Advertisement

ಖಾಯಂ ಸಿಬಂದಿ ನೇಮಕಕ್ಕೆ ಜಿಲ್ಲಾಸ್ಪತ್ರೆಯಿಂದ ಪ್ರಸ್ತಾವನೆ

11:16 AM Sep 10, 2019 | Team Udayavani |

ಉಡುಪಿ: ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆದೇಶವಾಗಿ ಸುಮಾರು 18 ವರ್ಷ ಕಳೆದರೂ ಅಗತ್ಯವಿರುವ ಸಿಬಂದಿ ಭರ್ತಿಯಾಗದ ಹಿನ್ನೆಲೆ ಜಿಲ್ಲಾಸ್ಪತ್ರೆಯಿಂದ ಹೆಚ್ಚುವರಿ ಸಿಬಂದಿ ನೇಮಕಾತಿ ಪ್ರಸ್ತಾವನೆ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದೆ.

Advertisement

ಹೆಸರು ಮಾತ್ರ ಬದಲಿ

1997ರ ಆಗಸ್ಟ್‌ ತಿಂಗಳಲ್ಲಿ ನೂತನವಾಗಿ ರಚನೆಯಾದ 7 ಜಿಲ್ಲೆಗಳಲ್ಲಿ ಒಂದಾದ ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಜಿಲ್ಲಾ ಮಟ್ಟದ ಸ್ಥಾನ ನೀಡಿ, ಅಗತ್ಯವಿರುವ ಸಿಬಂದಿಯನ್ನು ನೇಮಕ ಮಾಡಿದೆ. ಆದರೆ ಸರಕಾರ ಜಿಲ್ಲಾಸ್ಪತ್ರೆಯಾಗಿ ಬದಲಾದ ಈ ತಾಲೂಕು ಕೇಂದ್ರದ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬಂದಿ ನೇಮಕ ಮಾಡಲು ಮನಸ್ಸು ಮಾಡಿಲ್ಲ.

ಜಿಲ್ಲಾಸ್ಪತ್ರೆಗೆ ತಾಲೂಕು ವ್ಯವಸ್ಥೆ !

2001ರ ಸರಕಾರಿ ಆದೇಶದ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆ ಹಾಗೂ 195 ಮಂದಿ ಸಿಬಂದಿ ಇರಬೇಕು. ಆದರೆ ಪ್ರಸ್ತುತ ಜಿಲ್ಲಾಸ್ಪತ್ರೆ ಎನ್ನಿಸಿಕೊಂಡಿರುವ ಆಸ್ಪತ್ರೆಯಲ್ಲಿ ತಾಲೂಕು ಆಸ್ಪತ್ರೆಯಾಗಿರುವಾಗ ಮಂಜೂರಾದ 128 ಹುದ್ದೆಗಳಲ್ಲಿ ಕೇವಲ 76 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 50 ಹುದ್ದೆಗಳು ಖಾಲಿಯಿವೆ.

Advertisement

ಪ್ರಸ್ತಾವನೆಯಲ್ಲಿ ಏನಿದೆ?

ಜಿಲ್ಲಾಸ್ಪತ್ರೆಗೆ ಸರಕಾರಿ ಸೌಲಭ್ಯಗಳ ಜತೆಗೆ ಸರಕಾರೇತರ ಸಂಸ್ಥೆಗಳಿಂದ ಸುಟ್ಟ ಗಾಯಗಳ ವಿಭಾಗ, ಲಯನ್ಸ್‌ ಕೃತಕ ಅವಯವಗಳ ವಿಭಾಗ, ರಕ್ತಕಣಗಳ ವಿಭಜಕ ಕೇಂದ್ರ, ಸಿಬಿಎನ್‌ಎಎಟು ಯಂತ್ರ, ಎಆರ್‌ಟಿ ಸೆಂಟರ್‌ ತೆರೆಯಲಾಗಿದೆ. ಇದಕ್ಕೆ ಅವಶ್ಯವಿರುವ ತಜ್ಞರು, ಶುಶ್ರೂಷಕಿಯರು, ಕಿ.ಪ್ರಾ. ಶಾಲಾ ತಂತ್ರಜ್ಞರು ಕೊರತೆಯಿರುವ ಹುದ್ದೆ ಭರ್ತಿ ಮಾಡುವಂತೆ ಹಾಗೂ ಹೊಸ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು ಸಹ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.

ಯಾವ ಹುದ್ದೆ -ಎಷ್ಟು ಸಿಬಂದಿ?

ಮಂಜೂರಾದ ತಜ್ಞ ವೈದ್ಯರ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ 4, ಶಸ್ತ್ರ ಚಿಕಿತ್ಸಕರ 2, ಅರವಳಿಕೆ ತಜ್ಞ 1, ಎಲುಬು ಕೀಲು ತಜ್ಞ 2, ಚರ್ಮ ರೋಗ, ಇಎನ್‌ಟಿ, ಮಾನಸಿಕ ರೋಗ ತಜ್ಞ, ರೇಡಿಯಾಲಜಿ ತಲಾ 2, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 6, ಶುಶ್ರೂಷಕಿಯರು 25, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು 20 ಸೇರಿದಂತೆ ಒಟ್ಟು 68 ಸಿಬಂದಿ ನೇಮಕಾತಿ ಜಿಲ್ಲಾಸ್ಪತ್ರೆಯಿಂದ ಪ್ರಸ್ತಾವನೆ ಸಿದ್ಧವಾಗಿದೆ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next