿಯಲ್ಲಿ ಲಾಭ ಮಾಡಿಕೊಳ್ಳುತ್ತಾರೆ. ಬಹು ಬೆಳೆ ಪದ್ಧತಿ, ಮಿಶ್ರ ಕೃಷಿ ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ. -ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next