ಮಂಗಳೂರು: ನಗರದ ನಾಗರಿಯಲ್ಲಿ ಕಳೆದ ಶನಿವಾರ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಪರಿಹಾರ ನೀಡಲು ಸರಕಾರಕ್ಕೆ ಜಿಲ್ಲಾಡಳಿತ ಶಿಫಾರಸ್ಸು ಮಾಡಲಿದೆ ಎಂದು ದ.ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದ್ದಾರೆ.
25 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿರುವ ಪುರುಷೋತ್ತಮ ಪೂಜಾರಿ ಅವರು ಮಂಗಳೂರಿನ ಗೋರಿಗುಡ್ಡದಲ್ಲಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹಿರಿಯ ಮಗಳು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಕಿರಿಯ ಮಗಳು ಸಿಎ ಪರೀಕ್ಷೆ ಬರೆದಿದ್ದಾರೆ. ಪತ್ನಿ ಮನೆ ನಿರ್ವಹಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕರಾವಳಿಯಲ್ಲಿ ಎನ್ಐಎ ಘಟಕ ಆರಂಭಕ್ಕೆ ಸಂಸತ್ ನಲ್ಲಿ ವಿಷಯ ಪ್ರಸ್ತಾಪ: ತೇಜಸ್ವಿ ಸೂರ್ಯ
ಕುಟುಂಬಕ್ಕೆ ಆಟೋ ರಿಕ್ಷಾವೇ ಪ್ರಮುಖ ಆಧಾರವಾಗಿತ್ತು. ರಿಕ್ಷಾದಲ್ಲಿ ದುಡಿದೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಘಟನೆಯಿಂದ ಆಟೋಗೆ ಹಾನಿಯಾಗಿರುವುದು ಮಾತ್ರವಲ್ಲದೆ, ತನಿಖೆ ಕಾರಣಕ್ಕಾಗಿ ಸದ್ಯ ಪೊಲೀಸರು ವಾಪಸು ನೀಡುವ ಸಾಧ್ಯತೆ ಕಡಿಮೆ. ಹಿರಿಯ ಮಗಳಿಗೆ ಮದುವೆ ಕೂಡ ನಿಶ್ಚಯ ಆಗಿದ್ದು ಇಂತಹ ಸಂದರ್ಭದಲ್ಲೇ ಘಟನೆ ನಡೆದಿರುವುದು ಕುಟುಂಬವನ್ನು ಕಂಗೆಡುವಂತೆ ಮಾಡಿದೆ.