ಕೊಪ್ಪಳ: ಕೋವಿಡ್‌ನಿಂದ ಬೇಸತ್ತಿರುವ ಜನತೆಗೆ ಓದುವ ಹವ್ಯಾಸ ರೂಢಿಸಲು ಜಿಲ್ಲಾಡಳಿತ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯರಿಗೆ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಿದೆ.
ನಿರ್ದಿಷ್ಟ ಪುಸ್ತಕಗಳ ಮಾಹಿತಿ ನೀಡಿ ಓದಲು ಸಮಯ ನೀಡಲಾಗುತ್ತದೆ. ಇದಾದ ಬಳಿಕ ಪುಸ್ತಕದ ಕುರಿತು ವಿಮರ್ಶೆ ಬರೆಯಬೇಕು. ಉತ್ತಮ ವಿಮರ್ಶೆಗೆ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ನೀಡಲಾಗುತ್ತದೆ. ಎರಡು ವರ್ಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.
ಕೋವಿಡ್ ಸಂಕಷ್ಟದ ಸಮಯ ಹಾಗೂ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯರು ಓದುವ ಹವ್ಯಾಸ ಬೆಳೆಸಿಕೊಳ್ಳುವಂತಾಗಲಿ. ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸಲು ಓದುಗರ ವೇದಿಕೆ ಸೃಷ್ಟಿ ಮಾಡುವುದು. ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ಮೂಲಕ ಜಗತ್ತಿನ ತಿಳಿವಳಿಕೆ ಮತ್ತು ಮನುಷ್ಯರ ಸಂಬಂಧಗಳ ಬಗ್ಗೆ ಒಳನೋಟವನ್ನು ಕಲಿಸುವುದು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವುದು ಸೇರಿದಂತೆ ಮೊದಲಾದ ಉದ್ದೇಶಗಳು ಈ ಮನ್ವಂತರದಲ್ಲಿ ಅಡಗಿದೆ.
18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಹಾಗೂ 18 ವರ್ಷ ಮೇಲ್ಪಟ್ಟವರನ್ನು ಸಾಮಾನ್ಯ ವರ್ಗ ಎಂದು ಗುರುತಿಸಲಾಗುತ್ತದೆ. ಉಳಿದಂತೆ ಯಾವುದೇ ಷರತ್ತುಗಳಿಲ್ಲವಾದ್ದರಿಂದ ಯಾರಾದರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆ. 10ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ. 25ರೊಳಗಾಗಿ ವಿಮರ್ಶೆ ಕಳುಹಿಸಿಕೊಡಬೇಕು. ಆ. 25ರಿಂದ ಸೆ. 10ರ ವರೆಗೂ ತಾಲೂಕು ಮಟ್ಟದ ಮೌಲ್ಯಮಾಪನ, ಜಿಲ್ಲಾಮಟ್ಟದ ಮೌಲ್ಯಮಾಪನ, ಕೊನೆಯಲ್ಲಿ ಆಯ್ದ 20 ವಿಮರ್ಶಕರ ಸಂದರ್ಶನ ನಡೆಯುತ್ತದೆ. ಖುದ್ದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರೇ ಸಂದರ್ಶನ ನಡೆಸುತ್ತಾರೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊದಿಗೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ.
ವಿದ್ಯಾರ್ಥಿಗಳ ವಿಭಾಗದಲ್ಲಿ: ಚೋಮನದುಡಿ – ಡಾ| ಕೆ. ಶಿವರಾಮ ಕಾರಂತ, ಮಹಾಶ್ವೇತ – ಸುಧಾ ಮೂರ್ತಿ, ಸ್ವಾಮಿ ಮತ್ತು ಸ್ನೇಹಿತರು-ಆರ್. ಕೆ. ನಾರಾಯಣ್, ಮೆಲಹು(ಇಂಗ್ಲಿಷ್) ಅಮೀಶ್ ತ್ರಿಪಾಠಿ, ದಿ ವೈಟ್ ಟೈಗರ್ (ಇಂಗ್ಲಿಷ್) ಅರವಿಂದ ಅಡಿಗ ಅವರ ಪುಸ್ತಕಗಳಿವೆ.
ಸಾಮಾನ್ಯರ ವಿಭಾಗದಲ್ಲಿ: ಬೆಟ್ಟದ ಜೀವ-ಡಾ| ಕೆ. ಶಿವರಾಮ ಕಾರಂತ, ವಂಶವೃಕ್ಷ-ಎಸ್.ಎಲ್. ಭೈರಪ್ಪ, ಆಡಾಡತ ಆಯುಷ್- ಗಿರೀಶ್ ಕಾರ್ನಾಡ್, ಬಾರ್ನ್ ಎ ಕ್ರೆ„ಮ್ – ಟ್ರೈವರ್ ನೋಹ, ಶೂ ಡಾಗ್ – ಫಿಲ್ ನೈಟ್ ಈ ಪುಸ್ತಕಗಳಿಗೆ ವಿಮರ್ಶೆ ಬರೆಯಬಹುದಾಗಿದೆ.
ನೋಂದಾಯಿಸಿಕೊಳ್ಳುವುದು ಹೇಗೆ?: ತಮ್ಮ ಹೆಸರು, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆಯ ಜೊತೆಗೆ ವಿವರಗಳೊಂದಿಗೆ 8792011835 ಸಂಖ್ಯೆಗೆ ನೋಂದಣಿ ಮಾಡಿಕೊಳ್ಳಬೇಕು. ಬರವಣೆಗೆಯನ್ನು ಟೈಪ್ ಮಾಡಿ ಅಥವಾ ಪಿಡಿಎಫ್ ಮಾಡಿ, ಇದೇ ಸಂಖ್ಯೆಗೆ ಕಳುಹಿಸಿಕೊಡಬೇಕು.
ಜನರು ಕೋವಿಡ್ ವಿಷಯ ಕೇಳಿ ಕೇಳಿ ಬೇಸತ್ತಿದ್ದಾರೆ. ಅದರಿಂದ ಹೊರ ಬರಲು ಹಾಗೂ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲು ಜಿಲ್ಲಾಡಳಿತದಿಂದಲೇ ಮನ್ವಂತರ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯರಿಗೆ ವೇದಿಕೆ ಕಲ್ಪಿಸಿ ಪುಸ್ತಕಗಳಿಗೆ ವಿಮರ್ಶೆ ಬರೆಯುವ ಅವಕಾಶ ಕಲ್ಪಿಸಲಾಗುತ್ತಿದ್ದು, ಅದಕ್ಕೆ ಸೂಕ್ತ ಬಹುಮಾನವೂ ಇದೆ. –
ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ