Advertisement

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಿಸಿವಿ ಲಸಿಕೆ ವಿತರಣೆ

10:10 AM Nov 19, 2021 | Team Udayavani |

ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಮೊದಲ ಬಾರಿಗೆ ನ್ಯುಮೋನಿಯಾ ಅಪಾಯ ಕಡಿಮೆ ಮಾಡುವ ನ್ಯೂಮೋಕಾಕಲ್‌ ಕಾಂಜುಗೇಟ್‌ ಲಸಿಕೆ (ಪಿಸಿವಿ) ನೀಡಿಕೆಗೆ ಗುರುವಾರ ಚಾಲನೆ ನೀಡಲಾಯಿತು.

Advertisement

ಇಲ್ಲಿನ ಶಿವಾಜಿನಗರದ ನಗರ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ದಿಲೀಷ್‌ ಸಸಿ ಅವರು, ತಾಜ್‌ ನಗರದ ವೈದ್ಯಾಧಿಕಾರಿ ಡಾ| ವೇಣುಗೋಪಾಲ್‌ ಅವರ ಒಂದೂವರೆ ತಿಂಗಳ ಗಂಡು ಮಗುವಿಗೆ ಪಿಸಿವಿ ಲಸಿಕೆ ಹಾಕುವ ಮೂಲಕ ಚಾಲನೆ ಕೊಟ್ಟರು.

ನಂತರ ಮಾತನಾಡಿದ ಅವರು, ಒಂದೂವರೆ ತಿಂಗಳ ಮಗುವಿಗೆ ಡಿಪಿಟಿ ಲಸಿಕೆಯೊಂದಿಗೆ ಪಿಸಿವಿ (ನ್ಯುಮೋನಿಯಾ) ಲಸಿಕೆ ಹಾಕಿಸಬೇಕು. ಈ ಲಸಿಕೆ ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದರು.

ಪಿಸಿವಿ ಲಸಿಕೆ ಹಾಕಿಸಿದಲ್ಲಿ ನಿಮ್ಮ ಮಗುವಿನಲ್ಲಿ ನ್ಯುಮೋನಿಯಾದ ಅಪಾಯ ಕಡಿಮೆ ಮಾಡುತ್ತದೆ. ಅಲ್ಲದೇ, ಮೆನಿಂಜೈಟಿಸ್‌ ಹಾಗೂ ಕಿವಿ ಸೋಂಕುಗಳಿಂದಲೂ ರಕ್ಷಿಸುತ್ತದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ನ್ಯೂಮೋಕಾಕಲ್‌ ಕಾಂಜುಗೇಟ್‌ ಲಸಿಕೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಸಿಇಒ ಬಿಡುಗಡೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ| ಲಕ್ಷ್ಮೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರಣ ಬಸಪ್ಪ ಗಣಜಲಖೇಡ್‌, ಉಪನಿರ್ದೇಶಕ ಡಾ| ಹಬೀಬ್‌ ಉಸ್ಮಾನ್‌, ಆರ್‌ಸಿಎಚ್‌ ಅಧಿಕಾರಿ ಡಾ| ಪ್ರಭುಲಿಂಗ ಮಾನಕರ, ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒ ಡಾ| ಅನಿಲ ತಾಳಿಕೋಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಕುಮಾರ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಾರುತಿ ರಾವ್‌, ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ| ಎಸ್‌.ಎಂ.ಸಂಧ್ಯಾರಾಣಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next