ವರದಿ : ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ಮನಗೊಂಡ ಜಿಲ್ಲಾಡಳಿತ ಸೋಂಕಿತರ ಚಿಕಿತ್ಸೆಗಾಗಿ 270 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಗೆ ನಿರ್ಧರಿಸಿದೆ. ಇದಲ್ಲದೇ, ಕೋವಿಡ್‌ಗಾಗಿ ಸದ್ಯ ಕೊಪ್ಪಳ ಮೆಡಿಕಲ್ ಕಾಲೇಜಿನ 142 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಬೆಡ್‌ಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಜಿಲ್ಲೆಯಲ್ಲಿ ಮೊದಲ ಅಲೆ ಹಾಗೂ ಎರಡನೆ ಅಲೆಯಲ್ಲಿ ಆರಂಭಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಇರಲಿಲ್ಲ. ಕ್ರಮೇಣ ಸೋಂಕಿನ ಆರ್ಭಟವು ಜೋರಾಗುತ್ತಿದ್ದು, ಅದರೊಟ್ಟಿಗೆ ಸಾವಿನ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದು ಜನರಲ್ಲಿ ಆತಂಕ ತರಿಸುತ್ತಿದೆ. ಈಗಾಗಲೆ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬೆಡ್‌ಗಳೂ ಬಹುತೇಕ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಬೆಡ್‌ಗಳು ಭರ್ತಿಯಾಗಿದ್ದು ಕೆಳ ಹಾಗೂ ಮಧ್ಯಮ ವರ್ಗದ ಜನ ಸೋಂಕು ದೃಢಪಟ್ಟಾಗ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದರೆ ಬೆಡ್‌ಗಳೇ ಸಿಗುತ್ತಿಲ್ಲ. ಅತ್ತ ಖಾಸಗಿ ಆಸ್ಪತ್ರೆಗಳತ್ತ ಹೋಗಲು ಶುಲ್ಕಕ್ಕಾಗಿಯೇ ಹೆದರುತ್ತಿದ್ದಾರೆ. ಇದರಿಂದ ಬೆಡ್‌ಗಳ ಕೊರತೆಯೂ ಸೃಷ್ಟಿಯಾಗಿವೆ.
ಜಿಲ್ಲೆಯ ಸಮಸ್ಯೆ ಅರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಎರಡು ದಿನ ಜಿಲ್ಲೆಯಲ್ಲಿನ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೊಟ್ಟಿಗೆ ಜಿಲ್ಲೆಯ ಶಾಸಕ ಸಂಸದರು ವಿವಿಧ ಜನಪ್ರತಿನಿಧಿ ಗಳೂ ಸಹ ಪರಿಸ್ಥಿತಿ ನಿಯಂತ್ರಿಸಲು ಸಮಾಲೋಚನೆ ನಡೆಸಿ, ಸರ್ಕಾರಕ್ಕೆ 270 ಆಕ್ಸಿಜನ್ ಬೆಡ್‌ಗಳ ಆರಂಭಕ್ಕೂ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಜಿಲ್ಲಾಡಳಿತವು ಸರ್ಕಾರಕ್ಕೆ ಬೆಡ್‌ಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜೊತೆಗೆ ಬೆಡ್‌ಗಳಿಗೆ ಅಗತ್ಯಕ್ಕನುಗುಣವಾಗಿ 3 ಕೆ.ಎಲ್ ಆಕ್ಸಿಜನ್ ಬಳಕೆಗೂ ಸರ್ಕಾರಕ್ಕೆ ಅನುಮತಿ ಕೇಳಿದೆ.
ಎಲ್ಲೆಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ?: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್, ಕೊಪ್ಪಳದ ಗವಿಸಿದ್ದೇಶ್ವರ ಆರ್ಯುವೇದ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್, ಮುನಿರಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಬೆಡ್, ತಾವರಗೇರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಬೆಡ್, ಹನುಮಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ 30 ಬೆಡ್, ಶ್ರೀರಾಮನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಬೆಡ್ ಸೇರಿದಂತೆ ಒಟ್ಟು 270 ಆಕ್ಸಿಜನ್ ಬೆಡ್‌ಗಳು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿವೆ.
ಮೆಡಿಕಲ್ ವಿದ್ಯಾರ್ಥಿಗಳ ಬಳಕೆ: ಇನ್ನೂ ಜಿಲ್ಲೆಯಲ್ಲಿಯೇ ಮೆಡಿಕಲ್ ಕಾಲೇಜು ಇದ್ದು, ಕಾಲೇಜಿನ ಅಂತಿಮ ವರ್ಷದ 142 ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತವು ನಿರ್ಧರಿಸಿದೆ. ಇಂದು ಜಿಲ್ಲೆಗೆ ಒಂದು ರೀತಿಯ ವರದಾನವಾಗಿದೆ. ಮೊದಲೇ ವೈದ್ಯರ ಕೊರತೆಯಿಂದ ನರಳುತ್ತಿದ್ದ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳು ನೂರೆಂಟು ಸಮಸ್ಯೆ ಎದುರಿಸುತ್ತಿದ್ದವು, ಕೋವಿಡ್ ನಿರ್ವಹಣೆಯು ಯುದೊœàಪಾದಿಯಲ್ಲಿ ಮಾಡಬೇಕಾದ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಿಸಲು 142 ವಿದ್ಯಾರ್ಥಿಗಳ ಬಳಕೆಗೆ ಮುಂದಾಗಿದೆ.
ತುರ್ತಾಗಿ ನಡೆಯಬೇಕಿದೆ ಬೆಡ್ ಅಳವಡಿಕೆ: ಸೋಂಕಿನ ಪ್ರಮಾಣ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇನೋ 270 ಬೆಡ್‌ಗಳ ವ್ಯವಸ್ಥೆಗೆ ಮುಂದಾಗಿದೆ. ಆದರೆ ಆ ಎಲ್ಲ ಬೆಡ್ ಗಳು ಇದ್ದರೂ ಆಕ್ಸಿಜನ್ ಅಳವಡಿಕೆಗೆ ಕಾಲವಕಾಶ ಬೇಕಿದೆ. ಸದ್ಯದ ಪರಿಸ್ಥಿತಿ ಅರಿತು ಜಿಲ್ಲಾಡಳಿತವು ತುರ್ತಾಗೆ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿದರೆ ಕನಿಷ್ಟ ನಿತ್ಯವೂ ಬೆಡ್, ಆಕ್ಸಿಜನ್ ಇಲ್ಲದೇ ಜನರು ಸಾವನ್ನಾದರೂ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಕಾರ್ಯ ವೇಗವಾಗಬೇಕಿದೆ.